ADVERTISEMENT

ಆಲ್ದೂರು | ಹೆದ್ದಾರಿ ಬದಿ ಒಣಮರ: ತೆರವಿಗೆ ನಿರ್ಲಕ್ಷ್ಯ

ಮಳೆಗಾಲದ ಪೂರ್ವದಲ್ಲಿ ತೆರವುಗೊಳಿಸಲು ಒತ್ತಾಯ

ಜೋಸೆಫ್ ಎಂ.ಆಲ್ದೂರು
Published 29 ಮೇ 2024, 5:49 IST
Last Updated 29 ಮೇ 2024, 5:49 IST
ಹಾಂದಿ ಎಂ.ಎಸ್.ಐ.ಎಲ್ ಮಾಲೀಕ ಚಂದ್ರಶೇಖರ್ ಎಂಬುವವರ ಮನೆಯ ಬಳಿ ಹಾದು ಹೋಗುವ ರಸ್ತೆಯ ಎದುರಿನಲ್ಲಿ ವಿದ್ಯುತ್ ಕಂಬ ಹಾಗೂ ತಂತಿಗೆ ತಾಗಿಕೊಂಡಿರುವ ಮರ
ಹಾಂದಿ ಎಂ.ಎಸ್.ಐ.ಎಲ್ ಮಾಲೀಕ ಚಂದ್ರಶೇಖರ್ ಎಂಬುವವರ ಮನೆಯ ಬಳಿ ಹಾದು ಹೋಗುವ ರಸ್ತೆಯ ಎದುರಿನಲ್ಲಿ ವಿದ್ಯುತ್ ಕಂಬ ಹಾಗೂ ತಂತಿಗೆ ತಾಗಿಕೊಂಡಿರುವ ಮರ   

ಆಲ್ದೂರು: ಹೆದ್ದಾರಿ ಬದಿಯಲ್ಲಿ ಸಾಕಷ್ಟು ಮರಗಳು ಒಣಗಿದ ಸ್ಥಿತಿಯಲ್ಲಿ ಇದ್ದು, ಮಳೆ–ಗಾಳಿಗೆ ಮುರಿದು ಬೀಳುವ ಆತಂಕ ಎದುರಾಗಿದೆ. ಜೊತೆಗೆ, ಕೆಲವೆಡೆ ರಸ್ತೆ ಬದಿಯ ಮರಗಳು ವಿದ್ಯುತ್ ಕಂಬ, ತಂತಿಗೆ ತಾಗುತ್ತಿದ್ದು, ಅಪಾಯ ತಂದೊಡ್ಡುವ ಸಾಧ್ಯತೆಯಿದೆ.

‘20ಕ್ಕೂ ಹೆಚ್ಚು ಅಕೇಶಿಯಾ ಮರಗಳು ವಿದ್ಯುತ್ ಕಂಬಗಳ ಸಮೀಪ ಇವೆ. ಇವನ್ನು ತೆರವುಗೊಳಿಸುವಂತೆ ಆಲ್ದೂರು ವಲಯ ಅರಣ್ಯಾಧಿಕಾರಿಗೆ 2020ರಲ್ಲಿಯೇ ಪತ್ರ ಬರೆದು ಗಮನ ಸೆಳೆಯಲಾಗಿದೆ. ಕಳೆದ ವರ್ಷ ಪುನಃ ದೂರು ನೀಡಿದ್ದರೂ, ಕ್ರಮವಾಗಿಲ್ಲ’ ಎನ್ನುತ್ತಾರೆ ಹಾಂದಿ ಎಂ.ಎಸ್.ಐ.ಎಲ್ ಮಾಲೀಕ ಬಿ.ಯು. ಚಂದ್ರಶೇಖರ್.

