ADVERTISEMENT

ಮೂಡಿಗೆರೆ: ಕಾಡಾನೆಗಳ ದಾಳಿ, ಬೆಳೆ ನಾಶ

ಫಸಲು ಕಟ್ಟಿದ ಕಾಫಿ ಗಿಡಗಳ ತುಳಿದು ಹಾನಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 1:45 IST
Last Updated 23 ಸೆಪ್ಟೆಂಬರ್ 2020, 1:45 IST
ಮೂಡಿಗೆರೆ ತಾಲ್ಲೂಕಿನ ಮೂಲರಹಳ್ಳಿ ಗ್ರಾಮದ ಅಶೋಕ್ ಅವರ ಕಾಫಿ ತೋಟಕ್ಕೆ ಕಾಡಾನೆಗಳು ದಾಳಿ ನಡೆಸಿ ಗಿಡಗಳನ್ನು ಮುರಿದಿರುವುದು
ಮೂಡಿಗೆರೆ ತಾಲ್ಲೂಕಿನ ಮೂಲರಹಳ್ಳಿ ಗ್ರಾಮದ ಅಶೋಕ್ ಅವರ ಕಾಫಿ ತೋಟಕ್ಕೆ ಕಾಡಾನೆಗಳು ದಾಳಿ ನಡೆಸಿ ಗಿಡಗಳನ್ನು ಮುರಿದಿರುವುದು   

ಮೂಡಿಗೆರೆ: ತಾಲ್ಲೂಕಿನ ಮೂಲರಹಳ್ಳಿ ಗ್ರಾಮದಲ್ಲಿ ಮಂಗಳವಾರ ಕಾಡಾನೆಗಳು ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆ ಹಾನಿಗೊಳಿಸಿವೆ.

ಗುತ್ತಿ, ಮೂಲರಹಳ್ಳಿ, ದೇವರಮನೆ ಭಾಗಗಳಲ್ಲಿ ನಾಲ್ಕೈದು ದಿನಗಳಿಂದಲೂ ಮೂರು ಕಾಡಾನೆಗಳ ತಂಡ ನಿರಂತರ ವಾಗಿ ದಾಳಿ ನಡೆಸುತ್ತಿವೆ. ಮಂಗಳವಾರ ನಸುಕಿನ ವೇಳೆಯಲ್ಲಿ ಗುತ್ತಿ ಭಾಗದಿಂದ ಮೂಲರಹಳ್ಳಿ ಗ್ರಾಮಕ್ಕೆ ಬಂದ ಕಾಡಾನೆಗಳು, ಗ್ರಾಮದ ಅಶೋಕ್ ಎಂಬುವವರ ಕಾಫಿ ತೋಟದಲ್ಲಿ ತಿರುಗಾಡಿ, ಫಸಲು ಕಟ್ಟಿದ ಕಾಫಿ ಗಿಡ ಗಳನ್ನು ತುಳಿದು ಹಾನಿಗೊಳಿಸಿವೆ. ಬಳಿಕ ಗಣೇಶ್ ಎಂಬುವವರ ಭತ್ತದ ಗದ್ದೆಗೆ ಇಳಿದು ನಾಟಿ ಮಾಡಿದ್ದ ಸುಮಾರು ಒಂದುವರೆ ಎಕರೆ ಭತ್ತದ ಗದ್ದೆಯನ್ನು ನಾಶಗೊಳಿಸಿವೆ. ದೇವರಮನೆ ಗ್ರಾಮದತ್ತ ತೆರಳಿರುವ ಕಾಡಾನೆಗಳು ರಘು, ಮಹೇಶ ಎಂಬುವವರ ಭತ್ತದ ಗದ್ದೆಗಳನ್ನೂ ಹಾಳು ಮಾಡಿವೆ.

‘ಪ್ರತಿ ವರ್ಷವೂ ಕಾಡಾನೆಗಳ ದಾಳಿಯಿಂದ ಪಾರಾಗಲು, ಗದ್ದೆಗಳಲ್ಲಿ ಟೆಂಟ್ ಹಾಕಿಕೊಂಡು ರಾತ್ರಿಯಿಡೀ ಕಾಯುತ್ತಿದ್ದೆವು. ಈ ಬಾರಿಯೂ ಒಂದು ತಿಂಗಳ ಕಾಲ ಗದ್ದೆಯಲ್ಲೇ ಮಲಗಿದ್ದೆವು. ಆದರೆ, ಮಳೆ ಜೋರಾಗಿರುವುದರಿಂದ ಒಂದು ವಾರದಿಂದ ಕಾವಲು ಕಾಯಲಾಗಲಿಲ್ಲ. ನಾಟಿ ಮಾಡಿದ್ದ ಪೈರೆಲ್ಲವನ್ನೂ ನಾಶ ಮಾಡಿರುವುದರಿಂದ ಸಸಿಮಡಿ ನಿರ್ಮಾಣ, ಗದ್ದೆ ಉಳುಮೆ, ನಾಟಿ ಸೇರಿದಂತೆ ಇಡೀ ಕಾರ್ಯವೇ ನೀರಿನಲ್ಲಿ ಹೋಮ ಮಾಡಿದಂತಾಗಿದೆ’ ಎಂದು ರೈತ ಗಣೇಶ್ ಅಳಲು ತೋಡಿಕೊಂಡರು.

ADVERTISEMENT

ಕುಂದೂರಿನಲ್ಲೂ ಕಾಡಾನೆ ದಾಳಿ: ತಾಲ್ಲೂಕಿನ ಎಸ್ಟೇಟ್ ಕುಂದೂರು ಗ್ರಾಮದಲ್ಲೂ ಮಂಗಳವಾರ ಬೆಳಿಗ್ಗೆ ಎರಡು ಕಾಡಾನೆಗಳು ಕಾಣಿಸಿಕೊಂಡು ಭಯದ ವಾತಾವರಣ ಸೃಷ್ಟಿಸಿವೆ. ಮಂಗಳವಾರ ಬೆಳಿಗ್ಗೆ 6.30ರ ಸುಮಾರಿಗೆ ತತ್ಕೊಳ ಮೀಸಲು ಅರಣ್ಯ ಪ್ರದೇಶದಿಂದ ಗ್ರಾಮಕ್ಕೆ ಬಂದ ಎರಡು ಕಾಡಾನೆಗಳು ಸುಮಾರು ಅರ್ಧ ಕಿ.ಮೀ.ಯಷ್ಟು ದೂರ ರಸ್ತೆಯಲ್ಲೇ ನಡೆದುಕೊಂಡು ಸಾಗಿವೆ.

‘ಕಾಡಾನೆಗಳನ್ನು ಕಂಡು ಬೀದಿ ನಾಯಿಗಳು ಬೊಗಳಿದಾಗ ಮನೆ ಯಿಂದ ಹೊರ ಬಂದ ಹಲವರು ಕಾಡಾನೆಗಳು ರಸ್ತೆಯಲ್ಲಿ ಸಾಗುತ್ತಿರು ವುದನ್ನು ಕಂಡು ಭಯಭೀತರಾಗಿದ್ದಾರೆ. ಬಳಿಕ ಕುಂಡ್ರ ಗ್ರಾಮದ ಅರಣ್ಯ ಪ್ರದೇಶದತ್ತ ಸಾಗಿದವು’ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.