
ಶೃಂಗೇರಿ: ಫಸಲು ಬಿಮಾ ಯೋಜನೆಯಡಿ ಸೂಕ್ತ ಬೆಳೆವಿಮೆ ನೀಡಿಲ್ಲ ಎಂದು ಆರೋಪಿಸಿ ಇಲ್ಲಿನ ತಾಲ್ಲೂಕು ಕಚೇರಿ ಎದುರು ರೈತರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಜಿಲ್ಲಾಡಳಿತ ಮತ್ತು ವಿಮಾ ಕಂಪೆನಿ ವಿರುದ್ಧ ಸೋಮವಾರ ಪ್ರತಿಭಟನೆ ನಡೆಸಿದರು.
ನೆಮ್ಮಾರ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಕೆ.ದಿನೇಶ್ ಹೆಗ್ಡೆ ಮಾತನಾಡಿ, ‘ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ರೈತರಿಗೆ ಅತ್ಯಂತ ಕಡಿಮೆ ಮತ್ತು ಅಸಮರ್ಪಕ ಬೆಳೆ ಪರಿಹಾರ ಮೊತ್ತ ಬಂದಿದೆ. ಕೆಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬೆಳೆ ಪರಿಹಾರ ಇನ್ನೂ ಬಂದಿಲ್ಲ. ಕಳೆದ 3 ವರ್ಷದಿಂದ ತಾಲ್ಲೂಕಿನಲ್ಲಿ ಅಧಿಕ ಮಳೆಯಾಗಿದ್ದರೂ ಮಳೆ ಮಾಪಕ ಕೇಂದ್ರಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ರೈತರು ಅನುಭವಿಸಿದ ನಿಜವಾದ ಬೆಳೆ ನಷ್ಟವನ್ನು ನಿಖರವಾಗಿ ನಿರ್ಣಯಿಸಲಾಗಿಲ್ಲ. ಬೆಳೆ ವಿಮೆ ಪರಿಹಾರದ ಹಣ ತಾಲ್ಲೂಕಿನ ರೈತರಿಗೆ ಇನ್ನೂ ಮರೀಚಿಕೆಯಾಗಿದೆ’ ಎಂದು ಹೇಳಿದರು.
‘ಡಿ.29ರ ಒಳಗೆ ವಿಮಾ ಹಣ ರೈತರ ಖಾತೆಗೆ ಜಮಾ ಮಾಡದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸುತ್ತೇವೆ’ ಎಂದು ಎಚ್.ಕೆ.ದಿನೇಶ್ ಹೆಗ್ಡೆ ಎಚ್ಚರಿಸಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಿ.ಸಿ ಶಂಕರಪ್ಪ ಮಾತನಾಡಿ, ‘ರೈತರು ಬೆಳೆ ವಿಮೆಗಾಗಿ ವಿಮಾ ಕಂತು ಕಟ್ಟಿ ಒಂದೂವರೆ ವರ್ಷದ ನಂತರ ವಿಮಾ ಪರಿಹಾರ ಬಿಡುಗಡೆಯಾಗುತ್ತಿದೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರವಲ್ಲದೇ ರೈತರು ಕಂತು ಕಟ್ಟಿದ್ದಾರೆ. ರೈತರಿಗೆ ಆಗಿರುವ ಅನ್ಯಾಯವನ್ನು ಯಾರ ಬಳಿ ಕೇಳಬೇಕು ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಯಾರು ಎಂಬ ಬಗ್ಗೆಯೂ ಗೊಂದಲವಿದೆ. ಸಹಕಾರ ಸಂಘದಲ್ಲಿ ಶೇ 80 ರೈತರು ವಿಮೆ ಮಾಡಿಸಿದ್ದಾರೆ. ಸಹಕಾರ ಸಂಘದ ಆಡಳಿತ ಮಂಡಳಿಗೆ ವಿಮೆ ಬಗ್ಗೆ ಮಾಹಿತಿ ಇಲ್ಲದಿದ್ದರೂ ರೈತರಿಗೆ ಉತ್ತರ ನೀಡಬೇಕು’ ಎಂದರು.
ಹಾಲಂದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎಚ್ ನಟರಾಜ್ ಮಾತನಾಡಿ, ‘ವಿಮಾ ಕಂಪನಿಗಳು ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಶಾಮೀಲಾಗಿ ಕಂಪನಿಗೆ ಲಾಭ ಮಾಡಿಕೊಳ್ಳುತ್ತಿವೆ. ರೈತರಿಗೆ ತೀವ್ರ ಅನ್ಯಾಯ ಉಂಟಾಗಿದ್ದು, ಸರ್ಕಾರ ತಕ್ಷಣ ತಾಲ್ಲೂಕಿನ ರೈತರಿಗೆ ವಿಮಾ ಕಂತು ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.
ತೋಟಗಾರಿಕೆ ಇಲಾಖೆ ಸಹಾಯಕ ನೀರ್ದೆಶಕ ಶ್ರೀಕೃಷ್ಣ ಮಾತನಾಡಿ, ‘ಕೆಲವು ಗ್ರಾಮ ಪಂಚಾಯಿತಿಗೆ ಈಗಾಗಲೇ ಪರಿಹಾರ ಮೊತ್ತ ಜಮೆ ಆಗಿದ್ದು, ಉಳಿದ ಗ್ರಾಮ ಪಂಚಾಯಿತಿಗೆ ಶೀಘ್ರದಲ್ಲಿ ವಿಮಾ ಪರಿಹಾರ ಬರಲಿದೆ’ ಎಂದರು.
ಉಪ ವಿಭಾಗಾಧಿಕಾರಿ ಸುದರ್ಶನ್ ಮನವಿ ಸ್ವೀಕರಿಸಿ ಮಾತನಾಡಿ, ‘ವಿಮಾ ಪರಿಹಾರದಲ್ಲಿ ಗೊಂದಲ ಉಂಟಾಗಿರುವ ಬಗ್ಗೆ ಡಿ.24 ರಂದು ವಿಮಾ ಕಂಪನಿ ಅಧಿಕಾರಿಗಳು ಇಲ್ಲಿಗೆ ಬಂದು ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ’ ಎಂದರು.
ಪ್ರತಿಭಟನೆಯಲ್ಲಿ ವಿವಿಧ ಸಹಕಾರ ಸಂಘದ ಅಧ್ಯಕ್ಷರಾದ ಕೆ.ಎಂ ರಮೇಶ್ ಭಟ್, ಎಂ.ಎಚ್ ನಟರಾಜ್, ಬೇಗಾನೆ ಪ್ರಸನ್ನ, ವೆಂಕಟೇಶ್, ವಿವಿದ ರೈತರ ಪರ ಸಂಘಟನೆಯ ಮುಖಂಡರಾದ ಚಂದ್ರಶೇಖರ್ ಕಾನೋಳ್ಳಿ, ಅನಿಲ್ ಹೊಸಕೊಪ್ಪ, ಅಂಬ್ಲೂರು ರಾಮಕೃಷ್ಣ, ಸತ್ಯಪ್ರಕಾಶ್, ನರೇಂದ್ರ ಹೆಗ್ಡೆ ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.