ಚಿಕ್ಕಮಗಳೂರು: ಕಾಡಾನೆ ಮತ್ತು ಮಾನವ ಸಂಘರ್ಷ ದಿನದಿಂದ ದಿನಕ್ಕೆ ಮತ್ತೆ ಹೆಚ್ಚುತ್ತಲೇ ಇದೆ. ಮಾನವ ಸಾವಿನ ಜತೆಗೆ ಆನೆಗಳ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕೊಪ್ಪ ಮತ್ತು ಎನ್.ಆರ್.ಪುರ ತಾಲ್ಲೂಕಿನಲ್ಲಿ ಆನೆಗಳ ಕಾಟ ವಿಸ್ತರಿಸಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.
ಒಂಬತ್ತು ವರ್ಷಗಳ ಅವಧಿಯಲ್ಲಿ 16 ಜನ ಪ್ರಾಣ ಕಳೆದುಕೊಂಡಿದ್ದರೆ, ₹10 ಕೋಟಿಗೂ ಹೆಚ್ಚು ಮೌಲ್ಯದ ಬೆಳೆಹಾನಿಯಾಗಿದೆ. ಬೆಳೆಹಾನಿ ಪ್ರಮಾಣವೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಅರಣ್ಯ ಇಲಾಖೆಯ ಚಿಕ್ಕಮಗಳೂರು ವಿಭಾಗ ವ್ಯಾಪ್ತಿಯಲ್ಲಿ ಆನೆಗಳ ಸಂಖ್ಯೆ ಕೂಡ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಆಹಾರ ಮತ್ತು ನೀರು ಹುಡುಕಿಕೊಂಡು ಅತ್ತಿಂದಿತ್ತ ಅಲೆದಾಡುವ ಆನೆಗಳು, ಬೆಳೆಹಾನಿ ಮತ್ತು ಪ್ರಾಣಹಾನಿ ಮಾಡಿವೆ. ಚಿಕ್ಕಮಗಳೂರು ನಗರದೊಳಗಿನ ಮನೆಗಳ ಬಾಗಿಲಿಗೂ ಕಳೆದ ವರ್ಷ ಬಂದು ಹೋಗಿವೆ.
ಕಾಡನ್ನು ಬಿಟ್ಟು ರೈತರ ಜಮೀನಿನಲ್ಲಿ ಆನೆಗಳು ಆಹಾರ ಹುಡುಕಿದರೆ ದಿನಕ್ಕೆ ಕನಿಷ್ಠ ₹1 ಲಕ್ಷ ಮೌಲ್ಯದ ಬೆಳೆಯಾದರೂ ಹಾಳಾಗಿರುತ್ತದೆ. ತೋಟ ಮತ್ತು ಗದ್ದೆಗಳಲ್ಲಿ ನಡೆದು ಸಾಗಿದರೂ ಬೆಳೆ ಉಳಿಯುವುದಿಲ್ಲ. ಆನೆಗಳಿಗೆ ಹೆದರಿ ಗದ್ದೆಗಳಲ್ಲಿ ಭತ್ತ ನಾಟಿ ಮಾಡುವುದನ್ನೇ ನಿಲ್ಲಿಸಿರುವ ಉದಾಹರಣೆಗಳಿವೆ.
ಚಿಕ್ಕಮಗಳೂರು ತಾಲ್ಲೂಕಿಗೆ ಬಂದಿದ್ದ 23 ಆನೆಗಳ ಹಿಂಡಿನಲ್ಲಿ ಒಂದು ಆನೆ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದೆ. ಚಿಕ್ಕಮಗಳೂರು ತಾಲ್ಲೂಕಿನ ಕೆಸವಿನಮನೆ, ಬಿಕ್ಕೆಮನೆ, ದುಂಗೆರೆ, ದಂಬದಹಳ್ಳಿ, ಬಿಗ್ಗನಹಳ್ಳಿ, ಕೆ.ಆರ್.ಪೇಟೆ, ತಗಡೂರು, ತೊಂಡವಳ್ಳಿ, ಆಲದಗುಡ್ಡೆ, ಮಾರಿಕಟ್ಟೆ ಸೇರಿ ಸುತ್ತಮುತ್ತಲ ಒಂದು ತಿಂಗಳಿಂದ ಆನೆಗಳು ಬೀಡು ಬಿಟ್ಟಿದ್ದವು. 25 ದಿನಗಳ ಕಾಲ ಈ ಭಾಗದಲ್ಲೇ ಓಡಾಡಿರುವ ಆನೆಗಳಿಂದ ಸುಮಾರು 120ಕ್ಕೂ ಹೆಚ್ಚು ರೈತರ ₹25 ಲಕ್ಷ ಮೌಲ್ಯದ ಬೆಳೆಯನ್ನು ಹಾಳು ಮಾಡಿವೆ ಎಂದು ಅರಣ್ಯ ಇಲಾಖೆ ಅಂದಾಜಿಸಿದೆ.
