ಚಿಕ್ಕಮಗಳೂರು: ‘ಸಮಸಮಾಜ ನಿರ್ಮಾಣ ಆಗಬೇಕೆಂದರೆ ಅಂಬೇಡ್ಕರ್ ಆಶಯದಂತೆ ಎಲ್ಲಾ ಶೋಷಿತರಿಗೂ ಶಿಕ್ಷಣ ದೊರಕಬೇಕು. ದೀಕ್ಷಾಭೂಮಿ ಯಾತ್ರಿಕರು ಪ್ರವಾಸಕ್ಕೆ ಸೀಮಿತವಾಗದೆ ಅಂಬೇಡ್ಕರ್ ವಿಚಾರಧಾರೆಗಳನ್ನು ಅಳವಡಿಸಿಕೊಂಡು ಇತರರಿಗೂ ಅರಿವು ಮೂಡಿಸಬೇಕು’ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥೆ ಮಾಡಿರುವ ಬಸ್‌ಗಳಲ್ಲಿ ನಾಗಪುರದ ದೀಕ್ಷಾಭೂಮಿಗೆ ಯಾತ್ರೆ ಹೊರಟ 222 ಅಂಬೇಡ್ಕರ್ ಅನುಯಾಯಿಗಳನ್ನು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೀಳ್ಕೊಟ್ಟು ಅವರು ಮಾತನಾಡಿದರು.
ವಿಶ್ವ ಮೆಚ್ಚುವ ಸಂವಿಧಾನ ರಚಿಸಿರುವ ಅಂಬೇಡ್ಕರ್ ಅವರ ಪಂಚಧಾಮಗಳಲ್ಲಿ ಒಂದಾಗಿರುವ ನಾಗಪುರ ದೀಕ್ಷಾ ಭೂಮಿಯಲ್ಲಿರುವ ಅವರ ವಿಚಾರಧಾರೆಗಳನ್ನು ಯಾತ್ರಿಕರು ಅರಿತುಕೊಳ್ಳಬೇಕು. ವಾಪಸ್ ಬಂದ ಬಳಿಕ ಕನಿಷ್ಠ ತಲಾ 10 ಜನರಿಗೆ ತಲುಪಿಸಿದರೆ 2,200 ಜನರಿಗೆ ತಲುಪುತ್ತದೆ ಎಂದು ಹೇಳಿದರು.
ಸಾಕ್ಷರತೆಯಲ್ಲಿ ಕೇರಳ ರಾಜ್ಯ ಮೊದಲ ಸ್ಥಾನದಲ್ಲಿದ್ದು, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕೆಂಬ ಅಂಬೇಡ್ಕರ್ ಅವರ ಆಶಯದಂತೆ ರಾಜ್ಯದ ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಈ ಯೋಜನೆ ರೂಪಿಸಿದ್ದಾರೆ. ಅಂಬೇಡ್ಕರ್ ವಿಚಾರಗಳನ್ನು ಮನೆ –ಮನೆಗೆ ಮುಟ್ಟಿಸುವ ಕೆಲಸವನ್ನು ದೀಕ್ಷಾಭೂಮಿ ಯಾತ್ರಾರ್ಥಿಗಳು ಮಾಡಬೇಕು ಎಂದು ತಿಳಿಸಿದರು.
‘ಸರ್ಕಾರ ಬಂದ ಮೂರು ವರ್ಷದಿಂದಲೂ ಈ ಯಾತ್ರೆಗೆ ವಾಹನ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಸರ್ಕಾರ ಬಡವರು, ಹಿಂದುಳಿದ ವರ್ಗಗಳು, ದಲಿತರು, ಅಲ್ಪಸಂಖ್ಯಾತರು ಹಾಗೂ ಎಲ್ಲಾ ಸಮುದಾಯದ ಬಡವರ ಪರ ಇರುವ ಹಲವು ಯೋಜನೆ ಜಾರಿಗೊಳಿಸಿದೆ. ಅದರಲ್ಲಿ ಈ ಯೋಜನೆಯೂ ಒಂದು. ಯಾತ್ರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.
ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಮಾತನಾಡಿ, ‘ಐದು ದಿನದ ಪ್ರವಾಸದಲ್ಲಿ ನಾಗಪುರ ದೀಕ್ಷಾಭೂಮಿ ಯಾತ್ರೆಯ ಅನುಭವ ಜೀವನ ಪರ್ಯಂತ ಸ್ಮರಣೆಯಲ್ಲಿ ಉಳಿಯಲಿದೆ. ಅಲ್ಲಿ ನಡೆಯುವ ದೀಕ್ಷಾ ಬೋಧನೆ ಬಗ್ಗೆ ಅರಿತು ಹೆಚ್ಚು ಪ್ರಚಾರ ನೀಡಬೇಕು’ ಎಂದು ಸಲಹೆ ನೀಡಿದರು.
ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್, ಉಪಾಧ್ಯಕ್ಷ ಲಲಿತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ರೇವಣ್ಣ, ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಅನಿಲಕುಮಾರ್, ಮುಖಂಡರಾದ ಹುಣಸೆಮುಕ್ಕಿ ಲಕ್ಷ್ಮಣ, ಹೊನ್ನೇಶ್, ಹರೀಶ್ ಮಿತ್ರ, ರಘು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.