ಕೊಪ್ಪ: 'ಧರ್ಮದ ಮೇಲೆ ದಾಳಿ ಮಾಡುವ ಮಾನಸಿಕ ಭಯೋತ್ಪಾದಕರಿಗೆ ತಕ್ಕ ಉತ್ತರ ಕೊಡಬೇಕಿದೆ’ ಎಂದು ಎನ್.ಆರ್.ಪುರ ಬಸ್ತಿಮಠದ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು.
ಧರ್ಮಸ್ಥಳಕ್ಕೆ ಕಳಂಕ ತರಲು ಒಳ ಸಂಚು ನಡೆಸಿದ್ದಾರೆ ಎಂದು ಪುಣ್ಯಕ್ಷೇತ್ರ ಸಂರಕ್ಷಣಾ ಹೋರಾಟ ಸಮಿತಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.
‘ನಮಗೆ ವೀರೇಂದ್ರ ಹೆಗ್ಗಡೆ ಅವರ ಮೇಲೆ, ಧರ್ಮಸ್ಥಳ ಕ್ಷೇತ್ರದ ಮೇಲೆ ನಂಬಿಕೆ ಇದೆ. ಆರೋಪ ಷಡ್ಯಂತ್ರವಲ್ಲದೇ ಬೇರೇನೂ ಅಲ್ಲ. ಭಗವಂತನ ನ್ಯಾಯಾಲಯದಲ್ಲಿ ಎಂದೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ' ಎಂದರು.
'ಧರ್ಮದ ಮೇಲಿನ ಆಕ್ರಮಣವು ತಲೆ ತಲಾಂತರದಿಂದ ನಡೆದು ಬರುತ್ತಿದೆ. ಸೋಮನಾಥೇಶ್ವರ ದೇವಸ್ಥಾನದ ಮೇಲೆ 17 ಬಾರಿ ದಾಳಿಯಾದರೂ ಸಹ ದೇವಸ್ಥಾನವನ್ನು ಕಟ್ಟಿದ್ದೇವೆ. ಧರ್ಮಸ್ಥಳದಲ್ಲಿ ಬುರುಡೆ ಮೂಲಕ ಷಡ್ಯಂತ್ರ ಮಾಡಿ ಅಪಪ್ರಚಾರ ಮಾಡಲು ಮುಂದಾದವರು ಎನ್.ಆರ್.ಪುರದ ಜ್ವಾಲಾಮಾಲಿನಿ ದೇವಿಯವರ ವಿರುದ್ಧ ಸಹ ನಕಲಿ ಹೋರಾಟಗಾರರು ಸಂಚಕಾರ ಮಾಡಿದ್ದರು’ ಎಂದರು.
'ಧರ್ಮ ವಿರೋಧಿ ಶಕ್ತಿಗಳು ಧರ್ಮಾಧಿಕಾರಿಯನ್ನು ವೀರೇಂದ್ರ ಜೈನ್ ಎಂದು ಏಕವಚನದಲ್ಲಿ ಮಾತನಾಡುತ್ತಿದ್ದಾರೆ. ಧರ್ಮ ಪೀಠಕ್ಕೆ, ಅವರ ವಯಸ್ಸಿಗೆ ಗೌರವ ಕೊಡುವುದು ಬೇಡವೇ? ಅಹಿಂಸಾ ತತ್ವ ಪಾಲಿಸುವವರಾಗಿದ್ದರಿಂದ ಹೆಗ್ಗಡೆಯವರು ಮಾತನಾಡದೆ ಸುಮ್ಮನಿದ್ದರು. ಧರ್ಮಸ್ಥಳಕ್ಕೆ ಕಳಂಕ ಬಂದ ಮೇಲೆ ಹಿಂದೂ ಸಮಾಜ, ಧರ್ಮ ಗುರುಗಳು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದರು. ಆದರೆ, ಈಗ ಸತ್ಯ ಗೊತ್ತಾಗುವ ಕಾಲ ಹತ್ತಿರದಲ್ಲಿದೆ. ಧರ್ಮಸ್ಥಳ ಕ್ಷೇತ್ರಕ್ಕೆ ಕಳಂಕ ತರಲು ಮುಂದಾದರೆ ಮುಖ್ಯಮಂತ್ರಿಯವರ ಮೇಲೆ ಭಕ್ತರು ಆಕ್ರೋಶಗೊಳ್ಳುತ್ತಾರೆ' ಎಂದು ತಿಳಿಸಿದರು.
