ADVERTISEMENT

ಚಿಕ್ಕಮಗಳೂರು ಪರಿಷತ್ ಚುನಾವಣೆ | ಅಭಿವೃದ್ಧಿಗಾಗಿ ಮತ ನೀಡಿ: ಬಿಜೆಪಿ ಅಭ್ಯರ್ಥಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 16:40 IST
Last Updated 26 ನವೆಂಬರ್ 2021, 16:40 IST
ಶೃಂಗೇರಿಯ ಚಪ್ಪರದ ಅಂಜನೇಯ ದೇವಾಲಯದ ಸಭಾಂಗಣದಲ್ಲಿ ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಸಭೆಯಲ್ಲಿ ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿ ಎಂ.ಕೆ ಪ್ರಾಣೇಶ್ ಮಾತನಾಡಿದರು.
ಶೃಂಗೇರಿಯ ಚಪ್ಪರದ ಅಂಜನೇಯ ದೇವಾಲಯದ ಸಭಾಂಗಣದಲ್ಲಿ ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಸಭೆಯಲ್ಲಿ ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿ ಎಂ.ಕೆ ಪ್ರಾಣೇಶ್ ಮಾತನಾಡಿದರು.   

ಶೃಂಗೇರಿ: ‘ವಿಧಾನ ಪರಿಷತ್ ಸದಸ್ಯನಾದ ಬಳಿಕ ಪಕ್ಷಭೇದ ಮರೆತು ಹಾಗೂ ಭ್ರಷ್ಟಾಚಾರ ರಹಿತವಾಗಿ ಕಾರ್ಯ ನಿರ್ವಹಿಸಿದ್ದೇನೆ. ಮುಂದೆಯೂ ಜನಪರ ಕಾಳಜಿಯಿಂದ ಕಾರ್ಯ ನಿರ್ವಹಿಸುತ್ತೇನೆ’ ಎಂದು ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ಎಂ.ಕೆ ಪ್ರಾಣೇಶ್ ಹೇಳಿದರು.

ಶೃಂಗೇರಿಯ ಚಪ್ಪರದ ಅಂಜನೇಯ ದೇವಾಲಯದ ಸಭಾಂಗಣ ದಲ್ಲಿ ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಬಳಿ ಮತ ಯಾಚಿಸಿ ಅವರು ಮಾತನಾಡಿದರು.

‘ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನವನ್ನು ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಯಾಗಿದ್ದ ವೇಳೆ ಹೆಚ್ಚಿಸಲಾಗಿದೆ. ಚುನಾವಣೆಯಲ್ಲಿ ವಿಜೇತನಾದರೆ ಗ್ರಾಮ ಪಂಚಾಯಿತಿಗೆ ಹೆಚ್ಚಿನ ಅನುದಾನ ತರುವಲ್ಲಿ ಶ್ರಮಿಸುತ್ತೇನೆ’ ಎಂದರು.

ADVERTISEMENT

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್ ಮಾತನಾಡಿ, ‘ಪ್ರತಿಬಾರಿ ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷಾತೀತ ವಾಗಿ ನಡೆಯುತ್ತಿದೆ. ಆದರೆ, ಅವರ ಗೆಲುವಿನ ಹಿಂದೆ ಬಿಜೆಪಿ ಕಾರ್ಯಕರ್ತರ ಪರಿಶ್ರಮವಿದೆ. ಸರಳ ವ್ಯಕ್ತಿತ್ವದ ಎಂ.ಕೆ.ಪ್ರಾಣೇಶ್ ಅವರನ್ನು ಗೆಲ್ಲಿಸಬೇಕು. ಕ್ಷೇತ್ರದಲ್ಲಿ ಕಳೆದ ಬಾರಿ ವಿಧಾನಸಭಾ ಚುನಾವಣೆಯ ಸೋಲಿನಿಂದ ನಾವು ಪಾಠ ಕಲಿಯುತ್ತಿದ್ದೇವೆ’ ಎಂದರು.

ಅಡ್ಡಗದ್ದೆ ಗ್ರಾಮ ಪಂಚಾಯಿತಿ ಸದಸ್ಯೆ ನಾಗರತ್ನ ಕಾಂಗ್ರೆಸ್‍ನಿಂದ ಬಿಜೆಪಿ ಸೇರ್ಪಡೆಗೊಂಡರು.

ಬಿಜೆಪಿ ಮಂಡಲ ಅಧ್ಯಕ್ಷ ತಲಗಾರು ಉಮೇಶ್, ಶೃಂಗೇರಿ ಮಂಡಲ ಪ್ರಭಾರಿ ದೀಪಕ್ ದೊಡ್ಡಯ್ಯ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಎ.ಎಸ್.ನಯನ, ಪ್ರಧಾನ ಕಾರ್ಯದರ್ಶಿ ಅಂಬ್ಲೂರು ರಾಮಕೃಷ್ಣ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಮಸ್ವಾಮಿ, ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷ ಸಂದೀಪ್ ಇದ್ದರು.

‘ಚುನಾವಣೆ ಬಹಿಷ್ಕಾರ ಬೇಡ’
‘ನೂರು ಹಾಸಿಗೆ ಆಸ್ಪತ್ರೆ ಹೋರಾಟ ಸಮಿತಿ’ ಅವರು ಚುನಾವಣೆ ಬಹಿಷ್ಕರಿಸಿ ಮತದಾನದ ಹಕ್ಕನ್ನು ಕಳೆದು ಕೊಳ್ಳಬಾರದು. ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಜಿಲ್ಲಾಡಳಿತದಿಂದ ಜಾಗ ಹುಡುಕುವ ಪ್ರಕ್ರಿಯೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಶಾಸಕ ಟಿ.ಡಿ ರಾಜೇಗೌಡ ಹೆಚ್ಚಿನ ಗಮನ ನೀಡಬೇಕು. ಅವರು ಹೇಳಿದ ಹಾಗೆ ಆಸ್ಪತ್ರೆಯ ಕಟ್ಟಡಕ್ಕಾಗಿ ತಾಲ್ಲೂಕು ಪಂಚಾಯಿತಿ ಕಚೇರಿಯನ್ನು ಒಡೆಯುವುದು ಮತ್ತು ಎನ್.ಆರ್ ಪುರ ತಾಲ್ಲೂಕಿನ ಅರಣ್ಯ ಇಲಾಖೆ ಡಿಪೋದಲ್ಲಿ ವಸತಿ ನಿರ್ಮಿಸಲು ನೀಡಿದ ಭರವಸೆ ಎಷ್ಟು ಸರಿ ಎಂದು ಡಿ.ಎನ್ ಜೀವರಾಜ್ ಪ್ರಶ್ನಿಸಿದರು.

ಒಳ್ಳೆಯ ಸರ್ಕಾರಿ ಕಟ್ಟಡಗಳನ್ನು ಒಡೆದು ಹಾಕಿ ಮತ್ತೊಂದು ಕಟ್ಟಡಕ್ಕೆ ಅನುವು ಮಾಡಿಕೊಡುವುದು ಸರಿಯಲ್ಲ, ಕೈಯಲ್ಲಿ ಆಗುವುದನ್ನು ಮಾತ್ರ ಮಾಡಬೇಕು ಎಂದು ಜೀವರಾಜ್ ಗುಡುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.