
ಎಂ.ಆರ್. ದೇವರಾಜಶೆಟ್ಟಿ
ಚಿಕ್ಕಮಗಳೂರು: ‘ನಗರದ ವಿಜಯಪುರ ಬಡಾವಣೆಯಲ್ಲಿ ಮುಸ್ಲಿಂ ಯುವಕರು ಮನೆಯ ಮೇಲೆ ಕಲ್ಲು ಎಸೆದಿದ್ದಾರೆ. ಹೆಣ್ಣು ಮಗಳ ಪರವಾಗಿ ನಿಲ್ಲಲು ಹೋದ ಬಿಜೆಪಿ ಮುಖಂಡರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿಗೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆರ್. ದೇವರಾಜಶೆಟ್ಟಿ ಆರೋಪಿಸಿದರು.
‘ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೊಸದಾಗಿ ಬಂದಿದ್ದಾರೆ. ಜಿಲ್ಲೆಯ ರಾಜಕೀಯ ಮುಖಂಡರನ್ನು, ಸಂಘ–ಸಂಸ್ಥೆಗಳ ಮುಖಂಡರನ್ನು ಕರೆದು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವರು ಎಂದು ಭಾವಿಸಿದ್ದೆವು. ಆದರೆ, ಒಂದು ತಿಂಗಳು ಕಳೆದರೂ ಆಗಿಲ್ಲ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ವಿಜಯಪುರ ಬಡಾವಣೆಯಲ್ಲಿ ಅನೇಕ ದಿನಗಳಿಂದ ಹೆಣ್ಣು ಮಗಳು ವಾಸವಿದ್ದ ಮನೆಯ ಬಾಗಿಲು ಬಡಿಯುವುದು, ಮನೆ ಮೇಲೆ ಕಲ್ಲು ಎಸೆಯುವುದು ನಡೆಯುತ್ತಿತ್ತು. ಸೋಮವಾರ ಮನೆ ಮೇಲೆ ಕಲ್ಲು ಎಸೆಯಲಾಗಿದೆ. ಸುತ್ತಮುತ್ತಲ ಜನ ಹಾಗೂ ಸಂತೋಷ್ ಕೋಟ್ಯಾನ್ ಸೇರಿದಂತೆ ಮುಖಂಡರು ಪರಿಶೀಲಿಸಿದಾಗ ಮನೆಯ ಸುತ್ತ ಕಲ್ಲುಗಳು ಕಂಡು ಬಂದಿವೆ’ ಎಂದು ಹೇಳಿದರು.
ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯದಲ್ಲಿ ಮುಸ್ಲಿಂ ಯುವಕರ ತಂಡ ಕಾಣಿಸಿಕೊಂಡಿದೆ. ಅದರಲ್ಲಿ ಇಬ್ಬರನ್ನು ಪತ್ತೆ ಮಾಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಸಣ್ಣದಾಗಿ ಘರ್ಷಣೆಯಾಗಿದ್ದು, ರಾತ್ರೋರಾತ್ರಿ ಯುವಕರನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ ಎಂದು ದೂರಿದರು.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾ ಬಿಜೆಪಿಯಿಂದ ತಂಡ ರಚನೆ ಮಾಡಿಕೊಂಡು ಕ್ರಮ ತೆಗೆದು ಕೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಲೋಪ ಮುಚ್ಚಲು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಪುತ್ರ ಎಂಬ ಕಾರಣಕ್ಕೆ ರಾಜಕೀಯದಲ್ಲಿ ಹೆಸರಿದೆ. ಆ ಅಹಂಕಾರದಿಂದ ಆರ್‌ಎಸ್‌ಎಸ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
ಕಾಡಾನೆ ದಾಳಿಗೆ ಜಿಲ್ಲೆಯಲ್ಲಿ ಮತ್ತೊಬ್ಬರು ಮೃತಪಟ್ಟಿದ್ದಾರೆ. ಕಾಡಾನೆ ದಾಳಿ ನಿರಂತರವಾಗಿದೆ. ಇದನ್ನ ಶಾಶ್ವತವಾಗಿ ತಡೆಯಲು ಜಿಲ್ಲೆಯ ಎಲ್ಲಾ ಶಾಸಕರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಕಲ್ಮರುಡಪ್ಪ, ಪುಷ್ಪರಾಜ್, ಮಹೇಶ್ ಈಶ್ವರಹಳ್ಳಿ, ಚಮಿನ್, ಕೋಟೆ ಪ್ರಶಾಂತ್, ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.