ಬಾಳೆಹೊನ್ನೂರು: ಇಬ್ಬರ ಸಾವಿಗೆ ಕಾರಣವಾದ ಆನೆ ಸೆರೆ ಕಾರ್ಯಾಚರಣೆ ಮಂಗಳವಾರ ಯಶಸ್ವಿಯಾಗಿದ್ದು, ಸುಮಾರು 14 ವರ್ಷದ ಮರಿಯಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಿಡಿದು ಶಿವಮೊಗ್ಗ ಬಳಿಯ ಸಕ್ರೇಬೈಲಿಗೆ ಬಿಟ್ಟರು.
ಮಾವುತರೊಂದಿಗೆ ಸೋಮವಾರ ಮಧ್ಯಾಹ್ನ ಬಾಳೆಹೊನ್ನೂರು ತಲುಪಿದ್ದ ನಾಲ್ಕು ಆನೆಗಳು, ಮಂಗಳವಾರ ಬೆಳಿಗ್ಗೆಯಿಂದಲೇ ಪುಂಡಾನೆ ಜಾಡು ಪತ್ತೆ ಹಚ್ಚಲು ಮುಂದಾಗಿದ್ದವು. ಮಧ್ಯಾಹ್ನ ಅಂಡವಾನೆ ಬಳಿಯ ಕಾಡಿನಲ್ಲಿ ಆನೆ ಇರುವುದನ್ನು ಪತ್ತೆಹಚ್ಚಿದ ನಂತರ ಮಡಿಕೇರಿಯ ಶಾರ್ಪ್ ಶೂಟರ್ ರಂಜಿತ್ ಹಾಗೂ ಅರಿವಳಿಕೆ ತಜ್ಞ ಮುರಳಿ ಕಾರ್ಯಾಚರಣೆಗೆ ಇಳಿದರು.
ಆರಂಭದಲ್ಲಿ ಮರಿಯಾನೆಗೆ ಅರಿವಳಿಕೆ ಚುಚ್ಚುಮದ್ದು ನೀಡುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲೆ ಎರಗಲು ಯತ್ನಿಸಿತು. ರೊಚ್ಚಿಗೆದ್ದ ಆನೆಯಿಂದ ಸಿಬ್ಬಂದಿ ಕೆಲವೇ ಕ್ಷಣದ ಅಂತರದಲ್ಲಿ ಪಾರಾದರು. ಮತ್ತೆ ಎದ್ದು ಬಿದ್ದು ಅಂಡವಾನೆ ಕಡೆಯಿಂದ ಬಿಳುಕೊಪ್ಪ ಕಡೆಗೆ ದೌಡಾಯಿಸಿತು. ಅಲ್ಲೂ ಆನೆ ನಿಲ್ಲುವ ಲಕ್ಷಣ ಕಾಣದ ಹಿನ್ನಲೆಯಲ್ಲಿ ಅಧಿಕಾರಿಗಳು ಮತ್ತೊಮ್ಮೆ ಚರ್ಚೆಸಿ ಎರಡನೇ ಬಾರಿಗೆ ಅರಿವಳಿಕೆ ಚುಚ್ಚುಮದ್ದು ನೀಡಿದರು. ಆಗ ನಿಧಾನವಾಗಿ ಚಲಿಸಲು ಆರಂಭಿಸುತ್ತಿದ್ದಂತೆ ಸ್ಥಳಕ್ಕೆ ತೆರಳಿದ ನಾಲ್ಕು ಆನೆಗಳು ಪುಂಡಾನೆಯನ್ನು ಸುತ್ತುವರೆದು ಎಲೆಕಲ್ಲು ಬಳಿಗೆ ಎಳೆದು ತಂದವು.
ಕಾಲಿಗೆ ಹಗ್ಗ ಬೀಳುತ್ತಿದ್ದಂತೆ ಒಂದೇ ಸಮನೆ ಕೂಗಿದ ಆನೆ ಮುಂದಕ್ಕೆ ಹೆಜ್ಜೆ ಹಾಕಲು ಸುತಾರಾಂ ಒಪ್ಪಲಿಲ್ಲ. ನಾಲ್ಕು ಆನೆಗಳು ಬಲವಂತವಾಗಿ ಎಳೆದುಕೊಂಡು ಮುಖ್ಯ ರಸ್ತೆಯ ಬದಿಗೆ ಬಂದಾಗ ಅಲ್ಲಿ ಕುಸಿದು ಕುಳಿತು ಯಾವುದೇ ಕಾರಣಕ್ಕೂ ಹೊರ ಬರುವುದಿಲ್ಲ ಎಂಬಂತೆ ಹಠ ಹಿಡಿಯಿತು. ಕೆಲವು ದೂರ ಹೆಜ್ಜೆ ಹಾಕುವುದು, ಮತ್ತೆ ಅಲ್ಲೇ ಮಲಗುವುದು ಮಾಡುತ್ತಲೇ ರಸ್ತೆಗೆ ಬಂದ ಆನೆಯನ್ನು ಕ್ರೇನ್ ಸಹಾಯದಿಂದ ಎತ್ತಿ ಲಾರಿಗೆ ಹಾಕಲಾಯಿತು.
ಕಾರ್ಯಾಚರಣೆಯಲ್ಲಿ ಚಿಕ್ಕಮಗಳೂರು, ಭದ್ರಾ,ಕೊಪ್ಪ ಸೇರಿದಂತೆ ವಿವಿಧ ವಿಭಾಗಗಳ ಅರಣ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಈ ಆನೆ ಅಲ್ಲ:
ಇಬ್ಬರನ್ನು ಸಾಯಿಸಿದ ಆನೆ ಇದಲ್ಲ. ಇದು ಮರಿಯಾನೆ. ಆ ಆನೆ ದೊಡ್ಡದಿದೆ ಎಂದು ಸ್ಥಳದಲ್ಲಿದ್ದ ಹಲವರು ದೂರಿದರು.
ಎಲೆಕಲ್ಲು ವೃತ್ತದಲ್ಲಿ ಆನೆ ಕಾರ್ಯಾಚರಣೆ ವೀಕ್ಷಿಸಲು ಸಾವಿರಾರು ಜನ ಜಮಾಯಿಸಿದ್ದು ಕೆಲ ಹೊತ್ತು ಸಂಚಾರ ದಟ್ಟಣೆ ಉಂಟಾಯಿತು. ಕಾರ್ಯಾಚರಣೇ ಸ್ಥಳಕ್ಕೆ ತೆರಳದಂತೆ ತಡೆದ ಕೊಪ್ಪ ಡಿಎಫ್‌ಒ ಶಿವಶಂಕರ್, ಸ್ಥಳೀಯರು ಹಾಗೂ ಮಾಧ್ಯಮದವರೊಂದಿಗೆ ಮಾತಿನ ಚಕಮಕಿಯೂ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.