ADVERTISEMENT

ಸಮುದ್ರ ಮೀನಿನದರ ಇಳಿಕೆ: ಹೆಚ್ಚಿದ ಬೇಡಿಕೆ

ಕೆರೆ, ಅಣೆಕಟ್ಟೆ ಮೀನುಗಳಿಗೂ ಇಳಿದ ದರ: ಹೋಟೆಲ್‌ಗಳಲ್ಲಿ ಘಮಲು

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2022, 6:05 IST
Last Updated 18 ನವೆಂಬರ್ 2022, 6:05 IST
ಮೂಡಿಗೆರೆಯ ಮೀನು ಮಾರುಕಟ್ಟೆಯಲ್ಲಿರುವ ಹ್ಯಾರೀಸ್ ಮೀನಿನ ಅಂಗಡಿಯಲ್ಲಿ ಮಾರಾಟಕ್ಕೆ ಸಿದ್ಧವಾಗಿರುವ ನಾನಾ ಬಗೆಯ ಮೀನುಗಳು.
ಮೂಡಿಗೆರೆಯ ಮೀನು ಮಾರುಕಟ್ಟೆಯಲ್ಲಿರುವ ಹ್ಯಾರೀಸ್ ಮೀನಿನ ಅಂಗಡಿಯಲ್ಲಿ ಮಾರಾಟಕ್ಕೆ ಸಿದ್ಧವಾಗಿರುವ ನಾನಾ ಬಗೆಯ ಮೀನುಗಳು.   

ಮೂಡಿಗೆರೆ: ಮಲೆನಾಡಿನಲ್ಲಿ ಮೂರು ತಿಂಗಳಿನಿಂದ ಮೀನಿನ ದರ ಇಳಿಕೆಯಾಗಿದ್ದು ಬೇಡಿಕೆ ಹೆಚ್ಚಾಗಿದೆ.

ಮಲೆನಾಡಿನಲ್ಲಿ ಕೆರೆ ಮೀನುಗಳನ್ನು ಸ್ಥಳೀಯವಾಗಿಯೇ ಉತ್ಪಾದನೆ ಮಾಡಲಾಗುತ್ತದೆ. ಸಮುದ್ರ ಮೀನನ್ನು, ಮಂಗಳೂರು, ಉಡುಪಿ ಜಿಲ್ಲೆಗಳಿಂದ ತಾಲ್ಲೂಕಿಗೆ ಸರಬರಾಜು ಮಾಡಲಾಗುತ್ತದೆ. ಬಣಕಲ್ ಹಾಗೂ ಹ್ಯಾಂಡ್ ಪೋಸ್ಟ್ ನಲ್ಲಿ ಪ್ರತಿದಿನವೂ ಮೀನಿನ ವಹಿವಾಟು ನಡೆಸಲಾಗುತ್ತದೆ. ಇಲ್ಲಿಂದ ತಾಲ್ಲೂಕಿನ ನಾನಾ ಭಾಗಗಳಿಗೆ, ಸಂತೆಗಳಿಗೆ ಮೀನುಗಳನ್ನು ರಬರಾಜು ಮಾಡಲಾಗುತ್ತದೆ. ಎರಡು ತಿಂಗಳಿನಿಂದ ಸಮುದ್ರ ಮೀನಿನ ದರವು ಇಳಿಕೆಯಾಗಿದ್ದು, ಬೆಲೆ ಇಳಿಕೆಯಾಗಿರುವುದರಿಂದ ಬೇಡಿಕೆ ಹೆಚ್ಚಾಗಿದೆ. ಇದೇ ಮೊದಲ ಬಾರಿಗೆ ಸಮುದ್ರ ಮೀನುಗಳಾದ ಬೂತಾಯಿ, ಬಂಗಡೆ ಮೀನುಗಳಿಗೆ ದರ ಇಳಿಕೆಯಾಗಿದ್ದು, ಎಂಟು ದಿನಗಳ ಹಿಂದೆ ಕೆಜಿಯೊಂದಕ್ಕೆ ₹80 ಕ್ಕೆ ಮಾರಾಟವಾಗಿದ್ದು, ಇದು ಈ ವರ್ಷದಲ್ಲಿಯೇ ಅತ್ಯಂತ ಕಡಿಮೆ ದರವಾಗಿತ್ತು. ಸಮುದ್ರ ಮೀನಿಗೆ ದರ ಕಡಿಮೆಯಾಗಿರುವುದರಿಂದ ಕೆರೆ ಮೀನಿನ ದರವೂ ಅಲ್ಪ ಪ್ರಮಾಣದಲ್ಲಿ ಬೆಲೆ ಇಳಿಮುಖವಾಗಿದೆ.

