ADVERTISEMENT

ರೈತ ಬಜಾರ್‌ನಿಂದ ಆರ್ಥಿಕ ಬಲ: ಸಚಿವ ಕೆ.ಜೆ.ಜಾರ್ಜ್

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2025, 12:56 IST
Last Updated 22 ಏಪ್ರಿಲ್ 2025, 12:56 IST
ಕಡೂರಿನಲ್ಲಿ ರೈತ ಬಜಾರ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಉದ್ಘಾಟಿಸಿದರು. ಶಾಸಕ ಕೆ.ಎಸ್.ಆನಂದ್ ಭಾಗವಹಿಸಿದ್ದರು.
ಕಡೂರಿನಲ್ಲಿ ರೈತ ಬಜಾರ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಉದ್ಘಾಟಿಸಿದರು. ಶಾಸಕ ಕೆ.ಎಸ್.ಆನಂದ್ ಭಾಗವಹಿಸಿದ್ದರು.   

ಕಡೂರು: ‘ರೈತರಿಗೆ ಆರ್ಥಿಕ ಪುನಃಶ್ಚೇತನ ನೀಡುವ ನಿಟ್ಟಿನಲ್ಲಿ ರೈತ ಬಜಾರ್ ವಿನೂತನ ಕಲ್ಪನೆಯಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ಕಡೂರಿನ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವು, ಪ್ರಗತಿ ರೈತ ಉತ್ಪಾದಕರ ಕಂಪನಿ ಸಹಯೋಗದಲ್ಲಿ ಆರಂಭಿಸಿದ ರೈತ ಬಜಾರ್ ಉದ್ಘಾಟಿಸಿ ಅವರು ಮಾತನಾಡಿದರು.

ರೈತರ ಕಷ್ಟದ ದುಡಿಮೆಯ ಬಹುಭಾಗ ಮಧ್ಯವರ್ತಿಗಳ ಪಾಲಾಗುತ್ತಿದೆ. ಇದು ತಪ್ಪಬೇಕು. ರೈತರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರೆಯಬೇಕೆಂಬ ನಿಟ್ಟಿನಲ್ಲಿ ಸರ್ಕಾರ ರೈತ ಉತ್ಪಾದಕ ಕಂಪನಿಗಳನ್ನು ಆರಂಭಿಸಲು ಪ್ರೋತ್ಸಾಹ ನೀಡುತ್ತಿದೆ. ಇದರಿಂದ ರೈತರಿಗೆ ಆರ್ಥಿಕ ಬಲ ಲಭಿಸುತ್ತದೆ’ ಎಂದರು. 

ADVERTISEMENT

ರಾಜ್ಯದಲ್ಲಿ ವಿದ್ಯುತ್ ಕೊರತೆಯಿಲ್ಲ. ವಿದ್ಯುತ್ ಉತ್ಪಾದನೆ ಹೆಚ್ಚಳಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ. ಪಾವಗಡದಲ್ಲಿ ರೈತರ ಸಹಯೋಗದಲ್ಲಿ 10 ಸಾವಿರ ಎಕರೆ ಪ್ರದೇಶದಲ್ಲಿ ಏಷ್ಯಾದಲ್ಲೇ ದೊಡ್ಡದಾದ ಸೋಲಾರ್ ಪಾರ್ಕ್ ನಿರ್ಮಾಣವಾಗುತ್ತಿದ್ದು, 2 ಸಾವಿರ ಮೆಗಾವ್ಯಾಟ್‌ ವಿದ್ಯುತ್ ಉತ್ಪಾದನೆ ಮಾಡಲಾಗುವುದು. ಸದ್ಯ ರಾಜ್ಯದಲ್ಲಿ 19,500 ಮೆಗಾವ್ಯಾಟ್‌ ವಿದ್ಯುತ್‌ಗೆ ಬೇಡಿಕೆಯಿದೆ’ ಎಂದರು.

‘ನನೆಗುದಿಗೆ ಬಿದ್ದಿದ್ದ ಕುಸುಮ್ - ಸಿ ಯೋಜನೆಯ ಅನುಷ್ಠಾನಕ್ಕೆ ಸರ್ಕಾರ ಕ್ರಮ ಕೈಗೊಂಡಿದ್ದು ಒಂದು ವರ್ಷದೊಳಗೆ 3 ಸಾವಿರ ಮೆಗಾವ್ಯಾಟ್‌ ವಿದ್ಯುತ್ ಉತ್ಪಾದನೆ ಕಾರ್ಯ ಆರಂಭವಾಗಲಿದೆ. ಕುಸುಮ್ - ಬಿ ಯೋಜನೆಯಲ್ಲಿ ಶೇ 80 ಸಹಾಯಧನದೊಂದಿಗೆ ಕೊಳವೆ ಬಾವಿಗಳಿಗೆ ಸೌರವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಈ ವರ್ಷ 40 ಸಾವಿರ ಪಂಪ್‌ಸೆಟ್‌ಗಳಿಗೆ ಅವಕಾಶವಿದೆ. ರೈತರು ಈ ಅವಕಾಶ ಬಳಸಿಕೊಳ್ಳಬೇಕು ಎಂದರು.

ಟಿಎಪಿಸಿಎಂಎಸ್ ಅಧ್ಯಕ್ಷ ಬಳ್ಳೇಕೆರೆ ವಿಶ್ವನಾಥ್ ಮಾತನಾಡಿ ‘ರೈತ ಉತ್ಪಾದಕ ಕಂಪನಿ ಮತ್ತು ಅನಿಕೇತನ ಸಂಸ್ಥೆಯ ಸಹಯೋಗದಲ್ಲಿ ರೈತ ಬಜಾರ್ ಆರಂಭಗೊಂಡಿದೆ. ಮತ್ತಷ್ಟು ರೈತಪರ ಕಾರ್ಯಗಳನ್ನು ಮಾಡಲು ಚಿಂತನೆ ನಡೆಸಲಾಗಿದೆ’ ಎಂದರು.

ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ರೈತ ಬಜಾರ್ ಸಾಮಾಜಿಕ ಜಾಲತಾಣವನ್ನು ಲೋಕಾರ್ಪಣೆ ಮಾಡಿದರು. ಭದ್ರಾ ಕಾಡಾ ಅಧ್ಯಕ್ಷ ಕೆ.ಪಿ.ಅಂಶುಮಂತ್, ಕಂಸಾಗರ ಸೋಮಶೇಖರ್, ಕೃಷಿಕ ಸಮಾಜದ ಅಧ್ಯಕ್ಷ ಎಸ್.ಎಲ್.ರುದ್ರೇಗೌಡ, ಮಲಿಯಪ್ಪ, ಪುರಸಭಾ ಸದಸ್ಯರು, ರೈತ ಉತ್ಪಾದಕ ಕಂಪನಿ ಪದಾಧಿಕಾರಿಗಳು, ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.