ADVERTISEMENT

ಚಿಕ್ಕಮಗಳೂರು: 1 ಲಕ್ಷ ಯುವಕರಿಗೆ ವಿಪತ್ತ ನಿರ್ವಹಣಾ ತರಬೇತಿ

ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಪ್ರಧಾನ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 5:56 IST
Last Updated 5 ನವೆಂಬರ್ 2025, 5:56 IST
ಉಪನ್ಯಾಸಕರಿಗೆ ಆಯೋಜಿಸಿದ್ದ ಒಂದು ದಿನದ ಸಾಮಾನ್ಯ ಮಾಹಿತಿ ಶಿಬಿರದಲ್ಲಿ ಪಿ.ಜಿ.ಆರ್. ಸಿಂದ್ಯಾ ಮಾತನಾಡಿದರು
ಉಪನ್ಯಾಸಕರಿಗೆ ಆಯೋಜಿಸಿದ್ದ ಒಂದು ದಿನದ ಸಾಮಾನ್ಯ ಮಾಹಿತಿ ಶಿಬಿರದಲ್ಲಿ ಪಿ.ಜಿ.ಆರ್. ಸಿಂದ್ಯಾ ಮಾತನಾಡಿದರು   

ಚಿಕ್ಕಮಗಳೂರು: ಕರಾವಳಿ, ಬಯಲು ಸೀಮೆ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಅತಿವೃಷ್ಠಿ, ಪ್ರವಾಹ, ಬರಗಾಲದಂತಹ ಪ್ರಾಕೃತಿಕ ವಿಕೋಪಗಳು ಸಾಮಾನ್ಯ. ರಾಜ್ಯದಲ್ಲಿ ಒಂದು ಲಕ್ಷ ಯುವಕರಿಗೆ ವಿಪತ್ತು ನಿರ್ವಹಣಾ ತರಬೇತಿ ನೀಡಲಾಗುವುದು ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಪ್ರಧಾನ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.

ನಗರದ ಸ್ಕೌಟ್ ಮತ್ತು ಗೈಡ್ಸ್‌ ಸಭಾಂಗಣದಲ್ಲಿ ಕುವೆಂಪು ವಿಶ್ವವಿದ್ಯಾಲಯ ಹಾಗೂ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಆಯೋಜಿಸಿದ್ದ ಸಾಮಾನ್ಯ ಮಾಹಿತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಕೃತಿ ವಿಕೋಪ ಸಂಭವಿಸಿದಾಗ ಸ್ಥಳೀಯ ಯುವಕರು ಕೂಡಲೇ ಸ್ಪಂದಿಸಬೇಕು. ಪರಿಹಾರ ಕಾರ್ಯದಲ್ಲಿ ಆಡಳಿತದೊಂದಿಗೆ ಕೈ ಜೋಡಿಸಬೇಕು. ಕಾರ್ಯಕ್ಷಮತೆಯಲ್ಲಿ ಅವರನ್ನು ಸಜ್ಜಾಗಿಸಲು 18 ರಿಂದ 25 ವಯಸ್ಸಿನ ಪದವಿ ಪೂರ್ವ ಹಾಗೂ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ತರಬೇತಿ ಕೊಡಿಸುತ್ತಿದೆ. ಪ್ರತಿ ವಿದ್ಯಾರ್ಥಿಗೆ ₹10 ಸಾವಿರ  ಅನುದಾನ ನೀಡುತ್ತಿದೆ ಎಂದರು.

ADVERTISEMENT

ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ರಾಜ್ಯದ ಐದು ಜಿಲ್ಲೆಗಳಲ್ಲಿ 10 ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ ಎಂದು ಹೇಳಿದರು.

