ADVERTISEMENT

ಎಲ್ಲ ಕಲೆಗೂ ಮೂಲ ಆಧಾರ ನಾಟಕ: ಗುಣನಾಥ ಶ್ರೀ

ಶೃಂಗೇರಿ ಆದಿಚುಂಚನಗಿರಿ ಮಠದ ಬಿಜಿಎಸ್ ನಿಸರ್ಗ ಸಿರಿ ರಂಗ ಮಂಟಪದಲ್ಲಿ ‘ಜತೆಗಿರುವನು ಚಂದಿರ’ ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 6:31 IST
Last Updated 12 ಜನವರಿ 2026, 6:31 IST
<div class="paragraphs"><p> ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಶ್ರೀಗಳ ಜಯಂತ್ಯುತ್ಸವ ಪ್ರಯುಕ್ತ ರಂಗ ಸಿಂಗಾರ ವೇದಿಕೆಯವರು ಆಯೋಜಿಸಿದ್ದ ‘ಜತೆಗಿರುವನು ಚಂದಿರ’ ನಾಟಕದ ಕಾರ್ಯಕ್ರಮವನ್ನು ಆದಿಚುಂಚನಗಿರಿ ಮಠದ ಗುರುಗಳಾದ ಗುಣನಾಥ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿದರು&nbsp;</p></div>

ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಶ್ರೀಗಳ ಜಯಂತ್ಯುತ್ಸವ ಪ್ರಯುಕ್ತ ರಂಗ ಸಿಂಗಾರ ವೇದಿಕೆಯವರು ಆಯೋಜಿಸಿದ್ದ ‘ಜತೆಗಿರುವನು ಚಂದಿರ’ ನಾಟಕದ ಕಾರ್ಯಕ್ರಮವನ್ನು ಆದಿಚುಂಚನಗಿರಿ ಮಠದ ಗುರುಗಳಾದ ಗುಣನಾಥ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿದರು 

   

ಶೃಂಗೇರಿ: ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸಂಬಂಧ ಬೆಸೆಯುತ್ತದೆ. ಜೊತೆಗೆ ಜನರು ನೋವು–ನಲಿವುಗಳನ್ನು ಹಂಚಿಕೊಳ್ಳುತ್ತಾರೆ ಎಂದು ಶೃಂಗೇರಿ ಆದಿಚುಂಚನಗಿರಿ ಮಠದ ಗುರುಗಳಾದ ಗುಣನಾಥ ಸ್ವಾಮೀಜಿ ಹೇಳಿದರು.

ಶೃಂಗೇರಿ ಆದಿಚುಂಚನಗಿರಿ ಮಠದ ಬಿಜಿಎಸ್ ನಿಸರ್ಗ ಸಿರಿ ರಂಗ ಮಂಟಪದಲ್ಲಿ ವಿಶ್ವಮಾನವ ದಿನಾಚರಣೆ ಹಾಗೂ ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಶ್ರೀಗಳ ಜಯಂತ್ಯುತ್ಸವ ಪ್ರಯುಕ್ತ ರಂಗ ಸಿಂಗಾರ ವೇದಿಕೆಯವರು ಆಯೋಜಿಸಿದ್ದ ‘ಜತೆಗಿರುವನು ಚಂದಿರ’ ನಾಟಕದ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ಎಲ್ಲಾ ಕಲೆಗೂ ಮೂಲ ಆಧಾರ ನಾಟಕ. ಜ್ಞಾನ ಮತ್ತು ವಿಮರ್ಶಾತ್ಮಕ ಚಿಂತನೆಗಳು ಮೂಢನಂಬಿಕೆಯನ್ನು ಹೋಗಲಾಡಿಸುತ್ತದೆ. ದೈವಿಕ ಮನಸ್ಸಿನ ಜೊತೆ ಆಳವಾದ ಸಂಪರ್ಕ ಬೆಳೆಸುವ ಪ್ರಾರ್ಥನೆ, ಧ್ಯಾನ ಮತ್ತು ನೈತಿಕ ಜೀವನಗಳಂತಹ ಅರ್ಥಪೂರ್ಣ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳಬೇಕು. ಪಂಚಭೂತಗಳಾದ ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶ ಮನುಷ್ಯನ ಅಸ್ತಿತ್ವದ ಅಡಿಪಾಯವನ್ನು ರೂಪಿಸುವ ಅಂಶಗಳಾಗಿವೆ. ಇವುಗಳನ್ನು ಪೂಜಿಸಿ, ಪ್ರೀತಿಸಿ ಮತ್ತು ಮುಂದಿನ ಪೀಳಿಗೆಗೆ ಉಳಿಸುವುದರಿಂದ ಪ್ರಕೃತಿ ಮತ್ತು ವಿಶ್ವಕ್ಕೆ ನಾವು ಮಾದರಿಯಾಗುತ್ತೇವೆ. ಆದ್ದರಿಂದ ನಮ್ಮ ಗುರುಗಳಾದ ಬಾಲಗಂಗಾಧರನಾಥ ಸ್ವಾಮೀಜಿ 5 ಕೋಟಿ ಗಿಡಗಳನ್ನು ನೆಡುವ ಮೂಲಕ ಪ್ರಕೃತಿ ಎಷ್ಟು ಅಗತ್ಯ ಎಂಬುದು ತಿಳಿಸಿದ್ದಾರೆ’ ಎಂದರು.