ಅರಣ್ಯ ಇಲಾಖೆ ಮಾರ್ಗಸೂಚಿ ಪ್ರಕಾರ ಆಗಿರುವ ಹಾನಿ ಇಷ್ಟಾದರೆ, ರೈತರಿಗೆ ಇದಕ್ಕಿಂತ ನಾಲ್ಕು ಪಟ್ಟು ನಷ್ಟ ಆಗಿರುತ್ತದೆ. ಇನ್ನೇನು ಕಟಾವಿಗೆ ಬಂದಿದ್ದ ಭತ್ತದ ಪೈರು ಆನೆಗಳ ಪಾಲಾಯಿತು, ಫಸಲು ಬಿಟ್ಟಿದ್ದ ಕಾಫಿ ಗಿಡಗಳು ಮುರಿದು ಬಿದ್ದವು ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ. ಆಕ್ರೋಶಗೊಂದ ರೈತರು ಅರಣ್ಯ ಇಲಾಖೆ ಕಚೇರಿಗೂ ಮುತ್ತಿಗೆ ಹಾಕಿ ಎಚ್ಚರಿಕೆ ನೀಡಿದರು.
ಮಾನವ– ಕಾಡಾನೆ ಸಂಘರ್ಷ ಕಡಿಮೆ ಮಾಡಲು ರೈಲ್ವೆ ಬ್ಯಾರಿಕೇಡ್ ನಿರ್ಮಾಣವನ್ನು ಭದ್ರಾ ವನ್ಯಜೀವಿ ವಲಯದಲ್ಲಿ ಒಟ್ಟು 40 ಕಿಲೋ ಮೀಟರ್‌ಗೆ ವಿಸ್ತರಿಸಲು ಯೋಜನೆ ರೂಪಿಸಿದೆ. ಲಕ್ಕವಳ್ಳಿ ಭಾಗದಲ್ಲಿ 1.215 ಕಿಲೋ ಮೀಟರ್ ಉದ್ದದ ಬ್ಯಾರಿಕ್ಯಾಡ್ ಈಗಾಗಲೇ ನಿರ್ಮಾಣವಾಗಿದೆ. ಸಾರಗೋಡು ವಲಯದಲ್ಲಿ ಟೆಂಟಕಲ್ ಬೇಲಿ ನಿರ್ಮಿಸಲಾಗಿದೆ. ಆದರೂ, ಆನೆ–ಮಾನವ ಸಂಘರ್ಷ ಕಡಿಮೆಯಾಗಿಲ್ಲ.
ಪೂರಕ ಮಾಹಿತಿ: ಕೆ.ವಿ.ನಾಗರಾಜ್, ರವಿಕುಮಾರ್ ಶೆಟ್ಟಿಹಡ್ಲು
ಕಾಡಾನೆಗಳಿಂದ ರೈತರಿಗೆ ತೀವ್ರ ತೊಂದರೆಯಾಗುತ್ತಿದೆ. ಸರ್ಕಾರ ಈ ಬಗ್ಗೆ ಹೆಚ್ಚಿನ ಗಮನ ಹರಿಸಿ ಅರಣ್ಯ ಇಲಾಖೆ ಮೂಲಕ ಆನೆಗಳ ಹಾವಳಿ ನಿಯಂತ್ರಿಸಬೇಕು–ಬಿ.ಎಸ್.ಸದಾನಂದ ಬೇಳೆಗದ್ದೆ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೊಪ್ಪ
ಕಾಡುಕೋಣ ಮತ್ತಿತರೆ ಪ್ರಾಣಿಗಳ ಹಾವಳಿ ಎದುರಿಸುತ್ತಿರುವ ಶೃಂಗೇರಿ ಕ್ಷೇತ್ರದ ಜನರಿಗೆ ಈಗ ಕಾಡಾನೆ ಸಮಸ್ಯೆ ಎದುರಾಗಿದೆ. ಜನರಿಗೆ ರಕ್ಷಣಾತ್ಮಕ ಕ್ರಮ ಕೈಗೊಳ್ಳಲು ವಿಶೇಷ ಕಾರ್ಯಪಡೆ ಆರಂಭಿಸಿ ಆನೆಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು.ಮಹೇಂದ್ರ ಎಸ್. ವಕೀಲ ಕೊಪ್ಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.