ADVERTISEMENT

ಚಿಕ್ಕಮಗಳೂರು: ಕೆರೆ ಕಾಮಗಾರಿ ಪೂರ್ಣಗೊಳಿಸಲು ರೈತ ಸಂಘ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಜುಲೈ 2023, 15:59 IST
Last Updated 1 ಜುಲೈ 2023, 15:59 IST
ಚಿಕ್ಕಮಗಳೂರಿನ ಪ್ರವಾಸಿ ಮಂದಿರದಲ್ಲಿ ಶಾಸಕ ತಮ್ಮಯ್ಯ ಅಧ್ಯಕ್ಷತೆಯಲ್ಲಿ ರೈತ ಸಂಘ ಹಾಗೂ ವಿವಿಧ ಪಕ್ಷದ ಮುಖಂಡರು ಸಭೆ ನಡೆಸಿದರು
ಚಿಕ್ಕಮಗಳೂರಿನ ಪ್ರವಾಸಿ ಮಂದಿರದಲ್ಲಿ ಶಾಸಕ ತಮ್ಮಯ್ಯ ಅಧ್ಯಕ್ಷತೆಯಲ್ಲಿ ರೈತ ಸಂಘ ಹಾಗೂ ವಿವಿಧ ಪಕ್ಷದ ಮುಖಂಡರು ಸಭೆ ನಡೆಸಿದರು   

ಚಿಕ್ಕಮಗಳೂರು: ತಾಲ್ಲೂಕಿನಾದ್ಯಂತ ಅಪೂರ್ಣಗೊಂಡಿರುವ ಕೆರೆಗಳ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ರೈತ ಸಂಘಟನೆ ಹಾಗೂ ವಿವಿಧ ಪಕ್ಷದ ಮುಖಂಡರು ಶಾಸಕ ಎಚ್.ಡಿ. ತಮ್ಮಯ್ಯ ಅವರನ್ನು ಒತ್ತಾಯಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಸಭೆಯಲ್ಲಿ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗುರುಶಾಂತಪ್ಪ ಮಾತನಾಡಿ, ‘ಗ್ರಾಮೀಣ ಪ್ರದೇಶದ ಜಮೀನುಗಳಿಗೆ ನೀರೊದಗಿಸುವ ‌ಪ್ರಮುಖ ಕೆರೆಗಳಾದ ರಣಘಟ್ಟ, ಮಾದರಸನಕೆರೆ, ದಾಸರಹಳ್ಳಿ ಹಾಗೂ ಭದ್ರಾ ಉಪ ಕಣಿವೆ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ಕೆರೆಗಳಿಗೆ ನೀರು ಹರಿಸಬೇಕು. ಜತೆಗೆ ಮುಂದಿನ ಬಜೆಟ್‍ನಲ್ಲಿ ಕೆರೆ ಅಭಿವೃದ್ಧಿಗೆ ಅನುದಾನ ಮೀಸಲಿಡಬೇಕು’ ಎಂದು ಒತ್ತಾಯಿಸಿದರು.

ನಗರದ ಬಸವನಹಳ್ಳಿ ಕೆರೆಯ ಅಭಿವೃದ್ಧಿ ಹೆಸರಲ್ಲಿ ಮೂಲ ಸ್ವರೂಪ ಬದಲಾಗಿದೆ. ನೀರಿನ ಸಂಗ್ರಹ ಮಟ್ಟವೂ ಕಡಿಮೆಯಾಗಿದೆ. ಕೆರೆ ಸುತ್ತಲಿನ ಜಾಗದ ಒತ್ತುವರಿ ತೆರವುಗೊಳಿಸಬೇಕು. ಜತೆಗೆ ನೀರಿನ ಸಂಗ್ರಹ ಹೆಚ್ಚಳಕ್ಕೆ ಕ್ರಮವಹಿಸಬೇಕು ಎಂದರು.

ADVERTISEMENT

ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಕೆರೆ ನೀರು ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ. ಎಲ್ಲರಿಗೂ ಅಗತ್ಯವಿದೆ. ಆ ನಿಟ್ಟಿನಲ್ಲಿ ಕೆರೆಗಳ ಸಮಗ್ರ ಅಭಿವೃದ್ಧಿಗೆ ಅಧಿವೇಶನದಲ್ಲಿ ಚರ್ಚಿಸಿ ಕಾಮಗಾರಿ ತ್ವರಿತಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. ಬಸವನಹಳ್ಳಿ ಕೆರೆ ಸಮಸ್ಯೆಯನ್ನು ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸುವುದಾಗಿ ಭರವಸೆ ನೀಡಿದರು.

ಕೆಪಿಸಿಸಿ ವಕ್ತಾರ ರವೀಶ್ ಬಸಪ್ಪ, ಮುಖಂಡರಾದ ಬಿ.ಅಮ್ಜದ್, ಹೇಮಾವತಿ, ರೇಣುಕಾರಾಧ್ಯ, ಅಚ್ಯುತ್‍ರಾವ್, ಕೆಂಗೇಗೌಡ, ಎಸ್.ಬಿ.ಬಸವರಾಜ್, ಸಿ.ಎಸ್.ಅಶೋಕ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.