ADVERTISEMENT

ಕಲಾವಿದನ ಕೈಯಲ್ಲಿ ಅರಳಿದ ಡೈನೋಸಾರ್; ಮರೆಯಾದ ಸಂತತಿಗೆ ಕಲಾಕೃತಿ ಜೀವ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2022, 4:30 IST
Last Updated 28 ಆಗಸ್ಟ್ 2022, 4:30 IST
ತಾವು ನಿರ್ಮಿಸಿರುವ ಡೋನೊಸಾರ್ ಕಲಾಕೃತಿಯೊಂದಿಗೆ ಮಹೇಶ್
ತಾವು ನಿರ್ಮಿಸಿರುವ ಡೋನೊಸಾರ್ ಕಲಾಕೃತಿಯೊಂದಿಗೆ ಮಹೇಶ್   

ಮೂಡಿಗೆರೆ: ಚಿತ್ರಕಷ್ಟೇ ಸೀಮಿತವಾಗಿ ಇತಿಹಾಸದ ಪುಟ ಸೇರಿರುವ ಡೈನೊಸಾರ್ ಪ್ರಾಣಿಗೆ ತಾಲ್ಲೂಕಿನ ಹಳಸೆ ಗ್ರಾಮದಲ್ಲಿ ಕಲಾಕೃತಿಯ ಮೂಲಕ ಜೀವ ತುಂಬಲಾಗಿದೆ.

ವೃತ್ತಿಯಲ್ಲಿ ಎಂಜಿನಿಯರ್ ಆಗಿ ಕೃಷಿಯತ್ತ ಒಲವು ಮೂಡಿಸಿಕೊಂಡಿರುವ ಹಳಸೆ ಗ್ರಾಮದ ಮಹೇಶ್ ಕಲಾಕೃತಿಯ ನಿರ್ಮಾತೃವಾಗಿದ್ದು, ಈ ಡೈನೊಸಾರ್ ನಿರ್ಮಾಣವೇ ಒಂದು ರೋಚಕ ಕತೆಯಾಗಿದೆ.

ಬೆಂಗಳೂರಿನವರಾದ ಮಹೇಶ್ ಡಿಪ್ಲೊಮಾ ಎಂಜಿನಿಯರಿಂಗ್ ಮಾಡಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದರು. ಕೃಷಿಯತ್ತ ಆಸಕ್ತಿ ಬೆಳೆದು ಹಳಸೆ ಗ್ರಾಮದಲ್ಲಿ ಕಾಫಿತೋಟವನ್ನು ನಿರ್ಮಾಣ ಮಾಡಿಕೊಂಡು ಪತ್ನಿ ಹಾಗೂ ಮಗನೊಂದಿಗೆ ಬದುಕು ಕಟ್ಟಿಕೊಂಡಿದ್ದಾರೆ. ಕೋವಿಡ್‌ಗೂ ಪೂರ್ವದಲ್ಲಿ ತನ್ನ ಮಗನ ಶಾಲಾ ವಸ್ತು ಪ್ರದರ್ಶನಕ್ಕೆ ಡೈನೊಸಾರ್ ಮಾದರಿಯನ್ನು ಸ್ವತಃ ಮಹೇಶ್ ತಯಾರಿಸಿಕೊಟ್ಟಿದ್ದರು. ಆ ಡೈನೊಸಾರ್ ಮಾದರಿಯು ವಸ್ತು ಪ್ರದರ್ಶನದಲ್ಲಿ ಜನರ ಗಮನ ಸೆಳೆದುದಲ್ಲದೇ, ಬಹುಮಾನವನ್ನು ಪಡೆದುಕೊಂಡಿತು. ಇದರಿಂದ ಸ್ಫೂರ್ತಿಗೊಂಡ ಮಹೇಶ್ ಅವರು ಲಾಕ್ ಡೌನ್ ಅವಧಿಯಲ್ಲಿ ತಮ್ಮ ಮನೆಯ ಬಳಿಯಲ್ಲಿಯೇ ಸುಮಾರು 45 ಅಡಿ ಉದ್ದ, 15 ಅಗಲದ 600 ಕೆ.ಜಿ. ತೂಕದ ಡೈನೊಸಾರ್ ನಿರ್ಮಿಸುವ ಯೋಜನೆಯನ್ನು ರೂಪಿಸಿಕೊಂಡಿದ್ದು, ಕೋವಿಡ್ ಅವಧಿಯ ಎರಡು ವರ್ಷಗಳ ಕಾಲ ಶ್ರಮ ವಹಿಸಿ ಮಾದರಿಯನ್ನು ತಯಾರಿಸಿದ್ದಾರೆ.

ADVERTISEMENT

‘ಚಿಕ್ಕಂದಿನಿಂದಲೂ ಮಾದರಿಗಳ ತಯಾರಿಕೆಯ ಬಗ್ಗೆ ಆಸಕ್ತಿಯಿತ್ತು. ಡೈನೊಸಾರ್ ಮಾತ್ರವಲ್ಲದೇ, ಹಸು ಕರು, ಬಾತುಕೋಳಿ, ಹುಲಿ, ಜಿಂಕೆಯಂತಹ ಪ್ರಾಣಿಗಳ ಮಾದರಿಯನ್ನು ತಯಾರಿಸುತ್ತೇನೆ. ಶಾಲಾ ಸಮಾರಂಭದಲ್ಲಿ ಡೈನೊಸಾರ್ ಮಾದರಿಯನ್ನು ಕಂಡಿದ್ದ ಸ್ನೇಹಿತರಾದ ಘಾಟಿಕಲ್ ರೆಸಾರ್ಟ್‌ ಗುರುದೇವ್ ತಮಗೊಂದು ಡೈನೊಸಾರ್ ನಿರ್ಮಿಸಿಕೊಡುವಂತೆ ಸೂಚಿಸಿದ್ದರು. ಅದರಂತೆ ಬೃಹತ್ ಆಕಾರದ ಡೈನೊಸಾರ್ ನಿರ್ಮಿಸಿದ್ದೇನೆ. ಪತ್ನಿ ಹಾಗೂ ಮಗನ ಸಹಕಾರದಿಂದ ಮನೆಯ ಅಂಗಳದಲ್ಲಿಯೇ ಡೈನೊಸಾರ್ ಆಕೃತಿಯನ್ನು ನಿರ್ಮಿಸಿದ್ದೇನೆ. ಡೈನೊಸಾರ್ ಮಾದರಿಯನ್ನು ನೋಡಲು ಹಲವಾರು ಕಡೆಯಿಂದ ಜನರು ಬಂದಿದ್ದಾರೆ. ಡೈನೊಸಾರ್ ನೊಂದಿಗೆ ಫೋಟೊ ತೆಗೆದುಕೊಳ್ಳುತ್ತಾರೆ’ ಎನ್ನುತ್ತಾರೆ ಮಹೇಶ್.

ಮನೆಯ ಸುತ್ತಲಿರುವ ಪ್ರದೇಶದಲ್ಲಿ ಉತ್ತಮ ಕೃಷಿ ನಡೆಸಿರುವ ಮಹೇಶ್, ಮನೆಯಂಗಳದಲ್ಲೇ ಮೀನು ಸಾಕಾಣಿಕೆಯನ್ನು ಕೈಗೊಂಡಿದ್ದು, ಇದೀಗ ಡೈನೊಸಾರ್ ಕಲಾಕೃತಿಯ ಮೂಲಕ ಜನರು ಬೆರಗಾಗುವಂತೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.