
ಚಿಕ್ಕಮಗಳೂರು: ಮಳೆಗಾಲದಲ್ಲಿ ಹಸಿರಿನಿಂದ ಕಂಗೊಳಿಸುವ ಕಾಫಿನಾಡಿನ ಅರಣ್ಯ ಸಂಪತ್ತು ಬೇಸಿಗೆಯಲ್ಲಿ ಕಾಳ್ಗಿಚ್ಚಿನ ಭಯದಲ್ಲಿದೆ. ಕಿಡಿಗೇಡಿಗಳು ಹಚ್ಚುವ ಕಿಡಿಗೆ ಶೋಲಾಕಾಡು ಮತ್ತು ವನ್ಯಜೀವಿಗಳು ಆತಂಕ ಎದುರಿಸುವಂತಾಗಿದೆ.
ಬೇಸಿಗೆ ಬಂತೆಂದರೆ ಕಾಳ್ಗಿಚ್ಚಿನ ಆತಂಕ ಜಿಲ್ಲೆಯನ್ನು ಕಾಡುತ್ತಿದೆ. ಹುಲ್ಲುಗಾವಲಿನ ನಡುವೆ ಇರುವ ಶೋಲಾ ಕಾಡು ಕಾಳ್ಗಿಚ್ಚಿಗೆ ಸಿಲುಕಿ ನಾಶವಾದರೆ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ ಎಂಬ ಆತಂಕ ಪರಸರವಾದಿಗಳಲ್ಲಿದೆ.
ಕಾಡಿನ ನೆಲದಲ್ಲಿ ಸಂಗ್ರಹವಾಗುವ ಎಲೆ, ಕಡ್ಡಿ-ಕೊಂಬೆ, ಉರುಳಿಬಿದ್ದ ಮರಗಳು, ಒಣಗಿದ ಹುಲ್ಲು, ಪೊದೆಗಳು ಕೊಳೆತು ಮಣ್ಣು ಸೇರಬೇಕು. ಈ ಕ್ರಿಯೆಗೆ ವರ್ಷಗಟ್ಟಲೇ ಸಮಯ ಬೇಕಾಗುತ್ತದೆ. ಈ ಎಲ್ಲಾ ಅರಣ್ಯ ತ್ಯಾಜ್ಯವು ಕೊಳೆತು, ಮಣ್ಣಿಗೆ ಮತ್ತೆ ಪೋಷಕಾಂಶಗಳು ಸೇರುವುದು ಕಾಡಿಗೆ ಅತ್ಯಗತ್ಯ.
ಜಿಲ್ಲೆಯಲ್ಲಿ ಶೋಲಾ ಕಾಡು ಮತ್ತು ಹುಲ್ಲುಗಾವಲನ್ನು ಒಳಗೊಂಡಿರುವ ಅರಣ್ಯ ಹೆಚ್ಚಾಗಿದ್ದು, ಹುಲ್ಲುಗಾವಲಿನಲ್ಲಿ ಹೆಚ್ಚಿನದಾಗಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಈ ವರ್ಷ ಚಳಿಗಾಲ ಆರಂಭದಲ್ಲೇ ಚಾರ್ಮಾಡಿ ಘಾಟಿಯಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡಿದೆ.
ಗುಡ್ಡಗಾಡು ಪ್ರದೇಶದಲ್ಲಿ ಕಾಳ್ಗಿಚ್ಚು ಕಾಣಿಸಿಕೊಳ್ಳುವುದರಿಂದ ಬೆಂಕಿ ನಂದಿಸುವುದು ಅರಣ್ಯ ಇಲಾಖೆಗೆ ಸಾಹಸದ ಕೆಲಸವಾಗಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದರೂ ವಾಹನಗಳನ್ನು ರಸ್ತೆ ಬದಿಯಲ್ಲೆ ನಿಲ್ಲಿಸಬೇಕಿದೆ. ಇದರಿಂದ ಗಿರಿ ಪ್ರದೇಶದ ಬೆಂಕಿ ನಂದಿಸುವುದು ಕಷ್ಟ. ರಸ್ತೆ ಬದಿಯಲ್ಲಿನ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ನೆರವಾಗುತ್ತಾರೆ.