‘ಆಗಸ್ಟ್ ತಿಂಗಳಿನಿಂದ ಮೀನಿನ ಪೂರೈಕೆ ಹೆಚ್ಚಳವಾಗಿರುತ್ತದೆ. ಈಗ ಉತ್ತಮ ಗುಣಮಟ್ಟದ ಸಮುದ್ರ ಮೀನು ಪೂರೈಕೆಯಾಗುತ್ತಿದ್ದು, ಕರೆ ಪಾಂಪ್ಲೆಟ್ ಕೂಡ ಚೆನ್ನಾಗಿರುತ್ತವೆ. ಕಾಟ್ಲಾ ಪೂರೈಕೆ ಇಳಿಮುಖವಾಗಿರುವುದರಿಂದ ಬೆಲೆ ಹೆಚ್ಚಾಗಿದೆ. ಈಗ ಅತ್ಯಂತ ಕಡಿಮೆ ಬೆಲೆಯಾಗಿದ್ದು, ಗ್ರಾಹಕರು ಸಮುದ್ರದ ಮೀನನ್ನು ಹೆಚ್ಚು ಬಳಸಲು ಇದು ಸೂಕ್ತ ಸಮಯ. ತಾಲ್ಲೂಕಿನಲ್ಲಿ ಸಂತೆಗಳು ಸೇರಿದಂತೆ ಪ್ರತಿನಿತ್ಯ ಐದು ಟನ್ ಗೂ ಅಧಿಕ ಮೀನುಗಳು ಮಾರಾಟವಾಗುತ್ತವೆ ಎನ್ನುತ್ತಾರೆ ಮೀನಿನ ವ್ಯಾಪಾರಿ ಫಿಶ್ ಮೋಣು.

ADVERTISEMENT

‘ಕೆರೆಗಳಲ್ಲಿ ಈಗ ಮೀನಿನ ಮರಿಗಳನ್ನು ಬಿಡುವ ಕಾಲವಾಗಿದೆ. ಮೀನನ್ನು ಹಿಡಿದಿಲ್ಲದ ಕೆರೆಗಳಲ್ಲಿ ಬೇಡಿಕೆ ಹಾಗೂ ದರಕ್ಕೆ ಅನುಗುಣವಾಗಿ ಮೀನನ್ನು ಹಿಡಿದು ಮಾರಾಟ ಮಾಡಲಾಗುತ್ತದೆ. ಮೂಡಿಗೆರೆ ಭಾಗಕ್ಕೆ ಬೇಲೂರು ಡ್ಯಾಂ ಮೀನು ಕೂಡ ಬರುವುದರಿಂದ ಅಲ್ಲಿನ ಪೂರೈಕೆಯು ಕೂಡ ಸ್ಥಳೀಯ ಮೀನಿನ ಬೇಡಿಕೆಯನ್ನು ನಿರ್ಧರಿಸುತ್ತದೆ. ಸ್ಥಳೀಯವಾಗಿ ಸಾಕುವ ಮೀನುಗಳು ಹೆಚ್ಚು ರುಚಿ ಹಾಗೂ ಫ್ರೈ ಖಾದ್ಯಕ್ಕೆ ಹೆಚ್ಚಾಗಿ ಬಳಕೆಯಾಗುವುದರಿಂದ ಹೋಟೆಲ್ ಗಳಲ್ಲಿ ಸ್ಥಳೀಯ ಮೀನುಗಳಿಗೆ ಹೆಚ್ಚಿನ ಬೇಡಿಕೆಯಿರುತ್ತದೆ’ ಎನ್ನುತ್ತಾರೆ ಮೀನು ಉತ್ಪಾದರ ಶಂಕರ್ ಚೀಕನಹಳ್ಳಿ.

ಮಲೆನಾಡಿನಲ್ಲಿ ಮೀನಿನ ಖಾದ್ಯಕ್ಕೆ ಹೆಚ್ಚಿನ ಬೇಡಿಕೆಯಿದ್ದು, ಪ್ರತ್ಯೇಕವಾದ ಮೀನಿನ ಹೋಟೆಲ್ ಗಳೇ ಪ್ರಸಿದ್ಧಿಯನ್ನು ಪಡೆದಿವೆ. ಮೀನಿನ ದರ ಇಳಿಕೆಯಾಗಿದ್ದರೂ ಹೋಟಲ್ ನಲ್ಲಿ ದರ ಮಾತ್ರ ಇಳಿದಿಲ್ಲದಿರುವುದು ಮೀನು ಪ್ರಿಯರನ್ನು ನಿರಾಸೆಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.