ADVERTISEMENT

ಮೂಡಿಗೆರೆ | ಜೋತುಬಿದ್ದ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು

6 ತಿಂಗಳಿಂದ ಹೇಮಾವತಿ ನದಿನೀರಿನಲ್ಲಿ ಜೋತುಬಿದ್ದ ವಿದ್ಯುತ್ ತಂತಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 6:42 IST
Last Updated 8 ಫೆಬ್ರುವರಿ 2026, 6:42 IST
ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿ ಗ್ರಾಮದ ಬಳಿ ಹೇಮಾವತಿ ನದಿಯಲ್ಲಿ ವಿದ್ಯುತ್ ತಗುಲಿ ಸಂತೋಷ್ ಎಂಬುವವರು ಸಾವನ್ನಪ್ಪಿದ್ದು ಸ್ಥಳದಲ್ಲಿ ಗ್ರಾಮಸ್ಥರು ಜಮಾಯಿಸಿದ್ದರು
ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿ ಗ್ರಾಮದ ಬಳಿ ಹೇಮಾವತಿ ನದಿಯಲ್ಲಿ ವಿದ್ಯುತ್ ತಗುಲಿ ಸಂತೋಷ್ ಎಂಬುವವರು ಸಾವನ್ನಪ್ಪಿದ್ದು ಸ್ಥಳದಲ್ಲಿ ಗ್ರಾಮಸ್ಥರು ಜಮಾಯಿಸಿದ್ದರು   

ಮೂಡಿಗೆರೆ: ಹೇಮಾವತಿ ನದಿಯಲ್ಲಿ ಜೋತುಬಿದ್ದಿದ್ದ ವಿದ್ಯುತ್ ತಂತಿಯಿಂದ ವಿದ್ಯುತ್ ತಗುಲಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲ್ಲೂಕಿನ ದಾರದಹಳ್ಳಿ ಗ್ರಾಮದ ಬಳಿ ಶುಕ್ರವಾರ ನಡೆದಿದೆ.

ಜೋಗಣ್ಣಕೆರೆ ಗ್ರಾಮದ ಸಚಿನ್ ನಗರದ ನಿವಾಸಿ, ಮೆಸ್ಕಾಂನಲ್ಲಿ ಹಿಂದೆ ಹೊರಗುತ್ತಿಗೆ ನೌಕರರಾಗಿದ್ದ ಸಂತೋಷ್ (34) ಮೃತಪಟ್ಟವರು. ಅವರು ತಮ್ಮ ಪತ್ನಿಯೊಂದಿಗೆ ಹೇಮಾವತಿ ನದಿಗೆ ತೆರಳಿದ್ದರು. ಈ ವೇಳೆ ಪತ್ನಿ ಬಟ್ಟೆ ತೊಳೆಯುತ್ತಿದ್ದಾಗ, ನದಿಯಲ್ಲಿ ಮೀನು ಹಿಡಿಯುತ್ತಿದ್ದ ಸಂತೋಷ್ ಅವರ ಮೇಲೆ ನದಿನೀರಿನಲ್ಲಿ ತೇಲುತ್ತಿದ್ದ ವಿದ್ಯುತ್ ತಂತಿಯಿಂದ ವಿದ್ಯುತ್ ಪ್ರವಹಿಸಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಷಯ ತಿಳಿದ ಕೂಡಲೇ ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿ ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಆರೋಪಿಸಿ ಪ್ರತಿಭಟನೆ ನಡೆಸಿದರು. ಮೃತ ವ್ಯಕ್ತಿಯ ಕುಟುಂಬಕ್ಕೆ ಸ್ಥಳದಲ್ಲೇ ₹10 ಲಕ್ಷ ಪರಿಹಾರ ನೀಡಬೇಕು, ಅಲ್ಲಿವರೆಗೂ ಮೃತ ದೇಹವನ್ನು ತೆರವುಗೊಳಿಸುವುದಿಲ್ಲ ಎಂದು ಪಟ್ಟುಹಿಡಿದರು. ಸ್ಥಳಕ್ಕೆ ಭೇಟಿ ನೀಡಿದ ಮೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಯತ್ನಿಸಿದರೂ ಫಲ ನೀಡಲಿಲ್ಲ. ರಾತ್ರಿ ವೇಳೆಗೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆ ಬಳಿಕ ಮೆಸ್ಕಾಂ ಅಧಿಕಾರಿಗಳು ₹7.50 ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು. ಬಳಿಕ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.