ಉಳಿದಂತೆ ಕಡಿದಾದ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿಯೇ ಕಾರ್ಯನಿರ್ವಹಿಸಬೇಕು. ಸೊಪ್ಪು, ಫೈರ್ ಕಟರ್, ಬೀಟರ್ಸ್, ಬ್ಲೋಯರ್ಸ್ ಬಳಸಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ. ಒಣಗಿರುವ ಹುಲ್ಲುಗಾವಲಿನಲ್ಲಿ ಜೋರಾಗಿ ಹೊತ್ತಿಕೊಳ್ಳುವ ಬೆಂಕಿ ನಂದಿಸುವುದು ಕಷ್ಟದ ಕೆಲಸ.
ಬೇಸಿಗೆಗೂ ಮುನ್ನ ಅಗ್ನಿ ಗೆರೆ ನಿರ್ಮಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡುತ್ತಿದೆ. ಬೆಂಕಿಯ ಮೂಲಕವೇ ಹುಲ್ಲುಗಾವಲು ಸುಟ್ಟು ಗೆರೆಗಳನ್ನು ನಿರ್ಮಿಸಿದರೆ ಕಾಳ್ಗಿಚ್ಚು ಹರಡುವುದನ್ನು ತಡೆಯಲು ಸಾಧ್ಯ. ಈ ಕೆಲಸವನ್ನು ಕೆಲವೆಡೆ ಅರಣ್ಯ ಇಲಾಖೆ ಮಾಡುತ್ತಿದೆ.
ಕಿಡಿಗೇಡಿತನ, ತಪ್ಪು ತಿಳಿವಳಿಕೆ ಕಾರಣ: ಕಾಳ್ಗಿಚ್ಚು ಬಹುತೇಕ ಕಿಡಿಗೇಡಿಗಳ ಕೃತ್ಯದಿಂದಲೇ ಸಂಭವಿಸುತ್ತಿದೆ. ಅದಕ್ಕೆ ತಪ್ಪು ತಿಳಿವಳಿಕೆಗಳೇ ಹೆಚ್ಚಿನದಾಗಿ ಕಾರಣ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ವನ್ಯಜೀವಿ ಪ್ರಿಯರು.
ಬೆಂಕಿ ಹಾಕಿದರೆ ಹುಲ್ಲುಗಾವಲು ಹೊಸದಾಗಿ ಚಿಗುರಲಿದೆ ಎಂಬ ತಪ್ಪು ಅಭಿಪ್ರಾಯ ಇದೆ. ಬೆಂಕಿ ಹಾಕಿದರೆ ನಮಗೆ ಒಳ್ಳೆಯದಾಗಲಿದೆ ಎಂಬ ತಪ್ಪು ಗ್ರಹಿಕೆಯೂ ಇದೆ. ಆದ್ದರಿಂದ ಬೆಂಕಿ ಹಾಕಿ ಹೋಗುತ್ತಾರೆ. ಇದು ಕಾಡು ಮತ್ತು ಕಾಡು ಪ್ರಾಣಿಗಳಿಗೆ ತೊಂದರೆ ತಂದೊಡ್ಡುತ್ತಿದೆ ಎಂದು ಹೇಳುತ್ತಾರೆ.