ಮಾಜಿ ಶಾಸಕ ಡಿ.ಎನ್.ಜೀವರಾಜ್ ಅವರು ಮಾತನಾಡಿ, 'ಧರ್ಮಸ್ಥಳ ಮಾತ್ರವಲ್ಲ, ಹಿಂದೂ ಶ್ರದ್ಧಾಕೇಂದ್ರದ ಮೇಲೆ ನಿರಂತರ ದಾಳಿ ಷಡ್ಯಂತ್ರ ನಡೆಯುತ್ತಿದೆ. ನಮ್ಮ ದೇಶ ನಿಂತಿರುವುದು ಭಾವನೆಗಳ ಮೇಲೆ. ಭಾವನೆಗಳಿಲ್ಲದೆ ಈ ದೇಶವಿಲ್ಲ. ಹಾಗಾಗಿ ಇಂದಿಗೂ ಸಹ ದೇಶ ಸದೃಢವಾಗಿದೆ. ಭಾವನೆಗಳನ್ನು ಒಡೆಯಲು ಕುತಂತ್ರಿಗಳು ಮುಂದಾಗಿದ್ದಾರೆ' ಎಂದರು.
'ಸೌಜನ್ಯ ಹತ್ಯೆ ಪ್ರಕರಣ ನಿಜಕ್ಕೂ ದುಖಃಕರ. ಆದರೆ ಈ ಹೆಣ್ಣುಮಗಳಿಗೆ ನ್ಯಾಯ ದೊರಕಿಸಬೇಕು ಎನ್ನುವ ಹೋರಾಟಗಾರರ ಆರ್ಥಿಕ ಸ್ಥಿತಿ ಹಿಂದೆ ಹೇಗಿತ್ತು. ಈಗ ಹೇಗಾಗಿದೆ. ಇದೇ ಹೋರಾಟಗಾರರು ಕೊಲೆಗಾರನನ್ನು ಜೈಲಿನಿಂದ ಬಿಡಿಸಲು ಮುಂದೆ ಬಂದಿದ್ದರು. ಈ ಹಿಂದೆ ಮಂಗಳೂರಲ್ಲಿ ಜಿಲ್ಲಾಧಿಕಾರಿಯಾಗಿದ್ದ ವ್ಯಕ್ತಿಯೊಬ್ಬರು, ಕೇರಳ ಸರ್ಕಾರಕ್ಕೆ ಪತ್ರ ಬರೆದು ಧರ್ಮಸ್ಥಳದಲ್ಲಿ ತನಿಖೆಗೆ ಕೋರಿದ್ದಾರೆ. ಇದರ ಹಿಂದಿನ ಉದ್ದೇಶವನ್ನು ಪ್ರಜ್ಞಾವಂತರಾದ ನಾವು ತಿಳಿದುಕೊಳ್ಳಬೇಕು' ಎಂದರು.
'ಕೊಪ್ಪದ ನಾಯಕಿಯೊಬ್ಬರು ರಾಜ್ಯಸಭಾ ಸ್ಥಾನಕ್ಕೆ ವೀರೇಂದ್ರ ಹೆಗ್ಗಡೆ ರಾಜೀನಾಮೆ ಕೊಡಬೇಕು ಎಂದು ಹೇಳಿದ್ದಾರೆ. ವೀರೇಂದ್ರ ಹೆಗಡೆ ಅವರು ಸರ್ಕಾರ ಮಾಡಲಾಗದಂತಹ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಸೌಜನ್ಯ ಸಾವಿಗೆ ನ್ಯಾಯ ಕೇಳುವವರು ಕೊಪ್ಪದ ವಸತಿ ಶಾಲೆಯಲ್ಲಿ ಮೃತರಾದ ಇಬ್ಬರು ವಿದ್ಯಾರ್ಥಿನಿಯರ ಸಾವಿಗೂ ನ್ಯಾಯ ಕೇಳಿ' ಎಂದು ಒತ್ತಾಯಿಸಿದರು.
'ಬುರುಡೆ ಹಿಡಿದುಕೊಂಡು ಕೋರ್ಟ್‌ಗೆ ಹೋದಾಗ ಸುಮೊಟೊ ದಾಖಲಿಸಿ, ಬಂಧಿಸಿ ತನಿಖೆ ಮಾಡಬೇಕಿತ್ತು. ಯೂಟ್ಯೂಬರ್‌ಗೆ ಹಣ ಎಲ್ಲಿಂದ ಬರುತ್ತಿದೆ. ಸಾಕ್ಷಿ ದೂರುದಾರನನ್ನು ಮಂಪರು ಪರೀಕ್ಷೆ ಮಾಡಿಸಿ, ಆಗ ಸತ್ಯ ಹೊರಬರುತ್ತದೆ. ನೀವು ಅಗೆಯಬೇಕಿದ್ದರೆ ದತ್ತಪೀಠದಲ್ಲಿ ಗೋರಿಗಳನ್ನು ಅಗೆದು ಸ್ಥಳಾಂತರ ಮಾಡಿ. ಸುಳ್ಳು ಆರೋಪಗಳನ್ನು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ದೇಶದಾದ್ಯಂತ ಉಗ್ರ ಹೋರಾಟ ನಡೆಯಲಿದೆ' ಎಂದು ಎಚ್ಚರಿಸಿದರು.