ಮೃತರಿಗೆ ಪತ್ನಿ, ಪುತ್ರ, ಪುತ್ರಿಯಿದ್ದಾರೆ. ಶನಿವಾರ ಅಂತ್ಯಕ್ರಿಯೆ ನಡೆಸಲಾಯಿತು. ಸಿಪಿಐ ಕೆ.ವಿ. ರಾಜಶೇಖರ್, ಮೂಡಿಗೆರೆ ಪಿಎಸ್ಐ ಹರ್ಷವರ್ಧನ್, ಗೋಣಿಬೀಡು ಪಿಎಸ್ಐ ಶ್ರೀನಾಥ್ ರೆಡ್ಡಿ, ಮೆಸ್ಕಾಂ ಅಧಿಕಾರಿಗಳಾದ ಜಿತೇಂದ್ರ ಕುಮಾರ್, ರವಿ ಕುಮಾರ್, ಷಣ್ಮುಖ ಸ್ಥಳದಲ್ಲಿದ್ದರು. ಮೃತರ ಪತ್ನಿ ಶಿಲ್ಪ ನೀಡಿದ ದೂರಿನನ್ವಯ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೆಸ್ಕಾಂನವರ ನಿರ್ಲಕ್ಷ್ಯದಿಂದ 6 ತಿಂಗಳಿಂದ ವಿದ್ಯುತ್ ತಂತಿ ಕಂಬದಲ್ಲಿ ಸಡಿಲಗೊಂಡು, ಹೇಮಾವತಿ ನದಿನೀರಿನಲ್ಲಿ ಜೋತುಬಿದ್ದಿತ್ತು. ನಿರ್ಜನ ಪ್ರದೇಶವಾಗಿದ್ದರಿಂದ ಇದುವರೆಗೂ ಅನಾಹುತ ಸಂಭವಿಸಿರಲಿಲ್ಲ. ಇದೀಗ ಮೀನು ಹಿಡಿಯಲು ತೆರಳಿದ್ದ ಸಂತೋಷ್ ಬಲಿಯಾಗಿದ್ದಾರೆ. ತಾಲ್ಲೂಕಿನ ವಿವಿಧೆಡೆ ಕಾಫಿ ತೋಟಗಳು, ಶಾಲೆಗಳ ಚಾವಣಿ ಮೇಲ್ಭಾಗದಲ್ಲಿ ಅಪಾಯಕಾರಿಯಾಗಿ ವಿದ್ಯುತ್ ತಂತಿಗಳು ಹಾದುಹೋಗಿವೆ. ಅವುಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದರೂ ಸ್ಪಂದನೆ ಇಲ್ಲ. ಇನ್ನಾದರೂ ಮೆಸ್ಕಾಂ ಅಧಿಕಾರಿಗಳು ಎಚ್ಚೆತ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನಿಯಮಾನುಸಾರ ಪರಿಹಾರ

ತಾಲ್ಲೂಕಿನಾದ್ಯಂತ 11 ಕೆ ವಿ ವಿದ್ಯುತ್ ಲೈನ್ 96 ಕಿ.ಮೀ, ಸಾಮಾನ್ಯ ಲೈನ್ 250 ಕಿ.ಮೀ ಹಾದುಹೋಗಿದೆ. ಶೇ 30 ಸಿಬ್ಬಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು, ಶೇ 70ರಷ್ಟು ಸಿಬ್ಬಂದಿ ಕೊರತೆಯಿದೆ. ಮಳೆಗಾಲದಲ್ಲಿ ಮಾನ್ಸೂನ್ ಗ್ಯಾಂಗ್ ಮ್ಯಾನ್‌ಗಳನ್ನು ನೇಮಿಸಿಕೊಳ್ಳಲು ಅವಕಾಶವಿದೆ. ಬೇಸಿಗೆಯಲ್ಲಿ ಇರುವ ಸಿಬ್ಬಂದಿಗಳನ್ನು ಬಳಸಿ ನಿರ್ವಹಣೆ ಮಾಡಬೇಕಾಗಿದೆ. ದಾರದಹಳ್ಳಿ ಗ್ರಾಮದ ಕಂಬದಲ್ಲಿ ತಂತಿ ಸಡಿಲಗೊಂಡು ಹೇಮಾವತಿ ನದಿಯೊಳಗೆ ಜೋತು ಬಿದ್ದ ಕಾರಣ ಅಲ್ಲಿಗೆ ತೆರಳಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ. ಇಲಾಖೆಯ ನಿಯಮಾನುಸಾರ ಮೃತ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಲಾಗುವುದು ಎಂದು  ಮೆಸ್ಕಾಂ ಎಇಇ ಜಿತೇಂದ್ರ ಕುಮಾರ್ ಹೇಳಿದರು.

ಸಂತೋಷ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.