ಕೊಪ್ಪ: ‘ಒಕ್ಕಲಿಗರ ಸಂಘ ಇನ್ನೂ ಹೆಚ್ಚಿನ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಳ್ಳುವಂತಾಗಬೇಕು’ ಎಂದು ರಾಜೀವ್ ಗಾಂಧಿ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಬಿ.ಸಿ.ಭಗವಾನ್ ಹೇಳಿದರು.
ಬಾಳಗಡಿಯಲ್ಲಿರುವ ಎಂ.ಎಸ್.ದ್ಯಾವೇಗೌಡ ಸ್ಮಾರಕ ಒಕ್ಕಲಿಗರ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ತಾಲ್ಲೂಕು ಒಕ್ಕಲಿಗರ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಮುದಾಯದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
‘ವಿದ್ಯಾ ದಾನ ಶ್ರೇಷ್ಠವಾದದ್ದು. ಸಮುದಾಯವು ಮಲೆನಾಡು ಭಾಗದಲ್ಲಿ ವಿದ್ಯಾ ಸಂಸ್ಥೆಗಳನ್ನು ಆರಂಭಿಸಲು ಮುಂದಾಗಬೇಕು. ಉತ್ತರ ಕರ್ನಾಟಕದ ಶೇ 90ರಷ್ಟು ಚುನಾಯಿತ ಪ್ರತಿನಿಧಿಗಳು ವಿದ್ಯಾ ಸಂಸ್ಥೆ ಆರಂಭಿಸಿದ್ದಾರೆ. ಇಲ್ಲಿನ ಒಕ್ಕಲಿಗರ ಸಂಘ ನೀಡುವ ವಿದ್ಯಾ ಪ್ರೋತ್ಸಾಹಧನಕ್ಕೆ ನನ್ನ ತಾಯಿ ಹೆಸರಿನಲ್ಲಿ ದತ್ತಿ ನೀಡಲು ಇಚ್ಚಿಸಿದ್ದೇನೆ’ ಎಂದರು.
ಉತ್ತಮ ಆರೋಗ್ಯಕ್ಕಾಗಿ ಉತ್ತಮ ಆಹಾರ ಅಳವಡಿಸಿಕೊಳ್ಳಬೇಕು. ಅಂಗಾಂಗ ದಾನ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಅದರ ಬಗ್ಗೆ ಅರಿವು ಮೂಡಿಸಬೇಕು. ಪ್ರಸ್ತುತ ಯುವ ಸಮುದಾಯ ಶೇ 22 -30ರಷ್ಟು ಡ್ರಗ್ಸ್ ಹಾಗೂ ಆಲ್ಕೋಹಾಲ್ ವ್ಯಸನಿಗಳಾಗಿದ್ದಾರೆ ಅವರನ್ನು ಸರಿ ದಾರಿಗೆ ತರುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಸನ್ಮಾನ ಸ್ವೀಕರಿಸಿದ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಮೂಲತಃ ಕೃಷಿ ನಂಬಿರುವ ಸಮುದಾಯ ಒಕ್ಕಲಿಗ ಸಮುದಾಯ. ವಿಧಾನ ಸೌಧ ನಿರ್ಮಾತೃ ನಮ್ಮ ಸಮುದಾಯದವರು. ನಮ್ಮ ಸಮುದಾಯ ಸಮಾಜಕ್ಕೆ ಅಪಾರ ಕೊಡುಗೆ ಕೊಟ್ಟಿದೆ. ಆದರೆ ಅದನ್ನು ಹೇಳಲು ಅಂಜಿಕೆ ಏಕೆ? ಎಂದು ಪ್ರಶ್ನಿಸಿದರು.
ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷನಾದ ಬಳಿಕ ಸರ್ವೆ ನಡೆಸಿ, ರಾಜ್ಯಕ್ಕೆ ಮುಂದಿನ ಹತ್ತು ವರ್ಷಗಳಲ್ಲಿ ಬೇಕಾಗುವ ವಿದ್ಯುತ್ ಉತ್ಪಾದನೆ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇರಿಸಲಾಗಿದೆ. ಇಲ್ಲಿನ ಒಕ್ಕಲಿಗರ ಸಂಘಕ್ಕೆ ₹70 ಲಕ್ಷ ಅನುದಾನ ಕೊಡಿಸಿದ್ದೇನೆ. ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾ ಪ್ರೋತ್ಸಾಹ ಧನಕ್ಕೆ ಸಹಾಯ ಮಾಡುತ್ತೇನೆ’ ಎಂದರು.
