ADVERTISEMENT

ದುರ್ಗಾದೇವಿ ಜನಜಾಗೃತಿ ಧರ್ಮಸಭೆ ಇಂದು

ನವರಾತ್ರಿ ಪೂಜಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2022, 6:05 IST
Last Updated 4 ಅಕ್ಟೋಬರ್ 2022, 6:05 IST

ಬಾಳೆಹೊನ್ನೂರು: ನವರಾತ್ರಿ ಪೂಜಾ ಮಹೋತ್ಸವದ ಅಂಗವಾಗಿ ಅ.4ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ದೇವಿ ಸನ್ನಿಧಿಯಲ್ಲಿ ಸಿಂಹವಾಹಿನಿ ರಾಜರಾಜೇಶ್ವರಿ ಪೂಜಾ ಪಾರಾಯಣ ಹಾಗೂ ಆಯುಧ ಪೂಜೆ ನಡೆಯಲಿದೆ.

ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದ ಸಮಿತಿಯ ಕಾರ್ಯಾಧ್ಯಕ್ಷ ವೈ.ಮೋಹನ್‍ಕುಮಾರ್, ಮಂಗಳವಾರ ಸಂಜೆ 7 ಗಂಟೆಗೆ ನವರಾತ್ರಿ ದುರ್ಗಾದೇವಿ ಜನ ಜಾಗೃತಿ ಧರ್ಮಸಭೆ ಮತ್ತು ಸಮಾರೋಪ ಸಮಾರಂಭ ನಡೆಯಲಿದ್ದು, ಬೆಂಗಳೂರಿನ ವರಮಹಾಲಕ್ಷ್ಮಿ ಸಂಸ್ಥಾನದ ಧರ್ಮಾಧಿಕಾರಿ ನರೇಂದ್ರ ಬಾಬು ಶರ್ಮಾಜಿ (ಬ್ರಹ್ಮಾಂಡ ಗುರೂಜಿ) ಆಶೀರ್ವಚನ ನೀಡಲಿದ್ದಾರೆ.

ಸಮಿತಿಯ ಅಧ್ಯಕ್ಷ ಎಚ್.ಡಿ.ನಾಗೇಶ್ ಹೆಗ್ಡೆ, ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಶಾಸಕ ಟಿ.ಡಿ.ರಾಜೇಗೌಡ, ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಸುಧಾಕರ ಶೆಟ್ಟಿ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಎ.ಕೆ.ಪಿ.ಕೃಷ್ಣ ಪೊದುವಾಳ್ ಅವರಿಗೆ ದುರ್ಗಾ ಗೌರವ ರಕ್ಷೆ ನೀಡಲಾಗುವುದು.

ADVERTISEMENT

ಅ.5ರಂದು ಬೆಳಿಗ್ಗೆ 7 ಗಂಟೆಯಿಂದ ಗಜವಾಹಿನಿ, ಗಜಲಕ್ಷ್ಮೀ ಪೂಜಾ ಪಾರಾಯಣ, ದುರ್ಗಾಹೋಮ ನಡೆಯಲಿದೆ. ಬೆಳಿಗ್ಗೆ 9.30ರಿಂದ ಹಿನ್ನೆಲೆ ಗಾಯಕರಾದ ಸುಮಂತ್ ವಸಿಷ್ಠ, ಅಂಕಿತಾ ಕುಂಡು, ಅರ್ಜುನ್ ಇಟಗಿ ನೇತೃತ್ವದಲ್ಲಿ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ 12 ಗಂಟೆಗೆ ನಡೆಯುವ ಅನ್ನ ಸಂತರ್ಪಣೆಯಲ್ಲಿ 10 ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಮಧ್ಯಾಹ್ನ 2 ಗಂಟೆಗೆ ದುರ್ಗಾದೇವಿಯ ವಿಗ್ರಹದ ಶೋಭಾಯಾತ್ರೆಯು ಮಾರ್ಕಾಂಡೇಶ್ವರ ದೇವಸ್ಥಾನದಿಂದ ಆರಂಭಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.