
ನರಸಿಂಹರಾಜಪುರ ತಾಲ್ಲೂಕು 9ನೇ ಮೈಲಿಕಲ್ಲು ಗ್ರಾಮದ ಮೂಡೋಡಿ ಬಳಿ ಕಾರಿನ ಮೇಲೆ ಆನೆ ಬಿದ್ದ ಪರಿಣಾಮ ಕಾರು ಜಖಂ ಆಗಿರುವುದು
ನರಸಿಂಹರಾಜಪುರ: ತಾಲ್ಲೂಕು ಕೇಂದ್ರದಿಂದ ಬಾಳೆಹೊನ್ನೂರಿಗೆ ಸಂಪರ್ಕಿಸುವ ಮುಖ್ಯರಸ್ತೆಯ 9ನೇ ಮೈಲಿಕಲ್ಲು ಬಳಿ ಕಾಡಾನೆಯು ರಸ್ತೆ ದಾಟುವಾಗ ಅಡ್ಡ ಬಂದ ಕಾರಿನ ಮೇಲೆ ಆನೆ ಬಿದ್ದಿದ್ದು, ಕಾರಿಗೆ ಹಾನಿಯಾಗಿದೆ.
ನರಸಿಂಹರಾಜಪುರದಿಂದ ಆಡುವಳ್ಳಿ ಗ್ರಾಮದ ಬುರದ ಮನೆ ನಿವಾಸಿ ಪ್ರದೀಪ್ ಎಂಬುವರು ತಮ್ಮ ಊರಿಗೆ ಶನಿವಾರ ಕಾರಿನಲ್ಲಿ ಹೋಗುವಾಗ ಮುಡೋಡಿ ಬಳಿ ಎರಡು ಕಾಡಾನೆಗಳು ರಸ್ತೆ ದಾಡುತ್ತಿದ್ದವು. ಒಂದು ಕಾಡಾನೆ ರಸ್ತೆ ದಾಟಿದ್ದು ಇನ್ನೊಂದು ಕಾಡಾನೆ ದಾಟುವಾಗ ಕಾರು ಗುದ್ದಿದೆ. ಕಾರಿನ ಮೇಲೆ ಬಿದ್ದ ಆನೆ ಎದ್ದು ರಸ್ತೆ ದಾಟಿ ಹೋಗಿದೆ. ಆನೆ ಬಿದ್ದ ರಭಸಕ್ಕೆ ಕಾರಿಗೆ ಹಾನಿಯಾಗಿದೆ. ಇದು ಉದ್ದೇಶ ಪೂರ್ವಕವಾಗಿ ನಡೆದ ದಾಳಿಯಲ್ಲ ಎಂದು ಅರಣ್ಯ ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ.
ಈ ಭಾಗದ ಅರಣ್ಯ ಪ್ರದೇಶದಲ್ಲಿ ಹಲವು ದಿನಗಳಿಂದ ನಾಲ್ಕು ಕಾಡಾನೆಗಳು ಬೀಡು ಬಿಟ್ಟಿವೆ. ಇವು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಂಚರಿಸುತ್ತಿವೆ. ಯಾವುದೇ ಬೆಳೆಹಾನಿ ಮಾಡಿರಲಿಲ್ಲ. ಶನಿವಾರ ಆನೆಗಳು ರಸ್ತೆ ದಾಟುವಾಗ ಕಾರು ಗುದ್ದಿ ಕಾರಿನ ಮೇಲೆ ಆನೆ ಬಿದ್ದು ಅಪಘಾತ ನಡೆದಿದೆ ಎಂದು ವಲಯ ಅರಣ್ಯಾಧಿಕಾರಿ ಆದರ್ಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.