ಎಂಟೆಕ್‌ನಲ್ಲಿ ಸ್ವರ್ಣ ಪದಕ ವಿಜೇತೆ ಐಸಿರಿ ಕೆ.ಎಸ್.ಕೌಳಿ ಸನ್ಮಾನ ಸ್ವೀಕರಿಸಿ ಮಾತನಾಡಿ, ‘ನಾನು ಮೊದಲು ಕಡಿಮೆ ಅಂಕ ಪಡೆದ ಸಾಮಾನ್ಯ ವಿದ್ಯಾರ್ಥಿಯಾಗಿದ್ದೆ. ಶ್ರಮ ವಹಿಸಿದರೆ ಯಾರು ಕೂಡ ಸಾಧನೆ ಮಾಡಬಹುದು. ನಕಾರಾತ್ಮಕ ಭಾವನೆಗಳಿಂದ ಹೊರ ಬರಬೇಕು. ಅಂಕಕ್ಕಿಂತ ಹೆಚ್ಚು ವ್ಯಕ್ತಿತ್ವ ಮುಖ್ಯವಾಗುತ್ತದೆ. ಜೀವನದಿಂದಲೂ ಹೆಚ್ಚು ಕಲಿಯಲು ಇರುತ್ತದೆ. ಪೋಷಕರು ಮಕ್ಕಳಲ್ಲಿ ಸಕಾರಾತ್ಮಕ ಮನೋಭಾವನೆ ಬೆಳೆಸಿ ಪ್ರೋತ್ಸಾಹಿಸಬೇಕು’ ಎಂದರು.
ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಸಹದೇವ್ ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಯು.ಎಸ್.ಶಿವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘ ಬೆಳೆದು ಬಂದ ಹಾದಿ ಹಾಗೂ ಸಂಘದ ಏಳಿಗೆಗೆ ದೇಣಿಗೆ ನೀಡಿದವರನ್ನು ಸ್ಮರಿಸಿದರು. ಹಾಲ್ಮುತ್ತೂರಿನ ಕೃಷಿಕ ಅನುದೀಪ್ ಗರಡಿಮನೆ, ಕೊಪ್ಪದ ಹಿರಿಯ ಲೆಕ್ಕ ಪರಿಶೋಧಕ ಬಿ.ಎಸ್.ಶ್ರೀನಿವಾಸರಾವ್ ಅವರನ್ನು ಸನ್ಮಾನಿಸಲಾಯಿತು.
ತಾಲ್ಲೂಕು ಒಕ್ಕಲಿಗರ ಸಂಘದ ಉಪಾಧ್ಯಕ್ಷ ಎಚ್.ಜಿ.ವೆಂಕಟೇಶ್, ಖಜಾಂಚಿ ಎಲ್.ಎಂ.ಪ್ರಕಾಶ್ ಕೌರಿ, ಗೌರವ ಕಾರ್ಯದರ್ಶಿ ವಿ.ಡಿ.ನಾಗರಾಜ್, ಜಿಲ್ಲಾ ನಿರ್ದೇಶಕ ಪೃಥ್ವಿರಾಜ್ ಕೌರಿ, ತಾಲ್ಲೂಕು ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಶ್ರೀನಿಧಿ ಇದ್ದರು.
ಎಲ್ಲರೊಳಗೊಂದಾಗಿ ಬದುಕಬೇಕು
ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕ ಅಶ್ವತ್ ಎಸ್.ಎಲ್. ಸನ್ಮಾನ ಸ್ವೀಕರಿಸಿ ಮಾತನಾಡಿ ‘ನನ್ನ ಈ ಸಾಧನೆಗೆ ಮಲೆನಾಡಿನ ಪರಿಸರ ಜನರ ಪ್ರೇರಣೆಯೂ ಕಾರಣ. ಮುಂದೆ ಈ ಭಾಗದಲ್ಲಿ ಒಳ್ಳೆಯ ಶಾಲೆ ಕಟ್ಟುವ ಮನಸು ಇದೆ. ನಾವು ದೇವರಿಗೆ ಸಲ್ಲಿಸುವ ಸೇವೆ ದೇವರನ್ನು ತಲುಪುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಅಶಕ್ತರಿಗೆ ಮಾಡುವ ಸೇವೆಯ ಕಣ ಕಣವು ದೇವರಿಗೆ ಸೇರುತ್ತದೆ. ಆರೋಗ್ಯ ಶಿಕ್ಷಣ ಸೇವೆಯಲ್ಲಿ ಸಮುದಾಯ ತೊಡಗಿಸಿಕೊಳ್ಳಬೇಕು. ಎಲ್ಲರೊಳಗೊಂದಾಗಿ ಬದುಕಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.