‘ಎಲ್ಲಿಯೂ ತಾನಾಗಿಯೇ ಬೆಂಕಿ ಹೊತ್ತಿಕೊಂಡಿರುವ ಉದಾಹರಣೆ ಇಲ್ಲ. ಬಹುತೇಕ ಕಡೆ ಬೇಕೆಂದೆ ಹಚ್ಚಿರುವ ಬೆಂಕಿಯಿಂದ ಕಾಳ್ಗಿಚ್ಚು ಹೊತ್ತಿಕೊಂಡಿದೆ. ಜಾಗೃತಿ ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದೇವೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಮೂಡಿಗೆರೆ: ತಾಲ್ಲೂಕು ಸಂಪೂರ್ಣವಾಗಿ ಮಲೆನಾಡಿಗೆ ಸೇರಿದ್ದು ಬಾಳೂರು ಮೀಸಲು ಅರಣ್ಯ ಸಾರಗೋಡು ಮೀಸಲು ಅರಣ್ಯ ಸೇರಿ ಬೃಹತ್ ಅರಣ್ಯ ಪ್ರದೇಶ ಇದೆ. ಈ ಅರಣ್ಯ ಪ್ರದೇಶವೆಲ್ಲವೂ ಗುಡ್ಡಗಾಡು ಪ್ರದೇಶವಾಗಿರುವುದರಿಂದ ಬೇಸಿಗೆಯಲ್ಲಿ ಸಂಭವಿಸುವ ಕಾಳ್ಗಿಚ್ಚು ನಿಯಂತ್ರಿಸುವುದೇ ಸವಾಲಾಗುತ್ತದೆ. ಮೀಸಲು ಅರಣ್ಯ ಪ್ರದೇಶದ ಕಣ್ಗಾವಲಿಗೆ ಅರಣ್ಯ ಇಲಾಖೆಯು ಪ್ರತ್ಯೇಕ ತಂಡ ಮಾಡಿ ಕಾರ್ಯ ನಿರ್ವಹಿಸುತ್ತಿದ್ದರೂ ಬಾಳೂರು ಮೀಸಲು ಅರಣ್ಯದ ಚಾರ್ಮಾಡಿ ಘಾಟಿ ಸಾರಗೋಡು ಮೀಸಲು ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತದೆ.
ತಾಲ್ಲೂಕಿನಲ್ಲಿ ಅಗ್ನಿಶಾಮಕ ಠಾಣೆಯಿದ್ದರೂ ಅದರಲ್ಲಿ 5 ಮಂದಿ ಅಗ್ನಿ ನಂದಿಸುವ ಸಿಬ್ಬಂದಿ ಇಬ್ಬರು ಚಾಲಕರು ಹಾಗೂ ಒಬ್ಬರು ಚಾಲಕ ಕಂ ಮೆಕ್ಯಾನಿಕ್ ಹುದ್ದೆ ಖಾಲಿಯಿದೆ. ಇರುವ ಬೆರಳೆಣಿಕೆ ಸಿಬ್ಬಂದಿಯೇ ಬೆಂಕಿ ನಂದಿಸಬೇಕಾದ ಅನಿವಾರ್ಯತೆಯಿದೆ. ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಬೆಂಕಿ ಪ್ರಕರಣಗಳು ಕೂಡ ಹೆಚ್ಚಾಗುತ್ತವೆ. ಏಕಕಾಲದಲ್ಲಿ ಎರಡು– ಮೂರು ದುರಂತಗಳು ಸಂಭವಿಸಿದರೆ ಸಂಪೂರ್ಣವಾಗಿ ಸುಟ್ಟು ಹೋದರೂ ಸಿಬ್ಬಂದಿ ತೆರಳಲಾಗದ ಸ್ಥಿತಿ ಇದೆ. ಗುಡ್ಡಗಾಡು ಪ್ರದೇಶಕ್ಕೆ ರಸ್ತೆ ಸಮಸ್ಯೆ ನೆಟ್‌ವರ್ಕ್ ಸಮಸ್ಯೆಗಳು ಇರುವುದು ಅಗ್ನಿಶಾಮಕ ಸಿಬ್ಬಂದಿ ಸ್ಥಳ ತಲುಪಲು ಸವಾಲಾಗಿ ಪರಿಣಮಿಸುತ್ತಿದೆ.
ವಿಸ್ತಾರದಲ್ಲಿ ತಾಲ್ಲೂಕು ದೊಡ್ಡದಾಗಿರುವುದರಿಂದ ಅಗ್ನಿಶಾಮಕ ದಳವನ್ನು ಇನ್ನಷ್ಟು ಗಟ್ಟಿಗೊಳಿಸಬೇಕಿದೆ. ಕನಿಷ್ಠ ಬೇಸಿಗೆಯಲ್ಲಾದರೂ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಬೆಂಕಿ ನಂದಿಸುವ ಕಾರ್ಯಕ್ಕೆ ನೆರವಾಗಬೇಕು. ಬೆಂಕಿ ಕಾಣಿಸಿಕೊಳ್ಳುವ ಪ್ರದೇಶಗಳಲ್ಲಿ ಯುವಕರ ಗುಂಪುಗಳನ್ನು ರಚಿಸಿ ತರಬೇತಿ ನೀಡಬೇಕು ಎಂಬುದು ಸ್ಥಳೀಯರ ಅಭಿಪ್ರಾಯ.
