
ಮಾದಕ ವಸ್ತು (ಪ್ರಾತಿನಿಧಿಕ ಚಿತ್ರ)
ಚಿಕ್ಕಮಗಳೂರು: ಪ್ರವಾಸೋದ್ಯಮ ಕ್ಷೇತ್ರ ಬೆಳೆದಂತೆ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಜಾಲವೂ ಹೆಚ್ಚಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಈ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಾಫಿ ನಾಡಿನಲ್ಲಿ ಗಾಂಜಾ ಘಮಲು ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದೆ.
ಕಾಲೇಜು ವಿದ್ಯಾರ್ಥಿಗಳು ಈ ಪ್ರಕರಣದಲ್ಲಿ ಹೆಚ್ಚು ಬಲಿಯಾಗುತ್ತಿದ್ದಾರೆ. ಈ ದುಶ್ಚಟಕ್ಕೆ ಬಲಿಯಾಗಿ ವಿದ್ಯಾರ್ಥಿಗಳು ಶಾಲೆ–ಕಾಲೇಜುಗಳನ್ನು ತೊರೆಯುತ್ತಿರುವುದು ಪೋಷಕರಲ್ಲಿ ಹೆಚ್ಚು ಸಂಕಟ ಮೂಡಿಸಿದೆ.
2023ರಲ್ಲಿ 224 ಪ್ರಕರಣ ದಾಖಲಾಗಿದ್ದರೆ, 2024ರಲ್ಲಿ 227 ಪ್ರಕರಣ ಮತ್ತು 2025ರಲ್ಲಿ 270 ಪ್ರಕಣಗಳು ದಾಖಲಾಗಿವೆ. ಮತ್ತೊಂದೆಡೆ ಮಾದಕ ವಸ್ತು ಜಾಲ ಹೆಚ್ಚಿರುವ ಮೊದಲ ಹತ್ತು ಜಿಲ್ಲೆಗಳಲ್ಲಿ ಚಿಕ್ಕಮಗಳೂರು ಜಿಲ್ಲೆ ಸ್ಥಾನ ಪಡೆದುಕೊಂಡಿದೆ.
ವಾರಾಂತ್ಯ ಎಂದರೆ ಚಿಕ್ಕಮಗಳೂರು ಜಿಲ್ಲೆಗೆ ಹೆಚ್ಚು ಜನ ಬರುವುದು ಸಾಮಾನ್ಯ. ಆದರಲ್ಲೂ ಯುವ ಸಮೂಹ ಜಿಲ್ಲೆಯತ್ತ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಾರೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಒಂದೆಡೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರೆ ಮಾದಕ ವಸ್ತುಗಳ ಜಾಲಕ್ಕೆ ಸಿಲುಕುತ್ತಿರುವ ಯುವ ಸಮೂಹದ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.
ಮಾದಕ ವಸ್ತು ಸೇವಿಸಿ ಸಂಚಾರ ನಿಯಮ ಉಲ್ಲಂಘನೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಸಂದರ್ಭದಲ್ಲಿ ಅನುಮಾನ ಬಂದಾಗ ಹಿಡಿದು ಪ್ರಕರಣ ದಾಖಲಿಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. ಸಿಕ್ಕಿ ಬೀಳುವ ಯುವಕರನ್ನು ಹಿಡಿದು ಪೊಲೀಸ್ ಇಲಾಖೆ ಪ್ರಕರಣ ದಾಖಲಿಸುತ್ತಿದೆ. ಆದರೆ, ಮಾದಕ ವಸ್ತುಗಳನ್ನು ತಂದು ಈ ಯುವ ಸಮೂಹಕ್ಕೆ ಒದಗಿಸುತ್ತಿರುವ ಜಾಲವನ್ನು ಪತ್ತೆ ಮಾಡಬೇಕಿದೆ. ಆ ಮೂಲಕ ಮುಂದಿನ ಪೀಳಿಗೆಯನ್ನು ರಕ್ಷಿಸಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯ.
