ADVERTISEMENT

ಚಿಕ್ಕಮಗಳೂರು: ಶಾಶ್ವತ, ಶುದ್ಧ ಕುಡಿಯುವ ನೀರು ಮೊದಲ ಆದ್ಯತೆ

ಕೊಪ್ಪದಲ್ಲಿ ‘ಅಮೃತ್-2.10’ ಯೋಜನೆ ಕಾಮಗಾರಿಗೆ ಭೂಮಿ ಪೂಜೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 7:20 IST
Last Updated 3 ಡಿಸೆಂಬರ್ 2025, 7:20 IST
ಕೊಪ್ಪದಲ್ಲಿ ‘ಅಮೃತ್-.0’ ಯೋಜನೆ ಕಾಮಗಾರಿಗೆ ಶಾಸಕ ಟಿ.ಡಿ.ರಾಜೇಗೌಡ ಭೂಮಿ ಪೂಜೆ ನೆರವೇರಿಸಿದರು
ಕೊಪ್ಪದಲ್ಲಿ ‘ಅಮೃತ್-.0’ ಯೋಜನೆ ಕಾಮಗಾರಿಗೆ ಶಾಸಕ ಟಿ.ಡಿ.ರಾಜೇಗೌಡ ಭೂಮಿ ಪೂಜೆ ನೆರವೇರಿಸಿದರು   

ಕೊಪ್ಪ: ‘ನಾನು ಅಧಿಕಾರಕ್ಕೆ ಬಂದ ಮೇಲೆ ಜನರು ಒಪ್ಪುವಂತಹ ಕೆಲಸ ಮಾಡಿದ್ದೇನೆ. ಆರೋಗ್ಯ, ಶಿಕ್ಷಣ, ಪರಿಸರಕ್ಕೆ ಹೆಚ್ಚು ಒತ್ತುಕೊಟ್ಟು ಕೆಲಸ ಮಾಡುತ್ತಿದ್ದೇನೆ. ಶಾಶ್ವತ ಶುದ್ಧ ಕುಡಿಯುವ ನೀರು ನಮ್ಮ ಮೊದಲ ಆದ್ಯತೆ’ ಎಂದು ಶಾಸಕ ಟಿ.ಡಿ. ರಾಜೇಗೌಡ ಹೇಳಿದರು.

ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಕಲ್ಪಿಸುವ ಕೇಂದ್ರ ಪುರಸ್ಕೃತ ‘ಅಮೃತ್-2.0’ ಯೋಜನೆಯಡಿ ₹35.70 ಕೋಟಿ ವೆಚ್ಚದ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿದ ಅವರು, ವೀರಭದ್ರಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಅಮೃತ್-2.0 ಯೋಜನೆ ಅನುಷ್ಠಾನಗೊಳ್ಳಲಿದೆ. ಕೇಂದ್ರದ ಸಹಭಾಗಿತ್ವದಲ್ಲಿ ಯೋಜನೆ ಮಂಜೂರು ಮಾಡಿಕೊಡುವಲ್ಲಿ ಬೈರತಿ ಸುರೇಶ್, ಕೋಟ ಶ್ರೀನಿವಾಸ ಪೂಜಾರಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಧಿವೇಶನ ನಡೆಯುತ್ತಿರುವುದರಿಂದ ಶಂಕುಸ್ಥಾಪನೆಗೆ ಬರಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ಎರಡು ದಿನಾಂಕ ನಿಗದಿಪಡಿಸಿ ಕಾರ್ಯಕ್ರಮ ಮುಂದೂಡಲಾಗಿತ್ತು, ಇದೀಗ ಕಾರ್ಯಕ್ರಮ ನಡೆಸುವಂತೆ ಅವರು ಸೂಚಿಸಿದ್ದರು ಎಂದು ತಿಳಿಸಿದರು.