ಕಳಸ ತಾಲ್ಲೂಕಿನಲ್ಲಿ ಕಾಡಿನ ಬೆಂಕಿ ತಡೆಯಲು ಅರಣ್ಯ ಇಲಾಖೆ ತೀವ್ರ ಪ್ರಯಾಸ ಪಡುತ್ತಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಬೆಂಕಿ ತಡೆಯಲು ಸಮಾರೋಪಾದಿ ಕೆಲಸ ಮಾಡಲಾಗುತ್ತಿದೆ. ಕಳಸ ವಲಯ ವ್ಯಾಪ್ತಿಯಲ್ಲೂ ಬೆಂಕಿ ಮಾರ್ಗ ಮಾಡಲಾಗುತ್ತಿದೆ. ಹುಲ್ಲನ್ನು ಯಂತ್ರ ಬಳಸಿ ಸವರಿ ಬೆಂಕಿ ನಿಯಂತ್ರಣ ಮಾಡಲು ಸಿದ್ಧತೆ ನಡೆದಿದೆ. ಬೆಂಕಿ ತಡೆಯಲು ಹೆಚ್ಚುವರಿ ಸಿಬ್ಬಂದಿ ಬಳಸಿಕೊಂಡು ನಿರ್ವಹಣೆ ಮಾಡಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಅಲ್ಲಲ್ಲಿ ಕಾಳ್ಗಿಚ್ಚು ಅರಣ್ಯಕ್ಕೆ ಹಾನಿ ಮಾಡಿತ್ತು. ಆದ್ದರಿಂದ ಇನ್ನಷ್ಟು ಎಚ್ಚರಿಕೆ ವಹಿಸಿ ಈ ಬಾರಿ ಬೆಂಕಿ ತಡೆಯುವ ಕೆಲಸ ನಡೆಯುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ನರಸಿಂಹರಾಜಪುರ: ಬೇಸಿಗೆ ಆರಂಭವಾಗಿರುವುದರಿಂದ ತಾಲ್ಲೂಕಿನ ವ್ಯಾಪ್ತಿಯಲ್ಲಿ ಕಾಳ್ಗಿಚ್ಚು ನಿಯಂತ್ರಣಕ್ಕೆ ಅರಣ್ಯ ಇಲಾಖೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಅರಣ್ಯಕ್ಕೆ ಬೆಂಕಿ ಬೀಳುವ ಸಾಧ್ಯತೆ ಇರುವ ಗ್ರಾಮಗಳ ವ್ಯಾಪ್ತಿಯಲ್ಲಿ ಈಗಾಗಲೇ ಬೆಂಕಿ ಪಥ ನಿರ್ಮಿಸಲಾಗುತ್ತಿದೆ. ಅರಣ್ಯ ಇಲಾಖೆಯ ಸಿಬ್ಬಂದಿಗೆ ಬೆಂಕಿ ನಂದಿಸಲು ಬೇಕಾಗಿರುವ ಬ್ಲೋವರ್ ಹೆಲ್ಮೆಟ್ ಕೈಗವಸು ಶೋಗಳನ್ನು ನೀಡಲಾಗಿದೆ.