ಪತ್ತೆಗೆ ಹೊಸ ಕಾರ್ಯತಂತ್ರ
ಮಾದಕ ವಸ್ತುಗಳ ಜಾಲ ಬೇರು ಸಹಿತ ಕಿತ್ತೆಸೆಯಲು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಡ್ರಗ್ಸ್ ಸೇವನೆ ಪತ್ತೆಗೆ ಕಾರ್ಯತಂತ್ರ ರೂಪಿಸಿದೆ.
ಯುವಕರು, ಕಾಲೇಜು ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವುದರಿಂದ ಚಿಕ್ಕಮಗಳೂರು ನಗರ ಸೇರಿ ಜಿಲ್ಲೆಯ ಪ್ರತಿ ಕಾಲೇಜು, ಪ್ರೌಢಶಾಲೆ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸುವುದಕ್ಕೆ ಮುಂದಾಗಿದೆ.
ಚಿಕ್ಕಮಗಳೂರಿನಾದ್ಯಂತ ಡ್ರಗ್ಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಎನ್‌ಸಿಒಆರ್‌ಡಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಈ ತೀರ್ಮಾನಕ್ಕೆ ಬಂದಿದೆ. ಅದರಂತೆ ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಈ ಕಾರ್ಯಾಚರಣೆ ಆರಂಭಿಸಿದೆ.
ಪ್ರಾಯೋಗಿಕವಾಗಿ ಚಿಕ್ಕಮಗಳೂರು ನಗರದ ಸುಮಾರು 8 ರಿಂದ 10 ಶಾಲಾ- ಕಾಲೇಜಿನ ಸುಮಾರು 80 ರಿಂದ 100 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ, ಮಾದಕ ವಸ್ತು ಸೇವನೆ ಪ್ರಕರಣ ಪತ್ತೆಯಾಗಿಲ್ಲ. ಮುಂದಿನ ಹಂತದಲ್ಲಿ ತಾಲ್ಲೂಕು ಹಾಗೂ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲು ಯೋಜನೆಯನ್ನು ಜಿಲ್ಲಾಡಳಿತ ಸಿದ್ಧಪಡಿಸಿದೆ.
ಜಿಲ್ಲೆಯ ಖಾಸಗಿ ಮತ್ತು ಸರ್ಕಾರಿ ಶಾಲಾ –ಕಾಲೇಜುಗಳ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸುವ ಕಾರ್ಯವನ್ನು ಸಮಿತಿ ಮಾಡಿದೆ. ಪ್ರಾಯೋಗಿಕವಾಗಿ ಶೇ 10ರಷ್ಟು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಪರೀಕ್ಷೆಗೆ ಒಳಪಡಿಸುವ ಕಾರ್ಯ ನಡೆಸುತ್ತಿದೆ.
ವಿದ್ಯಾರ್ಥಿಗಳಿಂದ ಮಾದರಿಯನ್ನು ಸೂಕ್ಷ್ಮವಾಗಿ ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತಿದೆ. ಮಕ್ಕಳು ಈ ಚಟಕ್ಕೆ ಬಲಿಯಾಗುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿರುವುದರಿಂದ ಈ ಪರೀಕ್ಷೆ ಮಾಡಲಾಗಿದೆ. ಆದರೆ, ಯಾವ ವಿದ್ಯಾರ್ಥಿಗಳಲ್ಲೂ ಈ ಅಂಶ ಪತ್ತೆಯಾಗದಿರುವುದು ಸಮಾಧಾನದ ವಿಷಯ ಎಂಬುದು ಅಧಿಕಾರಿಗಳ ಅಭಿಪ್ರಾಯ.