ಸೇವೆ ಮತ್ತು ವ್ಯಕ್ತಿತ್ವ ನಿರ್ಮಾಣ ಸ್ಕೌಟ್ಸ್ ಮತ್ತು ಗೈಡ್ ಸಂಸ್ಥೆಯ ಮುಖ್ಯ ಉದ್ದೇಶ. ಸರ್ಕಾರ ಎಲ್ಲಾ ಪದವಿಪೂರ್ವ ಹಾಗೂ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಡ್ಡಾಯವಾಗಿ ಘಟಕ ಸ್ಥಾಪಿಸಲು ಆದೇಶಿಸಿದೆ. ಸದಾ ಸಿದ್ಧರಾಗಿರುವ ಒಂದು ಸೇವಾ ಪಡೆ ನಿರ್ಮಿಸಲು ಕಾಲೇಜುಗಳ ಆಡಳಿತ ಮಂಡಲಿ, ಪ್ರಾಂಶುಪಾಲರು ಹಾಗೂ ಉತ್ಸುಕ ಪ್ರಾದ್ಯಾಪಕರುಗಳು ಈ ರಾಷ್ಟ್ರೀಯ ಅಭಿಯಾನದಲ್ಲಿ ಕೈ ಜೋಡಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಮುಖ್ಯ ಆಯುಕ್ತ ಎಂ.ಎನ್.ಷಡಕ್ಷರಿ ಮಾತನಾಡಿ, ‘ಯುವಕರು ದುಶ್ಚಟ ಹಾಗೂ ಆಕರ್ಷಣೆಗೆ ಒಳಗಾಗದೆ ಸಮಾಜ ಕಟ್ಟುವ ಕೆಲಸ ಮಾಡಬೇಕು. ದೇಶದಲ್ಲಿ ಶೇ 60ರಷ್ಟು ಯುವಕರಿದ್ದು, ಅವರ ನಿರ್ಣಾಯಕ ವಯೋಮಾನದಲ್ಲಿ ಇರುವ ಜವಾಬ್ದಾರಿ ನಮ್ಮ ಮೇಲಿದೆ. ಕಾಲೇಜಿನ ಪ್ರಾಧ್ಯಾಪಕರು ಸಿಕ್ಕಿರುವ ಈ ಅವಕಾಶ ಉಪಯೋಗಿಸಿಕೊಳ್ಳಬೇಕು’ ಎಂದರು.

ನೀಲಕಂಠಚಾರ್, ಸಂಧ್ಯಾರಾಣಿ, ಎಂ.ಎನ್.ಷಡಕ್ಷರಿ ಅವರು ತರಬೇತಿ ನೀಡಿದರು. ಜಿಲ್ಲಾ ಗೈಡ್ಸ್ ಆಯುಕ್ತೆ ಡಿ.ಎಸ್. ಮಮತಾ, ಸ್ಕೌಟ್ ಆಯುಕ್ತ ಫಣಿರಾಜ್, ಜಿಲ್ಲಾ ಸಹಾಯಕ ಆಯುಕ್ತ ಜಿ.ಎಂ. ಗಣೇಶ್ ಉಪಸ್ಥಿತರಿದ್ದರು.  

‘ಘಟಕ ಆರಂಭಿಸುವುದು ಕಡ್ಡಾಯ’

‘ಜಿಲ್ಲೆಯಲ್ಲಿ ಸುಮಾರು 90 ಪದವಿ ಕಾಲೇಜುಗಳಿದ್ದು ಎಲ್ಲರು ಕಡ್ಡಾಯವಾಗಿ ರೋವರ್ಸ್‌ ಮತ್ತು ರೇಂಜರ್ಸ್‌ ಘಟಕಗಳನ್ನು ಕಡ್ಡಾಯವಾಗಿ ಪ್ರಾರಂಭಿಸಬೇಕು’ ಎಂದು ಪದವಿ ಪೂರ್ವ ಕಾಲೇಜಿನ ಉಪನಿರ್ದೇಶಕಿ ಮಂಜುಳಾ ತಿಳಿಸಿದರು.

ಸಂಬಂಧಪಟ್ಟ ಶಾಲೆಯ ಪ್ರಾಂಶುಪಾಲರು ಆಸಕ್ತಿ ವಹಿಸಿ ಕಾಲೇಜುಗಳಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು. ಕುವೆಂಪು ವಿಶ್ವವಿದ್ಯಾನಿಲಯದ ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ನೋಡಲ್ ಅಧಿಕಾರಿ ರವೀಂದ್ರಗೌಡ ಮಾತನಾಡಿ ‘ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಬಿ.ಇಡಿ ಕಾಲೇಜುಗಳು ಸೇರಿ ಎಲ್ಲಾ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಘಟಕಗಳು ಪ್ರಾರಂಭಿಸಬೇಕು. ಆ ಮೂಲಕ ಸಮಾಜ ಸೇವೆ ಯುವಕರ ಜವಾಬ್ದಾರಿ ಪರಿಸರ ಪ್ರಜ್ಞೆ ಮತ್ತು ಸಾಹಸ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಉತ್ತೇಜನೆ ನೀಡಬೇಕು’ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.