ಅರಣ್ಯಕ್ಕೆ ಬೆಂಕಿ ಬಿದ್ದಾಗ ನಂದಿಸುವ ಬಗ್ಗೆ ಅಗ್ನಿಶಾಮಕ ಇಲಾಖೆಯಿಂದ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾಡಂಚಿನ ಗ್ರಾಮಸ್ಥರಿಗೆ ಕಾಳ್ಗಿಚ್ಚು ತಡೆಯುವ ಬಗ್ಗೆ ಅರಿವು ಮೂಡಿಸಲು ಸಂಪನ್ಮೂಲ ವ್ಯಕ್ತಿಗಳ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಯಾವುದೇ ಭಾಗದಲ್ಲಿ ಅರಣ್ಯಕ್ಕೆ ಬೆಂಕಿ ಬಿದ್ದರೆ ಕರ್ನಾಟಕ ಸ್ಟೇಟ್ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್(ಕೆಎಸ್‌ಆರ್‌ಎಸ್ಎಸಿ) ಉಪಗ್ರಹದಿಂದ ನೇರವಾಗಿ ಅರಣ್ಯ ಇಲಾಖೆಯ ಸಿಬ್ಬಂದಿಯ ದೂರವಾಣಿಗೆ ಸಂದೇಶ ರವಾನೆಯಾಗುತ್ತದೆ. ಕೂಡಲೇ ಸ್ಥಳಕ್ಕೆ ಹೋಗಿ ಬೆಂಕಿ ನಂದಿಸುವ ಕಾರ್ಯ ಮಾಡಲಾಗುತ್ತದೆ ಎಂದು ವಲಯ ಅರಣ್ಯಾಧಿಕಾರಿ ಪ್ರವೀಣಕುಮಾರ್ ಮಾಹಿತಿ ನೀಡಿದರು.
ತಾಲ್ಲೂಕು ಕೇಂದ್ರದಲ್ಲಿ ಅಗ್ನಿಶಾಮಕ ಠಾಣೆ ಆರಂಭವಾಗಿದೆ. ಇಲಾಖೆಗೆ ಈಗಾಗಲೇ ನೂತನ ಅಗ್ನಿಶಾಮಕ ವಾಹನವನ್ನು ಸರ್ಕಾರ ನೀಡಿದೆ. ಒಟ್ಟು 25 ಹುದ್ದೆಗಳು ಮಂಜೂರಾಗಿದ್ದು 17 ಹುದ್ದೆಗಳು ಭರ್ತಿಯಾಗಿವೆ. 7 ಹುದ್ದೆಗಳು ಖಾಲಿ ಇದೆ ಎಂದು ಮೂಲಗಳು ತಿಳಿಸಿವೆ.
ತರೀಕೆರೆ: ಅರೆಮಲೆನಾಡು ಪ್ರದೇಶವಾದ ತರೀಕೆರೆ ಮತ್ತು ಬಯಲು ಸೀಮೆಯ ಅಜ್ಜಂಪುರ ತಾಲ್ಲೂಕಿನ ವ್ಯಾಪ್ತಿಗೆ ಒಂದೇ ಅಗ್ನಿ ಶಾಮಕ ಠಾಣೆ ಇದೆ. ಈ ಠಾಣೆಯಲ್ಲಿ ಒಂದು ಅಗ್ನಿಶಾಮಕ ವಾಹನವಿದ್ದು ಸಂಕಷ್ಟದ ಸಮಯದಲ್ಲಿ ವಾಹನದ ಕೊರತೆಯಾಗಲಿದೆ. ಇನ್ನೊಂದು ವಾಹನವಾದರೂ ಈ ಠಾಣೆಗೆ ಅಗತ್ಯ ಇದೆ. ಸರ್ಕಾರ ಆದಷ್ಟು ಬೇಗ ಮತ್ತೊಂದು ವಾಹನವನ್ನು ಒದಗಿಸಬೇಕು ಎಂಬುದು ಸಾರ್ವಜನಿಕರು ಒತ್ತಾಯ.
