ADVERTISEMENT

ನ್ಯಾಯಬೆಲೆ ಅಂಗಡಿ ಮಾಲೀಕರ ಬೇಡಿಕೆಗಳಿಗೆ ಒತ್ತಾಯಿಸಿ ಜು.5ಕ್ಕೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2022, 4:31 IST
Last Updated 2 ಜುಲೈ 2022, 4:31 IST
ಕಡೂಡಿನ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಪಡಿತರ ವಿತರಕರ ಸಂಘ ಕಡೂರು ತಾಲ್ಲೂಕು ಘಟಕದ ಖಜಾಂಚಿ ದಕ್ಷಿಣಾಮೂರ್ತಿ ಮಾತನಾಡಿದರು.      
ಕಡೂಡಿನ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಪಡಿತರ ವಿತರಕರ ಸಂಘ ಕಡೂರು ತಾಲ್ಲೂಕು ಘಟಕದ ಖಜಾಂಚಿ ದಕ್ಷಿಣಾಮೂರ್ತಿ ಮಾತನಾಡಿದರು.         

ಬೀರೂರು: ರಾಜ್ಯದ ಪಡಿತರ ವಿತರಕರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜುಲೈ 5ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಪಡಿತರ ವಿತರಕರ ಸಂಘದ ಕಡೂರು ತಾಲ್ಲೂಕು ಘಟಕದ ಕಾರ್ಯದರ್ಶಿ ಎಂ.ಎಸ್.ಗುರುಮೂರ್ತಿ ತಿಳಿಸಿದರು.

ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಶುಕ್ರವಾರ ಪಡಿತರ ವಿತರಕರ ಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.

ಕೇಂದ್ರದ ಹಣಕಾಸು ಸಚಿವಾಲಯವು ರಚಿಸಿದ್ದ ಆಹಾರ ಕಾರ್ಯಕ್ರಮ ವರದಿಯು ಆಹಾರ ಭದ್ರತಾ ಯೋಜನೆ ಅಡಿ, ದೇಶದ ಎಲ್ಲ ಪಡಿತರ ವಿತರಕರು ವಿತರಿಸುವ ಆಹಾರಧಾನ್ಯಗಳಿಗೆ ಕ್ವಿಂಟಲ್‍ಗೆ ₹ 440 ಕಮಿಷನ್ ನಿಗದಿ ಮಾಡಬೇಕು ಎಂದು ಮಾಡಿದ್ದ ಶಿಫಾರಸನ್ನು ಕೇಂದ್ರ ಸರ್ಕಾರವು ಅನುಷ್ಠಾನಗೊಳಿಸುವಲ್ಲಿ ಹಿಂದೇಟು ಹಾಕಿದೆ. ಕೋವಿಡ್ ಸಂದರ್ಭದಲ್ಲಿ ಕೂಡಾ ಜೀವದ ಹಂಗು ತೊರೆದು ಅಂಗಡಿ ಮಾಲೀಕರು ಕರ್ತವ್ಯ ನಿರ್ವಹಿಸಿ ಪಡಿತರ ವಿತರಣಾ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದಾರೆ. ಸರ್ಕಾರವೇ ರಚಿಸಿದ ಸಮಿತಿಯ ವರದಿಯನ್ನು ತಕ್ಷಣವೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಕ್ವಿಂಟಲ್‍ಗೆ ಕೇವಲ ₹ 100 ಕಮಿಷನ್ ನೀಡಲಾಗುತ್ತಿದೆ. ಇದು ಅಂಗಡಿ ನಿರ್ವಹಣೆಗೂ ಸಾಲುತ್ತಿಲ್ಲ. ಸದ್ಯ ಅಕ್ಕಿ, ಗೋಧಿ/ರಾಗಿ ಮಾತ್ರ ವಿತರಿಸಲಾಗುತ್ತಿದ್ದು, ಜನರಿಗೂ ನೆರವಾಗುವ ಉದ್ದೇಶದಿಂದ ಸರ್ಕಾರಗಳು ಬೇಳೆ, ಅಡುಗೆ ಎಣ್ಣೆ, ಸಕ್ಕರೆ ಮತ್ತಿತರ ದಿನಬಳಕೆಯ ಸಾಮಗ್ರಿಗಳ ವಿತರಣೆಗೂ ಮುಂದಾಗಬೇಕು. ಕೋವಿಡ್ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಕೊರೊನಾದಿಂದ ಮೃತಪಟ್ಟ ನ್ಯಾಯಬೆಲೆ ಅಂಗಡಿ ಮಾಲೀಕರ ಕುಟುಂಬಕ್ಕೆ, ಪ್ರತ್ಯೇಕ ಪರಿಹಾರ ನೀತಿ ಘೋಷಿಸಿ ಪರಿಹಾರ ನೀಡುವ ಜತೆಗೆ ಅವರನ್ನೂ ಕೊರೊನಾ ಯೋಧರೆಂದು ಪರಿಗಣಿಸಬೇಕು ಎಂಬ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ನಡೆಯುವ ಪ್ರತಿಭಟನೆಗೆ ನ್ಯಾಯಬೆಲೆ ಅಂಗಡಿ ಮಾಲೀಕರು ಸ್ವಯಂ ಪ್ರೇರಿತರಾಗಿ ಭಾಗವಹಿಸಬೇಕು. ಇದೇ ವಿಷಯಗಳನ್ನು ಮುಂದಿಟ್ಟುಕೊಂಡು ಆಗಸ್ಟ್ 2ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಪ್ರತಿಭಟನಾ ಸಮಾವೇಶ ಮತ್ತು ಜಂತರ್ ಮಂತರ್‌ವರೆಗೆ ರ‍್ಯಾಲಿ ನಡೆಸಲಿದ್ದಾರೆ’ ಎಂದರು.

ಪಡಿತರ ವಿತರಕರ ಸಂಘದ ತಾಲ್ಲೂಕು ಘಟಕದ ಖಜಾಂಚಿ ದಕ್ಷಿಣಾಮೂರ್ತಿ, ಸಿ.ಎನ್.ಮೂರ್ತಿ, ಬಾಸೂರು ಶಿವಕುಮಾರ್, ವರದರಾಜ ಗುಪ್ತ, ರವಿಕುಮಾರ್, ಪಾತೇನಹಳ್ಳಿ ಚೌಡಪ್ಪ, ಚಂದ್ರಶೇಖರಪ್ಪ, ಪುಟ್ಟಸ್ವಾಮಿ, ಪೃಥ್ವಿಲ್ ಸಿದ್ದು, ಎಸ್.ಕೆ.ಜಗದೀಶ್ ಮತ್ತು ವಿವಿಧ ವ್ಯವಸಾಯ ಸೇವಾ ಸಹಕಾರ ಸಂಘಗಳ ಕಾರ್ಯದರ್ಶಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.