ADVERTISEMENT

ಸರ್ಕಾರ ₹65 ಸಾವಿರ ಕೋಟಿ ಗ್ಯಾರಂಟಿ ಯೋಜನೆ ಜೊತೆಗೆ ಅಭಿವೃದ್ಧಿ ಕೆಲಸಕ್ಕೂ ಆದ್ಯತೆ ನೀಡಿದೆ. ಇನ್ನೂ ಒಂದೂವರೆ ತಿಂಗಳಲ್ಲಿ ರಸ್ತೆ ಗುಂಡಿ ಮುಚ್ಚುವುದು, ಸಂಪೂರ್ಣ ಹಾಳಾದ ರಸ್ತೆ ಮರು ಡಾಂಬರೀಕರಣ ಮಾಡಲಾಗುವುದು. ಫೆಬ್ರುವರಿ ಅಂತ್ಯದೊಳಗೆ ವಸ್ತಾರೆಯಿಂದ ಶೃಂಗೇರಿವರೆಗಿನ ರಸ್ತೆ ಎಸ್.ಎಚ್.ವಿ.ಪಿ., ಸಿ.ಆರ್.ಎಫ್ ಅನುದಾನದಲ್ಲಿ ಮರು ಡಾಂಬರೀಕರಣಗೊಳ್ಳಲಿದೆ. ₹19 ಕೋಟಿ ವೆಚ್ಚದಲ್ಲಿ ಕೊಪ್ಪದಿಂದ ಎನ್.ಆರ್.ಪುರ ತಾಲ್ಲೂಕು ಕೊರಳಕೊಪ್ಪದವರಿಗೆ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ವಿಶೇಷ ಅನುದಾನದಲ್ಲಿ ₹12.50 ಕೋಟಿ ವೆಚ್ಚದಲ್ಲಿ ಗ್ರಾಮೀಣ ರಸ್ತೆ ಅಭಿವೃದ್ಧಿಯಾಗಲಿದೆ ಎಂದ ಅವರು, ವಿವಿಧ ಕಾಮಗಾರಿಗಳಿಗೆ ಬಿಡುಗಡೆಯಾದ ಅನುದಾನದ ಬಗ್ಗೆ ಮಾಹಿತಿ ನೀಡಿದರು.

ಬಗರ್ ಹುಕುಂ ಸಮಿತಿ ಸದಸ್ಯ ನುಗ್ಗಿ ಮಂಜುನಾಥ್ ಮಾತನಾಡಿ, ಶಾಸಕ ರಾಜೇಗೌಡ ಅವರು ಪ್ರತಿಯೊಬ್ಬರ ಏಳಿಗೆಗಾಗಿ ಕೆಲಸ ಮಾಡುತ್ತಿದ್ದಾರೆ. ಕೊಪ್ಪದಿಂದ ಎನ್.ಆರ್.ಪುರ ಮೂಲಕ ಶಿವಮೊಗ್ಗ ಸಂಪರ್ಕ ಕಲ್ಪಿಸುವ ಹೆದ್ದಾರಿಗೆ ಆದ್ಯತೆ ನೀಡಬೇಕು ಎಂದರು.

ಥ್ರೋಬಾಲ್‌ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಜಯಪುರ ಪಂಚಾಯಿತಿ ವ್ಯಾಪ್ತಿ ಬೆಳಗುಂಡಿ ವಸಂತಿ, ಚಂದ್ರಶೇಖರ್ ದಂಪತಿ ಪುತ್ರ ಬಿ.ಜಿ.ವಿಘ್ನೇಶ್ ಅವರನ್ನು ಶಾಸಕರು ಸನ್ಮಾನಿಸಿದರು. ಕಾರ್ಯಕ್ರಮದ ಬಳಿಕ ಕಟ್ಟಡ ಕಾರ್ಮಿಕರಿಗೆ ಟೂಲ್ ಕಿಟ್‌ಗಳನ್ನು ವಿತರಿಸಲಾಯಿತು. ಸಮನ್ವಯ ಆಟೊ ಚಾಲಕರು ಮಾಲೀಕರ ಸಂಘದಿಂದ, ಫ್ರೆಂಡ್ಸ್ ಸರ್ಕಲ್ ಗೆಳೆಯರ ಬಳಗ, ಪೌರ ಗಣೇಶೋತ್ಸವ ಸಮಿತಿ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು.