ಸಾಮಾಜಿಕ ಹೋರಾಟಗಾರ ವಸಂತ್ ಗಿಳಿಯಾರ್ ಮಾತನಾಡಿ, 'ಇಶಾ ಫೌಂಡೇಶನ್, ಶಬರಿಮಲೆ, ತಿರುಪತಿ ಮೇಲೆ ದಾಳಿಗಳನ್ನು ಮಾಡುತ್ತ ಬಂದಿದ್ದಾರೆ. ಇದರ ಸಂಚುಕೋರರು ಎಡಪಂಥೀಯರು. ಸಮೀರ್ ಎಂಬಾತ ಎಐ ವಿಡಿಯೋ ಮಾಡಿ ಸುಳ್ಳು ಪ್ರಚಾರದಲ್ಲಿ ತೊಡಗಿಸಿಕೊಂಡ. ಮಹಿಳೆಯರು ವಿವೇಚನಾ ಶಕ್ತಿ ಕಳೆದುಕೊಂಡು ಧರ್ಮಸ್ಥಳ ವಿರುದ್ಧ ರೀಲ್ಸ್ ಮಾಡಿ ಅಪಪ್ರಚಾರ ಮಾಡಿದರು' ಎಂದರು.
'ಸೌಜನ್ಯ ಪ್ರಕರಣದ ಆರೋಪಿ ಸಂತೋಷ್ ಶೃಂಗೇರಿಯ ಹೋಟೇಲ್‌ನಲ್ಲಿ ರವಿ ಎಂಬ ಹೆಸರಿನಲ್ಲಿ ಕೆಲಸ ಮಾಡಿಕೊಂಡಿದ್ದ. ಸಂತೋಷ್ ಅಪರಾಧಿ ಅಲ್ಲ ಎಂದು ನಿರಂತರವಾಗಿ ಕೆಲಸ ಮಾಡಿ ವ್ಯವಸ್ಥಿತ ಸಂಚು ರೂಪಿಸಿ ಧರ್ಮಸ್ಥಳದ ಮೇಲೆ ಷಡ್ಯಂತ್ರ ಮಾಡಿ ಸೌಜನ್ಯ ಪ್ರಕರಣವನ್ನು ಧರ್ಮಸ್ಥಳದ ವಿರುದ್ದ ತಿರುಗಿಸಿದರು' ಎಂದರು.
'ಧರ್ಮಸ್ಥಳದಲ್ಲಿ ಗುಂಡಿ ಅಗೆಸಿದರು ಸಹ ಒಂದು ದೇಹ ಪತ್ತೆಯಾಗಿಲ್ಲ. ಎಸ್ಐಟಿ ತನಿಖೆ ಆರಂಭವಾಗಿದೆ. ಈಗ ಬಣ್ಣ ಬಯಲಾಗಿದೆ. ಇಂದು ಜನರು ಜಾಗೃತರಾಗಿ ಷಡ್ಯಂತ್ರದ ವಿರುದ್ಧ ಬೀದಿಗೆ ಇಳಿದಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಷಡ್ಯಂತ್ರವನ್ನು ಬಯಲು ಮಾಡುತ್ತೇವೆ ಎಂದಿದ್ದಾರೆ. ಮುಖ್ಯಮಂತ್ರಿ ಹಾಗು ಉಪ ಮುಖ್ಯಮಂತ್ರಿ ಎಸ್ಐಟಿ ತನಿಖೆ ಮಾಡಿಸಿದ್ದರಿಂದ ಸತ್ಯ ಬಯಲಾಗಿದೆ. ಷಡ್ಯಂತ್ರ ರೂಪಿಸಿದವರಿಗೆ ಶಿಕ್ಷೆ ಕೊಡಿಸುವ ತನಕ ನಾವು ಹೋರಾಟ ಮಾಡುತ್ತೇವೆ' ಎಂದರು.
ಮೇಲಿನಪೇಟೆ ಕುವೆಂಪು ವೃತ್ತದಿಂದ ಬಸ್ ನಿಲ್ದಾಣದ ಆವರಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ನಿರಂತರ ಮಳೆಯಲ್ಲೇ ಸಾವಿರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.