ADVERTISEMENT

ಕೃಷಿಯಲ್ಲಿ ಯಾಂತ್ರೀಕರಣ‌ ಅಗತ್ಯ: ಶಾಸಕಿ‌ ನಯನಾ ಮೋಟಮ್ಮ

ಉಗ್ಗೆಹಳ್ಳಿ: ಯಾಂತ್ರೀಕೃತ ಭತ್ತದ‌ ನಾಟಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 5:32 IST
Last Updated 10 ಆಗಸ್ಟ್ 2025, 5:32 IST
ಮೂಡಿಗೆರೆ ತಾಲ್ಲೂಕಿನ ಉಗ್ಗೇಹಳ್ಳಿ ಗ್ರಾಮದ ಭತ್ತದ ಗದ್ದೆಯಲ್ಲಿ ಏರ್ಪಡಿಸಿದ್ದ ಯಾಂತ್ರೀಕೃತ ಭತ್ತದ ನಾಟಿ ಕಾರ್ಯಕ್ಕೆ ಶಾಸಕಿ ನಯನಾ ಮೋಟಮ್ಮ ಚಾಲನೆ ನೀಡಿದರು
ಮೂಡಿಗೆರೆ ತಾಲ್ಲೂಕಿನ ಉಗ್ಗೇಹಳ್ಳಿ ಗ್ರಾಮದ ಭತ್ತದ ಗದ್ದೆಯಲ್ಲಿ ಏರ್ಪಡಿಸಿದ್ದ ಯಾಂತ್ರೀಕೃತ ಭತ್ತದ ನಾಟಿ ಕಾರ್ಯಕ್ಕೆ ಶಾಸಕಿ ನಯನಾ ಮೋಟಮ್ಮ ಚಾಲನೆ ನೀಡಿದರು   

ಮೂಡಿಗೆರೆ: ಕೃಷಿಯಲ್ಲಿ ಕಾರ್ಮಿಕರ ಕೊರತೆ ನೀಗಿಸಲು ಯಾಂತ್ರೀಕರಣ ಪದ್ಧತಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಶಾಸಕಿ‌ ನಯನಾ ಮೋಟಮ್ಮ ಹೇಳಿದರು.

ತಾಲ್ಲೂಕಿನ ಉಗ್ಗೇಹಳ್ಳಿ ಗ್ರಾಮದ ರೈತ ಶರತ್ ಎಂಬುವರ ಭತ್ತದ ಗದ್ದೆಯಲ್ಲಿ ಎನ್‌ಎಫ್‌ಎಸ್‌ಎನ್‌ಎಂ ಅಕ್ಕಿ ಯೋಜನೆಯಡಿ ಯಾಂತ್ರಿಕ ಉಪಕರಣಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಮಲೆನಾಡಿನಲ್ಲಿ ಕಾಡಾನೆಗಳ ಹಾವಳಿಯಿಂದ ರೈತರು ಭತ್ತ ಬೆಳೆಯದೇ ಗದ್ದೆಗಳನ್ನು ಪಾಳು ಬಿಟ್ಟಿರುವ ಸಂದರ್ಭದಲ್ಲಿ ಯುವ ರೈತರು ಭತ್ತದ ಕೃಷಿ ಮಾಡಲು ಮುಂದಾಗಿರುವುದು ಶ್ಲಾಘನೀಯ ಎಂದರು.

ದೇಶದಲ್ಲಿ ಭತ್ತ ಬೆಳೆಯುವವರೇ ನಿಜವಾದ ಅನ್ನದಾತರು. ಯಂತ್ರದ ಮೂಲಕ ನಾಟಿ ಮಾಡುವುದರಿಂದ ಖರ್ಚು ಕಡಿಮೆಯಾಗಿ ಅಧಿಕ ಇಳುವರಿ ಪಡೆಯಬಹುದು. ಯುವ ರೈತರು ಭತ್ತದ ಕೃಷಿಗೆ ಮುಂದಾಗಿರುವುದು ಉತ್ತಮ ಬೆಳವಣಿಗೆ. ಇದರಿಂದ ಮುಂದಿನ ಪೀಳಿಗೆಗೆ ಕೂಡ ಉತ್ತಮ ಮಾರ್ಗದರ್ಶನ ನೀಡಿದಂತಾಗುತ್ತದೆ ಎಂದು ಹೇಳಿದರು. 

ADVERTISEMENT

ಕೃಷಿ ಇಲಾಖೆಯಿಂದ ಎನ್‌ಎಫ್‌ಎಸ್‌ಎನ್‌ಎಂ ಯೋಜನೆಯಡಿ ರೈತರಿಗೆ ಬಿತ್ತನೆ ಬೀಜ, ಸಾವಯವ ಗೊಬ್ಬರ, ಲಘು ಪೋಷಕಾಂಶಗಳು, ನ್ಯಾನೋ ಯೂರಿಯಾ, ನ್ಯಾನೋ ಡಿಎಪಿ ಹಾಗೂ ಪೀಡೆನಾಶಕಗಳನ್ನು ಉಚಿತವಾಗಿ ನೀಡಿ ಯಾಂತ್ರೀಕೃತ ಭತ್ತದ ನಾಟಿಗೆ ಪ್ರೋತ್ಸಾಹಿಸುತ್ತಿದೆ. ಇದನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು. 

ಜಂಟಿ ಕೃಷಿ ನಿರ್ದೇಶಕಿ ಸುಜಾತಾ ಮಾತನಾಡಿ, ‘ಮಲೆನಾಡಿನಲ್ಲಿ ಭತ್ತದ ಬಿತ್ತನೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ರೈತರು ಇದರ ಬಗ್ಗೆ ಗಮನಹರಿಸಿ ಕೃಷಿ ಇಲಾಖೆಯ ಸಹಯೋಗದೊಂದಿಗೆ ಇಲಾಖೆಯಿಂದ ಉಚಿತವಾಗಿ ವಿತರಿಸುವ ಬಿತ್ತನೆ ಬೀಜ ಹಾಗೂ ಪರಿಕರ ಬಳಸಿಕೊಂಡು ಯಾಂತ್ರಿಕೃತ ನಾಟಿಯ ಮೂಲಕ ಭತ್ತದ ಕ್ಷೇತ್ರವನ್ನು ವಿಸ್ತರಿಸಬೇಕು’ ಎಂದು ಮನವಿ ಮಾಡಿದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ್ ಹೊಸ್ಕೆರೆ, ರೈತ ಉತ್ಪಾದಕ ಸಂಘದ ಅಧ್ಯಕ್ಷ ಎಚ್.ಕೆ. ಪೂರ್ಣೇಶ್, ಕೃಷಿಕ ಸಮಾಜದ ನಿರ್ದೇಶಕ ಎಚ್.ಬಿ. ಜಗನ್ನಾಥ್, ಸಹಾಯಕ ಕೃಷಿ ನಿರ್ದೇಶಕಿ ಎಚ್.ಎನ್. ಸುಮ, ಉಪಕೃಷಿ ನಿರ್ದೇಶಕ ವೆಂಕಟೇಶ್ ಚವ್ಹಾಣ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.