‘ಬಿಕೆರೆ, ತುಡುಕೂರು, ತೋರಣ ಮಾವು ಮುಂತಾದ ಕಡೆಗಳಲ್ಲಿ ರಸ್ತೆ ಬದಿಯಲ್ಲಿ ಒಣಗಿರುವ ದೊಡ್ಡ ಮರಗಳು ಇವೆ. ಇವು ಬೀಳುವ ಹಂತದಲ್ಲಿದ್ದು, ತೆರವು ಗೊಳಿಸದಿದ್ದರೆ ವಾಹನ ಸವಾರರ ಮೇಲೆ ‍ಪ್ರಾಣಾಪಾಯವಾಗುವ ಸಾಧ್ಯತೆ ಇದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಗಮನಹರಿಸಬೇಕು’ ಎಂದು ಸಂತೆ ಮೈದಾನ ವಾರ್ಡಿನ ನಿವಾಸಿ ಮಹಮ್ಮದ್ ಅಕ್ರಂ ಒತ್ತಾಯಿಸಿದರು.

ADVERTISEMENT

ಕಾಫಿ ಬೆಳೆಗಾರ ಯಲಗುಡಿಗೆ ಹರೀಶ್ ಮಾತನಾಡಿ, ‘ಹೊಸಳ್ಳಿ ಗ್ರಾಮದ ಮೂಡಿಗೆರೆ ಸಂಪರ್ಕ ಕಲ್ಪಿಸುವ ರಸ್ತೆಯ ತಿರುವಿನಲ್ಲೂ ಎತ್ತರದ ಒಣಮರಗಳು ಇವೆ. ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಸಾರ್ವಜನಿಕರು ಮರ ಕಡಿದರೆ ಅಂಥವರ ಮೇಲೆ ಪ್ರಕರಣ ದಾಖಲಿಸಿಕೊಳ್ಳುವ ಅಧಿಕಾರಿಗಳು, ಇಂತಹ ಮರಗಳನ್ನು ತೆರವುಗೊಳಿಸಿದರೆ ಒಳಿತು’ ಎಂದರು. 

‘ಅಪಾಯ ಸೃಷ್ಟಿಸುವ ಮರಗಳನ್ನು ತೆರವುಗೊಳಿಸಲು ವಲಯ ಅರಣ್ಯಾಧಿಕಾರಿಗಳು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ. ತೆರವುಗೊಳಿಸದೆ ಜೀವ ಹಾನಿಯಾದರೆ, ಸಂಬಂಧಪಟ್ಟ ವ್ಯಾಪ್ತಿಯ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವ ಸೂಚನೆಯನ್ನೂ ನೀಡಲಾಗಿದೆ. ರಸ್ತೆ ಬದಿಯಲ್ಲಿ ಒಣಗಿದ ಮತ್ತು ವಿದ್ಯುತ್ ತಂತಿಗೆ ಸ್ಪರ್ಶಿಸಿರುವ ಮರಗಳು ಇದ್ದಲ್ಲಿ ಅರ ಚಿತ್ರ, ವಿಡಿಯೊವನ್ನು ಸ್ಥಳ ವಿವರದೊಂದಿಗೆ 9481581888 ಈ ಸಂಖ್ಯೆಗೆ ವಾಟ್ಸ್‌ಆ್ಯಪ್ ಮಾಡಬಹುದು. ಇಲ್ಲವಾದಲ್ಲಿ ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಬಹುದು ಎಂದು  ಉಪ ವಿಭಾಗದ ಅರಣ್ಯ ಅಧಿಕಾರಿ ರಮೇಶ್ ಬಾಬು ತಿಳಿಸಿದ್ದಾರೆ.

ರಸ್ತೆ ಬದಿಯಲ್ಲಿ ವಿದ್ಯುತ್ ಕಂಬ ಹಾಗೂ ತಂತಿಗೆ ತಾಗಿಕೊಂಡಿರುವ ಮರ
ಆಲ್ದೂರು ಸಮೀಪದ ತುಡುಕೂರು ಗ್ರಾಮದ ಹೆದ್ದಾರಿ ರಸ್ತೆ ಬದಿಯಲ್ಲಿ ಬೃಹತ್ ಆಗಿ ಒಣಗಿ ಬೀಳುವ ಹಂತದಲ್ಲಿರುವ ಅಕೇಶಿಯಾ ಮರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.