ADVERTISEMENT

9, 10ನೇ ತರಗತಿಯವರಿಗೂ ಮೊಟ್ಟೆ ನೀಡಲು ದಾನಿಗಳ ನೆರವು

ಚಿಕ್ಕಮಗಳೂರು ತಾಲ್ಲೂಕಿನ ಬೊಗಸೆ ಸರ್ಕಾರಿ ಪ್ರೌಢಶಾಲೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 4:11 IST
Last Updated 11 ಆಗಸ್ಟ್ 2022, 4:11 IST

ಚಿಕ್ಕಮಗಳೂರು: ತಾಲ್ಲೂಕಿನ ಬೊಗಸೆ ಸರ್ಕಾರಿ ಪ್ರೌಢಶಾಲೆ 9 ಮತ್ತು 10ನೇ ತರಗತಿ ಮಕ್ಕಳಿಗೆ ಮಧ್ಯಾಹ್ನದ ಊಟದ ಯೋಜನೆಯಡಿ ಮೊಟ್ಟೆ ನೀಡಲು ಗ್ರಾಮಸ್ಥರು, ದಾನಿಗಳು ಕೈಜೋಡಿಸಿದ್ದಾರೆ.

ಬೊಗಸೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಾರೆ. ಮಧ್ಯಾಹ್ನ ಊಟ ಯೋಜನೆಯಡಿ 1ರಿಂದ 8ನೇ ತರಗತಿ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ ನೀಡಲಾಗುತ್ತಿದೆ. ಈ ಶಾಲೆಯ 9 ಮತ್ತು 10ನೇ ತರಗತಿ ಮಕ್ಕಳಿಗೂ ಅದನ್ನು ನೀಡಲು ಗ್ರಾಮಸ್ಥರು ಜೇಬಿನಿಂದ ಹಣ ನೀಡಿ ಔದಾರ್ಯ ಮೆರೆದಿದ್ದಾರೆ.

‘1ರಿಂದ 8ನೇತರಗತಿಯವರಿಗೆ ಮಧ್ಯಾಹ್ನ ಊಟದ ಜೊತೆ ವಾರದಲ್ಲಿ ಎರಡು ದಿನ ಮೊಟ್ಟೆ ನೀಡಲಾಗುತ್ತಿದೆ. ಮೊಟ್ಟೆ ತಿನ್ನದವರಿಗೆ ಬಾಳೆಹಣ್ಣು, ಎರಡನ್ನೂ ತಿನ್ನದವರಿಗೆ ಕಡ್ಲೆ ಚಿಕ್ಕಿ ನೀಡಲಾಗುತ್ತಿದೆ. ನಮ್ಮ ಶಾಲೆಯಲ್ಲಿ 9 ಮತ್ತು 10ನೇ ತರಗತಿ ಮಕ್ಕಳಿಗೂ ವಾರದಲ್ಲಿ ಎರಡು ದಿನ ಸೌಲಭ್ಯವನ್ನು ನೀಡಲು ದಾನಿಗಳು, ಗ್ರಾಮಸ್ಥರು ಕೈಜೋಡಿಸಿದ್ದಾರೆ’ ಎಂದು ಶಾಲೆ ಮುಖ್ಯಶಿಕ್ಷಕ ಸತ್ಯನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಶಾಲೆಯಲ್ಲಿ ಒಟ್ಟು 80 ವಿದ್ಯಾರ್ಥಿಗಳು ಇದ್ದಾರೆ. 9 ಮತ್ತು 10ನೇ ತರಗತಿಯಲ್ಲಿ 55 ಮಕ್ಕಳು ಇದ್ದಾರೆ. ದಾನಿಗಳು ನೀಡಿದ ಹಣದಲ್ಲಿ ಈ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ ನೀಡಲಾಗುತ್ತಿದೆ. ಎಸ್‌ಡಿಎಂಸಿ ಸಭೆಯಲ್ಲಿ ನಿರ್ಧರಿಸಿ ಈ ಕ್ರಮ ವಹಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೂ ಅನುಕೂಲವಾಗಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.