
ವಂಚನೆ
ಕಳಸ: ‘ಇಲ್ಲಿನ ಗ್ರಾಮ ಪಂಚಾಯಿತಿಯ ಹೆಸರಿನಲ್ಲಿ ನಕಲಿ ಲೆಟರ್‌ಹೆಡ್ ಮತ್ತು ಶೀಲು ಬಳಸಿ ವಂಚನೆ ಮಾಡಲಾಗಿದ್ದು, ಕಳಸ ಎಸ್ಟೇಟ್ ಹಂಗಾಮಿ ನಿವಾಸಿಯಾದ ಪ್ರಭಾವಿ ವ್ಯಕ್ತಿಯೊಬ್ಬರ ಹೆಸರಿಗೆ ಕಳಸ ಗ್ರಾಮ ಪಂಚಾಯಿತಿಯು ನೀಡಿರುವಂತೆ ಸೃಷ್ಟಿಸಿರುವ ವಾಸ ದೃಢೀಕರಣ ಪತ್ರ ನಕಲಿಯಾಗಿದೆ’ ಎಂದು ಕಳಸ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕವೀಶ್ ತಿಳಿಸಿದರು.
ಪಟ್ಟಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ದೃಢೀಕರಣ ಪತ್ರಕ್ಕಾಗಿ ಕಳಸ ಪಂಚಾಯಿತಿಯ ನಕಲಿ ಲೆಟರ್‌ಹೆಡ್ ಬಳಸಲಾಗಿದೆ. ಪತ್ರದಲ್ಲಿ ಇರುವ ಸಹಿ ಕೂಡ ನನ್ನದಲ್ಲ. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ವಹಿಸಬೇಕು ಎಂದು ಕಳಸ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ ಎಂದು ಅವರು ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್ ಹಿನಾರಿ ಮಾತನಾಡಿ, ನಮ್ಮ ಪಂಚಾಯಿತಿಯ ನಕಲಿ ದಾಖಲೆ ಸೃಷ್ಟಿಸಿ ಅಡುಗೆ ಅನಿಲದ ಸಂಪರ್ಕ ಪಡೆಯಲಾಗಿದೆ. ಕಂದಾಯ ಇಲಾಖೆಯಲ್ಲಿ ವಾಸಸ್ಥಳದ ದೃಢೀಕರಣಕ್ಕಾಗಿ ಅರ್ಜಿ ಸಲ್ಲಿಸಿದಾಗ ಈ ವಿಚಾರ ಪತ್ತೆಯಾಗಿದೆ. ಕಳಸದಲ್ಲಿ ಕಂದಾಯ ಇಲಾಖೆಯ ಹೆಸರಲ್ಲಿ ಅನೇಕ ನಕಲಿ ದಾಖಲೆಗಳು ಸೃಷ್ಟಿಯಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ನಿಷ್ಪಕ್ಷಪಾತದ ತನಿಖೆ ನಡೆಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಪಂಚಾಯಿತಿ ಅಧ್ಯಕ್ಷೆ ಸುನಿತಾ ಕುಮಾರಿ, ಉಪಾಧ್ಯಕ್ಷ ಭಾಸ್ಕರ್, ಸದಸ್ಯರಾದ ರಂಗನಾಥ್, ಕಾರ್ತಿಕ ಶಾಸ್ತ್ರಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.