ಕೊಪ್ಪ: ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು ಕಾಡಿಗೆ ಬೆಂಕಿ ತಗಲುವುದನ್ನು ತಡೆಗಟ್ಟಲು ಅರಣ್ಯ ಇಲಾಖೆಯು ಸಾರ್ವಜನಿಕರಿಗೆ ಎಚ್ಚರಿಕೆ ಜೊತೆಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲು ಸಿದ್ಧವಾಗಿದೆ. ಪಟ್ಟಣದಲ್ಲಿ ಅಗ್ನಿ ಶಾಮಕ ಠಾಣೆ ಇದ್ದು ತುರ್ತು ಸಂದರ್ಭದಲ್ಲಿ ಸ್ಪಂದನೆ ಸಿಗುತ್ತಿದೆ. ಆಕಸ್ಮಿಕವಾಗಿ ಸಂಭವಿಸುವ ಅಗ್ನಿ ಅವಘಡಗಳನ್ನು ತಪ್ಪಿಸಲು ಅಗ್ನಿ ಶಾಮಕ ಠಾಣೆ ಜೊತೆಗೂಡಿ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ. ‘ಬೆಂಕಿ ತಗಲಬಹುದಾದ ಒಣ ಗಿಡಗಳು ತರಗೆಲೆಗಳನ್ನು ಬೇರ್ಪಡಿಸಿ ಬೆಂಕಿ ರೇಖೆಗಳನ್ನು ಮಾಡಲಾಗುತ್ತಿದೆ. ಬೆಂಕಿ ಹತ್ತಿಕೊಂಡಿರುವ ಬಗ್ಗೆ ಸ್ಯಾಟಲೈಟ್ ಮೂಲಕ ಬರುವ ಸೂಚನೆಗಳ ಕಡೆಗೆ ಗಮನ ಹರಿಸಲಾಗುತ್ತದೆ. ಸಾರ್ವಜನಿಕರ ಜವಾಬ್ದಾರಿಯನ್ನು ನೆನಪಿಸುವ ಕಾರ್ಯಕ್ರಮ ಮುಂದಿನ ವಾರದಲ್ಲಿ ಮಾಡುತ್ತಿದ್ದೇವೆ’ ಎಂದು ವಲಯ ಅರಣ್ಯಾಧಿಕಾರಿ ರಂಗನಾಥ್ ತಿಳಿಸಿದರು.
ಅರಣ್ಯ ಇಲಾಖೆ ಚಿಕ್ಕಮಗಳೂರು ವಿಭಾಗ ವ್ಯಾಪ್ತಿಯಲ್ಲಿ ಹೊಸದಾಗಿ 130 ಕಿಲೋ ಮೀಟರ್ ಬೆಂಕಿ ಪಥ ನಿರ್ಮಿಸಲಾಗಿದೆ ಎಂದು ಉಪಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು ತಿಳಿಸಿದರು. ಈ ಮೊದಲೇ 840 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಬೆಂಕಿ ಪಥಗಳಿವೆ. ಬೇಸಿಗೆ ಕಾರಣಕ್ಕೆ 55 ಜನ ಬೆಂಕಿ ವೀಕ್ಷಕರ ನೇಮಕ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಸಿಎಸ್‌ಆರ್ ನಿಧಿಯಿಂದ ನಾಲ್ಕು ವಾಹನಗಳನ್ನು ಅರಣ್ಯ ಇಲಾಖೆಗೆ ನೀಡಲಾಗಿದೆ. ಈ ಪೈಕಿ ಮೂರು ವಾಹನಗಳು ಈಗಾಗಲೇ ಬಂದಿದ್ದು ಶೀಘ್ರವೇ ಇನ್ನೊಂದು ವಾಹನ ಬರಲಿದೆ. ನಾಲ್ಕು ವಾಹನಗಳನ್ನು ಬೆಂಕಿ ನಿಯಂತ್ರಣ ಚಟುವಟಿಕೆಗೆ ನೀಡಲಾಗುತ್ತಿದೆ ಎಂದರು. ಸಿಬ್ಬಂದಿಗಳಿಗೆ ತರಬೇತಿ ಕೂಡ ನೀಡಲಾಗಿದ್ದು ನಿಯಂತ್ರಣಾ ಕೊಠಡಿಯನ್ನೂ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪೂರಕ ಮಾಹಿತಿ: ರವಿ ಕೆಳಂಗಡಿ, ಕೆ.ವಿ.ನಾಗರಾಜ್, ಕೆ.ನಾಗರಾಜ್, ರವಿಕುಮಾರ ಶೆಟ್ಟಿಹಡ್ಲು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.