ವೈದ್ಯ ಮೋಹನ್ ಬಿ.ಶೆಟ್ಟಿ, ಶರ್ಮಾ ಜೆರಾಕ್ಸ್ ಅಂಗಡಿ ಮಾಲೀಕ ನಾಗೇಶ್ ಶರ್ಮ, ಸಾಮಾಜಿಕ ಕಾರ್ಯಕರ್ತ ಜಾಹಿರ್ ಅಬ್ಬಾಸ್, ಶಿಕ್ಷಕಿ ಜೋಸೆಫ್ ಮೇರಿ ಡಿ‘ಮೆಲ್ಲೋ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ರವೀಂದ್ರ ಕುಕ್ಕುಡಿಗೆ ಇದ್ದರು. ಪಟ್ಟಣ ಪಂಚಾಯಿತಿ ಮಾಜಿ ನಾಮನಿರ್ದೇಶಿತ ಸದಸ್ಯ ದೇವರಾಜ್ ಸ್ವಾಗತಿಸಿದರು. ಸುಮಾ ಪರ್ವತೆಗೌಡ ವಂದನಾರ್ಪಣೆ ಮಾಡಿದರು. ಜಯಗೋಪಾಲ್ ಪ್ರಾರ್ಥನೆ ಮಾಡಿದರು.

ಪಟ್ಟಣದ ರಸ್ತೆ ಅಭಿವೃದ್ಧಿಗಾಗಿ ಮುಖಂಡರು ವ್ಯಾಪಾರಸ್ಥರು ಮನವಿ ಮಾಡಿದ್ದಾರೆ. ಮುಂದಿನ ವರ್ಷ ಕೊಪ್ಪ ಹಾಗೂ ಶೃಂಗೇರಿ ಪಟ್ಟಣದಲ್ಲಿ ಸುಸಜ್ಜಿತ ರಸ್ತೆ ವಿಸ್ತರಣೆಗೆ ಆದ್ಯತೆ ನೀಡಲಾಗುವುದು.
– ಟಿ.ಡಿ.ರಾಜೇಗೌಡ, ಶಾಸಕ

1600 ಮನೆಗಳಿಗೆ ಶಾಶ್ವತ ಶುದ್ಧ ಕುಡಿಯುವ ನೀರು

ತುಂಗಾ ನದಿ ಬಳಿ ಹೊಸದಾಗಿ ಜಾಕ್‌ವೆಲ್ ಜೊತೆಗೆ ಪಂಪ್‌ಹೌಸ್ ನಿರ್ಮಾಣ ಮಾಡಿ 50 ಎಚ್.ಪಿ ಎರಡು ಪಂಪ್‌ಸೆಟ್ ಅಳವಡಿಸಿ ನೀರು ಸರಬರಾಜಿಗೆ ಮಧ್ಯಂತರ ಯಂತ್ರ ಸ್ಥಾವರ ನಿರ್ಮಾಣ ಮಾಡುವುದು ಹಾಗೂ 70 ಎಚ್.ಪಿ ಎರಡು ಪಂಪ್‌ಸೆಟ್ ಅಳವಡಿಕೆ ಮಾಡುವುದು ಈಗಿರುವ ನೀರು ಶುದ್ಧೀಕರಣ ಘಟಕವನ್ನು ಪುನಶ್ಚೇತನ ಗೊಳಿಸುವುದು.

ನೆಲಮಟ್ಟದಲ್ಲಿ ಸುಮಾರು 3ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಾಣ ಮಾಡುವುದು. ಪಟ್ಟಣ ಪಂಚಾಯಿತಿ ವ್ಯಾಪ್ತಿಯ 70 ಕಿಲೋ ಮೀಟರ್ ಉದ್ದಕ್ಕೆ ಎಚ್.ಡಿ.ಪಿ.ಇ ಪೈಪ್ ಅಳವಡಿಸಿ 1600 ಮನೆಗಳಿಗೆ ನಲ್ಲಿ ಮೂಲಕ ನೀರು ಒದಗಿಸುವುದು ಅಮೃತ್ ಕುಡಿಯುವ ನೀರಿನ ಯೋಜನೆಯಾಗಿದೆ ಎಂದು ಶಾಸಕ ರಾಜೆಗೌಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.