ಎಲ್ಲಾ ವಿದ್ಯಾರ್ಥಿಗಳನ್ನೂ ಈ ಪರೀಕ್ಷೆಗೆ ಆಯ್ಕೆ ಮಾಡಿಕೊಳ್ಳದೆ ರ್‍ಯಾಂಡಮ್ ಆಗಿ ಪರೀಕ್ಷೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಗಾಂಜಾ: ಸದ್ದಿಲ್ಲದೆ ಸಾಗಿದೆ ವ್ಯವಸ್ಥಿತ ಮಾರಾಟ
ಮೂಡಿಗೆರೆ: ತಾಲ್ಲೂಕಿನಲ್ಲಿ ಗಾಂಜಾ ಘಾಟು ನಿರಂತರವಾಗಿದ್ದು, ಮಾರಾಟ ವ್ಯವಸ್ಥೆ ಸದ್ದಿಲ್ಲದೆ ವ್ಯವಸ್ಥಿತವಾಗಿ ಸಾಗಿದೆ.
ಸಂತೆ ಮೈದಾನ ಸೇರಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ
ಗಾಂಜಾ ಗಮಲು ನಿರಂತರವಾಗಿದ್ದು, ಸಂಜೆ ವೇಳೆಯಲ್ಲಿ ಆಯಕಟ್ಟಿನ ಪ್ರದೇಶಗಳಲ್ಲಿ ಸೇವನೆ ಚಟುವಟಿಕೆಗಳು ಬಿರುಸಾಗಿರುತ್ತವೆ. ಸಂತೆ ಕಟ್ಟೆಯಲ್ಲಿ ನಿರಾತಂಕವಾಗಿ ತಡರಾತ್ರಿಯವರೆಗೂ ವ್ಯಸನಿಗಳು ಕುಳಿತುಕೊಳ್ಳುವ ದೃಶ್ಯ ಸಾಮಾನ್ಯವಾಗಿರುತ್ತದೆ.
ಹಲವರ ಮೇಲೆ ಪೊಲೀಸರು, ಅಬಕಾರಿ ಇಲಾಖೆಯವರು ಪ್ರಕರಣ ದಾಖಲಿಸಿದರೂ ನಿಯಂತ್ರಣ ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಜಾಡು ಬೆಳೆದಿದೆ. ಮೀನು ಮಾರುವ ನೆಪದಲ್ಲಿ, ಐಸ್ ಕ್ಯಾಂಡಿ ಮಾರುವ ನೆಪದಲ್ಲಿ ಕೆಲವು ಪೆಡ್ಲರ್‌ಗಳು ಗಾಂಜಾ ಸಾಗಾಟದಲ್ಲಿ ನಿರತರಾಗಿದ್ದಾರೆ ಎಂದು ಸಾರ್ವಜನಿಕರು ಬಹಿರಂಗವಾಗಿಯೇ ಆರೋಪಿಸುತ್ತಾರೆ.
ಸೈಕಲ್ ಗಮ್ ವ್ಯಸನ: ಪಟ್ಟಣದಲ್ಲಿ ಸೈಕಲ್ ಪಂಕ್ಚರ್ ಹಾಕುವ ಅಂಟನ್ನು ಸೇದುವ ಹವ್ಯಾಸ ಹಲವರಲ್ಲಿ ವ್ಯಸನವನ್ನಾಗಿಸಿದೆ. ಸೈಕಲ್ ಗಮ್ ಹಚ್ಚಿಕೊಂಡು ನಶೆಯಲ್ಲಿ ತೇಲುವ ಕೃತ್ಯಗಳು ನಡೆಯುತ್ತಿದ್ದು, ಕೆಲವು ಬಾಲಕರು ಕೂಡ ಇಂತಹ ವ್ಯಸನಗಳಿಗೆ ಬಲಿಯಾಗಿರುವುದು ವಿಪರ್ಯಾಸ ಎನ್ನುತ್ತಾರೆ ಸಾರ್ವಜನಿಕರು.
ಮಾದಕ ವ್ಯಸನಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮ ತುರ್ತಾಗಿ ನಡೆಯಬೇಕಿದೆ. ಕಳೆದ ಒಂದು ವರ್ಷದಲ್ಲಿ ಮೂಡಿಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 38, ಬಾಳೂರು ಹಾಗೂ ಬಣಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲಾ 8 ಹಾಗೂ ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಗಾಂಜಾ ಪ್ರಕರಣಗಳು ದಾಖಲಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.