ADVERTISEMENT

ಕಾಡಾನೆ ದಾಳಿ: ವಲಸೆ ಕಾರ್ಮಿಕ ಮಹಿಳೆ ಬಲಿ

ಕತ್ತಲೆಕಾನ್ ಕಾಫಿ ತೋಟದಲ್ಲಿ ವಲಸೆ ಕಾರ್ಮಿಕ ಮಹಿಳೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2025, 16:01 IST
Last Updated 8 ಫೆಬ್ರುವರಿ 2025, 16:01 IST
ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ವಿನೋದಾ ಬಾಯಿ ಅವರ ಪುತ್ರಿ ಮತ್ತು ಪತಿಗೆ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಮತ್ತು ತರೀಕೆರೆ ಶಾಸಕ ಜಿ.ಹೆಚ್. ಶ್ರೀನಿವಾಸ್ ಅವರು ₹15 ಲಕ್ಷದ ಚೆಕ್ ವಿತರಿಸಿದರು.
ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ವಿನೋದಾ ಬಾಯಿ ಅವರ ಪುತ್ರಿ ಮತ್ತು ಪತಿಗೆ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಮತ್ತು ತರೀಕೆರೆ ಶಾಸಕ ಜಿ.ಹೆಚ್. ಶ್ರೀನಿವಾಸ್ ಅವರು ₹15 ಲಕ್ಷದ ಚೆಕ್ ವಿತರಿಸಿದರು.   

ತರೀಕೆರೆ: ಭದ್ರಾ ಅಭಯಾರಣ್ಯದ ತಣಿಗೆಬೈಲು ವಲಯದ ಕತ್ತಲೆಕಾನ್ ಕಾಫಿ ತೋಟದಲ್ಲಿ ವಲಸೆ ಕಾರ್ಮಿಕ ಮಹಿಳೆ ಮೇಲೆ ಆನೆ ದಾಳಿ ನಡೆಸಿದ್ದು, ವಿಜಯನಗರ ಜಿಲ್ಲೆಯಿಂದ ಬಂದಿದ್ದ ವಲಸೆ ಕಾರ್ಮಿಕ ಮಹಿಳೆ ವಿನೋದಾ ಬಾಯಿ (39) ಮೃತಪಟ್ಟಿದ್ದಾರೆ.

ಶನಿವಾರ ಬೆಳಿಗ್ಗೆ ಎಂದಿನಂತೆ ಕಾಫಿ ಹಣ್ಣು ಕೊಯ್ಲಿಗೆ ಕಾಫಿ ತೋಟಕ್ಕೆ ಇತರ ಕಾರ್ಮಿಕರೊಂದಿಗೆ ತೆರಳಿದ್ದರು.  ಈ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ಮೂರು ಕಾಡಾನೆಗಳಲ್ಲಿ ಒಂದು ಆನೆ ಮಹಿಳೆಯರ ಮೇಲೆ ದಾಳಿ ನಡೆಸಿದೆ. 

ವಿನೋದಾ ಬಾಯಿ ಅವರ ಪುತ್ರಿ ಸೇರಿ ಬೇರೆಲ್ಲಾ ಕಾರ್ಮಿಕರು ಅಲ್ಲಿಂದ ಓಡಿ ಹೋಗಿದ್ದು, ಆನೆಗಳ ಹತ್ತಿರದಲ್ಲೇ ಇದ್ದ ವಿನೋದಾ ಬಾಯಿ ಹೆಚ್ಚು ದೂರ ಓಡಲು ಸಾಧ್ಯವಾಗಲಿಲ್ಲ. ಆನೆ ಕಾಲಿಗೆ ಸಿಕ್ಕಿದ ಅವರು ಸ್ಥಳದಲ್ಲೇ ಮೃತಪಟ್ಟರು.

ADVERTISEMENT

ವಿನೋದಾ ಬಾಯಿ ವಿಜಯನಗರ ಜಿಲ್ಲೆ, ಹರಪ್ಪನಹಳ್ಳಿ ತಾಲ್ಲೂಕಿನ ಶಿವಪುರ ಗ್ರಾಮದ ವೆಂಕಟೇಶನಾಯ್ಕ ಅವರ ಪತ್ನಿಯಾಗಿದ್ದು, ಪತಿ, ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಭದ್ರಾ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಸಂತೋಷ್‍ ಸಾಗರ್ ಮತ್ತು ಭದ್ರಾ ವನ್ಯಜೀವಿ ತಣಿಗೆಬೈಲು ವಲಯದ ಅರಣ್ಯಾಧಿಕಾರಿ ಸುಧಾಕರ್ ತರೀಕೆರೆ ಸಾರ್ವಜನಿಕ ಆಸ್ಪತ್ರೆಗೆ ಶವ ಸಾಗಿಸಿದರು.

ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಮತ್ತು ತರೀಕೆರೆ ಶಾಸಕ ಜಿ.ಎಚ್. ಶ್ರೀನಿವಾಸ್ ಅವರು ತರೀಕೆರೆ ಸಾರ್ವಜನಿಕ ಆಸ್ಪತ್ರೆ ಬಳಿಗೆ ಬಂದು ಮೃತರ ಸಂಬಂಧಿಕರಿಗೆ ಸಾಂತ್ವಾನ ಹೇಳಿದರು. ಮೃತರ ಕುಟುಂಬಕ್ಕೆ ₹15 ಲಕ್ಷ ಪರಿಹಾರದ ಚೆಕ್ ವಿತರಿಸಿದರು.

ಶಾಸಕ ಎ ಭದ್ರಾವತಿ ಡಿಸಿಎಫ್ ಆಶೀಷ್ ರೆಡ್ಡಿ, ಚಿಕ್ಕಮಗಳೂರು ಡಿಸಿಎಫ್‌ ರಮೇಶ್‍ಬಾಬು, ಕೊಪ್ಪ ಡಿಸಿಎಫ್‌ ನಂದೀಶ್,  ಭದ್ರಾ ಅಭಯಾರಣ್ಯ ಎಸಿಎಫ್ ಸಂತೋಷ್‍ ಸಾಗರ್, ಚಿಕ್ಕಮಗಳೂರು ಎಸಿಎಫ್ ಶಿವರಾತ್ರೇಶ‍್ವರ್, ಆರ್‌ಎಫ್‌ಒ ಸುಧಾಕರ, ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ದೇವರಾಜ್,  ತರೀಕೆರೆ ಬಂಜಾರ ಸಮಾಜದ ಮುಖಂಡರಾದ ಎಚ್.ಎಲ್. ಮಂಜುನಾಥ್, ಎನ್.ಟಿ. ಶೇಷಗಿರಿನಾಯ್ಕ, ಚಂದ್ರನಾಯ್ಕ, ಕೃಷ್ಣನಾಯ್ಕ, ರಮೇಶನಾಯ್ಕ ಇದ್ದರು.

2 ತಿಂಗಳಲ್ಲಿ ನಾಲ್ಕು ಸಾವು: ಟಿ.ಡಿ.ರಾಜೇಗೌಡ ಎರಡೂವರೆ ತಿಂಗಳಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಡಾನೆ ಮತ್ತು ಕಾಡುಕೋಣದ ದಾಳಿಯಿಂದ ನಾಲ್ವರು ಜೀವ ಕಳೆದುಕೊಂಡಿದ್ದಾರೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು. ‘ಆನೆ ಮತ್ತು ಕಾಡುಕೋಣಗಳನ್ನ ಸೂಕ್ತ ಪ್ರದೇಶಕ್ಕೆ ಸ್ಥಳಾಂತರಬೇಕು. ನನ್ನ ಕ್ಷೇತ್ರದಲ್ಲಿ ಸುಮಾರು 84 ಕಿಲೋ ಮೀಟರ್ ರೈಲ್ವೆ ಬ್ಯಾರಿಕೇಟ್‍ ಅವಶ್ಯಕತೆ ಇದೆ. ಅರಣ್ಯ ಇಲಾಖೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದರು. ಎಸ್ಟೇಟ್ ಮಾಲೀಕರಿಂದ ಮತ್ತು ಕಾರ್ಮಿಕರ ವಿಮೆಯಿಂದ ದೊರೆಯುವ ಎಲ್ಲಾ ಸೌಲಭ್ಯ ಕೊಡಿಸಲಾಗುವುದು. ಮೃತರ ಪುತ್ರಿಗೆ ಅರಣ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಶಾಸಕ ಜಿ.ಎಚ್‌.ಶ್ರೀನಿವಾಸ್ ಮಾತನಾಡಿ ತರೀಕೆರೆ ತಾಲ್ಲೂಕಿನಲ್ಲಿ ಕಾಡಾನೆಗಳ ಓಡಾಟದ ಪ್ರದೇಶ ಸುಮಾರು 40 ಕಿಲೋ ಮೀಟರ್‌ಗೂ ಹೆಚ್ಚಿದೆ. ಆನೆಗಳು ಜನವಸತಿ ಪ್ರದೇಶದ ಕಡೆಗೆ ದಾಟದಂತೆ ರೈಲ್ವೆ ಬ್ಯಾರಿಕೇಟ್‍ ಅಳವಡಿಸಲು ಸುಮಾರು ₹50 ಕೋಟಿ ಅನುದಾನ ಬೇಕಾಗಬಹುದು ಎಂದು ಹೇಳಿದರು. ‘ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಲಾಗುವುದು. ಅಲ್ಲದೇ ಅರಣ್ಯ ಸಚಿವರು ಮತ್ತು ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಾಕಷ್ಟು ಬಾರಿ ಚರ್ಚಿಸಲಾಗಿದೆ. ಕಾಡಿನೊಳಗೆ ಆನೆಗಳಿಗೆ ಬೇಕಾಗುವ ಎಲ್ಲಾ ರೀತಿಯ ಮೇವು ದೊರೆಯುವಂತೆ ಮಾಡವುದು ಸೂಕ್ತ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.