ರಂಗ ಸಿಂಗಾರ ವೇದಿಕೆಯ ಅಧ್ಯಕ್ಷ ಕಲ್ಕುಳಿ ಚಂದ್ರಶೇಖರ್ ಮಾತನಾಡಿ, ‘ಸಾಂಸ್ಕೃತಿಕ ಕಾರ್ಯಕ್ರಮಗಳು ಆರೋಗ್ಯಕ್ಕೆ ಪೂರಕ. ಕಲಾವಿದರು, ಸಾಹಿತಿಗಳು, ಕಾದಂಬರಿಕಾರರು ಇದ್ದರೆ ದೇಶ ಉಳಿಯಲು ಸಾಧ್ಯ. ಪ್ರಸ್ತುತ ಸಮಾಜದಲ್ಲಿ ನಾವು ಸಮಾನತೆ ಮತ್ತು ನಂಬಿಕಸ್ತರಾಗಿ ಹೇಗೆ ಬದುಕಬೇಕು ಎಂಬುದನ್ನು ನಾಟಕದ ಪಾತ್ರದಲ್ಲಿ ತಿಳಿಸಿದ್ದಾರೆ. ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೋಳ್ಳಬೇಕು’ ಎಂದರು.

ರಂಗ ಸಿಂಗಾರ ವೇದಿಕೆಯ ಸಂಚಾಲಕ ಅನಿಲ್ ಹೊಸಕೊಪ್ಪ ಮಾತನಾಡಿ, ‘ನಾಟಕವು ಭಾರತ ಮತ್ತು ಪಾಕಿಸ್ತಾನ ವಿಭಜನೆಗೊಂಡಾಗ ಅವರು ಬಿಟ್ಟು ಹೋಗುವ ಸಂದರ್ಭದಲ್ಲಿ ಕುಟುಂಬಗಳು ಅನುಭವಿಸಿದ ನೋವು, ಯಾತನೆ, ಸಮಾಜ ಅವರನ್ನು ನೋಡುವ ರೀತಿಯ ದೃಶ್ಯವು ಈ ನಾಟಕದಲ್ಲಿದೆ. ಈ ನಾಟಕದಿಂದ ಪ್ರೇರಿತರಾದವರು ಸಮಾಜದ ಆಗು ಹೋಗುಗಳಿಗೆ ಸ್ಪಂದಿಸುತ್ತಾರೆ. ‘ಯುದ್ಧ, ದೇಶ ವಿಭಜನೆ, ಅಭಿವೃದ್ಧಿ, ಆಣೆಕಟ್ಟು ನಿರ್ಮಾಣ ಸಂದರ್ಭದ ಇತ್ಯಾದಿಗಳ ನೆಪದಲ್ಲಿ ಲಕ್ಷ ಲಕ್ಷ ಕುಟುಂಬಗಳ ಸ್ಥಳಾಂತರಗಳು ಮತ್ತು ಉಚ್ಚಾಟನೆಗಳು ನಡೆದಿದೆ. ಅಂತಹ ಪರಿಸ್ಥಿತಿಯಲ್ಲಿ ದ್ವೇಷ ಅಳಿಸಿ, ಪ್ರೀತಿಯನ್ನು ಹಂಚುವ ನಾಟಕದ ಕಥಾ ಭಾಗವಾಗಿದೆ. ಶೊಲೋಮ್ ಅಲೈಖೆಮ್‍ನ ರಶ್ಯನ್ ಕಥೆಗಳನ್ನಾಧರಿಸಿ ಜೋಸೆಫ್ ಸ್ಟೀನ್ ರಚಿಸಿರುವ ‘ಫಿಡ್ಲರ್ ಆನ್ ದಿ ರೂಫ್’ ಪ್ರಪಂಚದ ಶ್ರೇಷ್ಠ ಸಂಗೀತ ನಾಟಕಗಳಲ್ಲೊಂದರ ಚಿತ್ರ ಪಟ ರೂಪ ಸಹ ತನ್ನ ಸಂಗೀತ ನಾಟಕಮಯತೆಯಿಂದಲೇ ಜನಮನವನ್ನು ಈ ನಾಟಕ ಗೆದ್ದಿತು. ಆದ್ದರಿಂದ ಈ ನಾಟಕ ಹಾಸ್ಯಪ್ರಜ್ಞೆ ಮತ್ತು ಕೌಟುಂಬಿಕತೆಯೇ ಜೀವಾಳವಾಗಿದೆ’ ಎಂದು ಹೇಳಿದರು.

ವೇದಿಕೆಯಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ ಮತ್ತು ಕುವೆಂಪುರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ನಾಟಕ ನೋಡಲು 1000ಕ್ಕೂ ಹೆಚ್ಚು ಪ್ರೇಕ್ಷಕರು ಸೇರಿದ್ದರು. ಸಮಾರಂಭದಲ್ಲಿ ನಾಟಕದ ನಿರ್ದೇಶಕ ಹುಲುಗಪ್ಪ ಕಟ್ಟಿಮನಿ ಮತ್ತು ಕಲಾವಿದರನ್ನು ಸನ್ಮಾನಿಸಲಾಯಿತು. 

ರಂಗ ಸಿಂಗಾರದ ರಮೇಶ್ ಭಟ್ ಕೊಡತಲು, ದಿನೇಶ್ ನೆಮ್ಮಾರ್, ಪ್ರದೀಪ್ ಕಲ್ಲೋಳ್ಳಿ, ಅಂಬಲಮನೆ ಸುಬ್ರಹ್ಮಣ್ಯ, ಛಾಯಪತಿ, ಎಚ್.ಎ. ಪ್ರಕಾಶ್, ಪ್ರದೀಪ್ ಕೂಳೆಗದ್ದೆ, ಎಚ್.ಎಂ. ಮಂಜುನಾಥ ಗೌಡ, ಶ್ರೀಮಂದಾರ, ಜಗದೀಶ್ ಕಣದಮನೆ, ಸಂತೋಷ್ ಕಾಳ್ಯ, ರಾಜ್ ಕುಮಾರ್ ಹೆಗ್ಡೆ, ಪ್ರದೀಪ್ ಯಡದಾಳು, ಅವಿನಾಶ್ ಹೊಸಕೊಪ್ಪ, ರವೀಶ್ ಮೌಳಿ ಮತ್ತು ಕಲಾ ತಂಡದವರು, ಮೋಹನ್ ಬೋಳೂರು, ತ್ರಿಮೂರ್ತಿ ಇದ್ದರು.

ಪಂಚ ಭೂತಗಳ ಆರಾಧನೆಯು ನಮ್ಮನ್ನು ಸಾರ್ವತ್ರಿಕ ಲಯದೊಂದಿಗೆ ಜೋಡಿಸುವುದು ಮಾತ್ರವಲ್ಲದೆ ಆಂತರಿಕ ಶಾಂತಿ ಮತ್ತು ಪರಿಸರ ಜವಾಬ್ದಾರಿ ಬೆಳೆಸುತ್ತದೆ
-ಗುಣನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ
ರಾಜಕಾರಣದಿಂದ ದ್ವೇಷ ಹೊರತುಪಡಿಸಿ ಎಂದಿಗೂ ಗ್ರಾಮದಲ್ಲಿ ಜನರ ಪ್ರೀತಿ–ವಿಶ್ವಾಸ ಗಳಿಸಲು ಸಾಧ್ಯವಿಲ್ಲ. ಮುಂದಿನ ವರ್ಷ ರಂಗಾ ಸಿಂಗಾರ ತಂಡದವರು ನಾಟಕವನ್ನು ಅಭ್ಯಾಸ ಮಾಡಿ ಅಭಿನಯಿಸಲಿದ್ದಾರೆ.
-ಅನಿಲ್ ಹೊಸಕೊಪ್ಪ, ರಂಗಾ ಸಿಂಗಾರದ ಸಂಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.