ಬೀರೂರು (ಕಡೂರು): ಬೀರೂರು ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದ ಡಾ.ಎಲ್.ಆರ್.ನಂಜುಂಡಸ್ವಾಮಿ ಸ್ಮಾರಕ ರಂಗಮಂದಿರದಲ್ಲಿ ಮಿತ್ರ ಸಮಾಜ ಮತ್ತು ಪುರಸಭೆ ವತಿಯಿಂದ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಪ್ರತಿಷ್ಠಾಪಿಸಿದ್ದ ಸತ್ಯ ಗಣಪತಿ ಮೂರ್ತಿಯನ್ನು ಶುಕ್ರವಾರ ಬಾಕಿನಕೆರೆಯಲ್ಲಿ ವಿಸರ್ಜಿಸಲಾಯಿತು.
ಗಣೇಶ ಚತುರ್ಥಿಯಿಂದ ಪ್ರತಿದಿನ ವಿಶೇಷ ಅಲಂಕಾರ, ಪೂಜೆ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ನೆರವೇರಿತು. ಪಟ್ಟಣದ ಆಟೊ ಸಂಘ, ಟ್ಯಾಕ್ಸಿ, ಲಾರಿ, ಪತ್ರಕರ್ತರು, ಛಾಯಾಗ್ರಾಹಕರು ಸೇರಿದಂತೆ ವಿವಿಧ ಸಂಘ–ಸಂಸ್ಥೆಗಳಿಂದ ವಿಶೇಷ ಪೂಜೆ ನೆರವೇರಿಸಲಾಗಿತ್ತು. ರಸಮಂಜರಿ, ನೃತ್ಯ, ಭಜನೆ, ಹರಿಕಥೆ ಸೇರಿದಂತೆ ಪ್ರತಿದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗಣಪತಿ ಹೋಮ, ಜೈನ ಸಮುದಾಯದಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಪೆಂಡಾಲ್ ಆವರಣದಲ್ಲಿ ಅಳವಡಿಸಲಾಗಿದ್ದ ವಸ್ತು ಪ್ರದರ್ಶನದಲ್ಲಿ ನಿಯೋಜಿಸಿದ್ದ ಆಟೋಟಗಳನ್ನು ಆಡುವ ಮೂಲಕ ಸಾರ್ವಜನಿಕರು ಮತ್ತು ಮಕ್ಕಳು ಆನಂದಿಸಿದರು.
ವಿಜಯದಶಮಿಯ ರಾತ್ರಿ ವಿವಿಧ ಪೂಜಾ ಕಾರ್ಯಕ್ರಮ ನೆರವೇರಿಸಿದ ನಂತರ, ಸತ್ಯ ಗಣಪತಿ ಮೂರ್ತಿಯನ್ನು ಅಲಂಕೃತ ವಾಹನದಲ್ಲಿ ಕುಳ್ಳಿರಿಸಲಾಯಿತು. ಬಳಿಕ, ಮದ್ದುಗುಂಡಿನ ಪ್ರದರ್ಶನ ನಡೆಯಿತು.
ಡಿ.ಜೆ ಮೇಳ, ಚಿಟ್ಟೆ ಮೇಳ, ಜಾನಪದ ವಾದ್ಯಗಳ ಗೋಷ್ಠಿಗಳೊಡನೆ ಪಟ್ಟಣದ ಪ್ರಮುಖ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಿ, ಮಹಾನವಮಿ ಬಯಲಿಗೆ ಕರೆತರಲಾಯಿತು. ಶ್ರೀಮೈಲಾರಲಿಂಗೇಶ್ವರ ಸ್ವಾಮಿಯವರ ಕಾರಣಿಕ ಮುಗಿಸಿಕೊಂಡು ಪುನಃ ಮೆರವಣಿಗೆ ಹೊರಟು ಮಹಾತ್ಮಗಾಂಧಿ ವೃತ್ತ, ರೈಲ್ವೆ ಸ್ಟೇಷನ್ ರಸ್ತೆಯಿಂದ ಸಾಗಿ ನಂತರ, ಲಿಂಗದಹಳ್ಳಿ ರಸ್ತೆ ಮಾರ್ಗವಾಗಿ ಅಶೋಕನಗರ ಮತ್ತು ಕ್ಯಾಂಪ್ ಬಡಾವಣೆಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಲಿಂಗದಹಳ್ಳಿ ರಸ್ತೆಯಲ್ಲಿ ಪೊಲೀಸರು ಡಿ.ಜೆ ನಿಲ್ಲಿಸಲು ಆದೇಶ ನೀಡಿದ್ದಾರೆ ಎಂದಾಕ್ಷಣ, ಮೆರವಣಿಗೆಯಲ್ಲಿ ಇದ್ದವರು ಮತ್ತು ಯುವಕರು, ಪುರಸಭೆ ಸದಸ್ಯರು ಪ್ರತಿವರ್ಷ ಈ ಮೆರವಣಿಗೆಯನ್ನು ಆಚರಿಸುತ್ತಿದ್ದೇವೆ. ಮಾರ್ಗದಕ್ಯಾಂಪ್‌ಗೆ ಡಿ.ಜೆಯೊಂದಿಗೆ ಪ್ರವೇಶಿಸುವುದನ್ನು ಏಕೆ ತಡೆಯುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಡಿ.ಜೆಗೆ ಅನುಮತಿ ದೊರೆಯುವವರೆಗೆ ರಸ್ತೆಯಲ್ಲಿಯೇ ಕೆಲವು ಕಾಲ ಗಣಪತಿಯನ್ನು ನಿಲ್ಲಿಸಲಾಗಿತ್ತು. ಪೊಲೀಸರ ಮನವೊಲಿಸಿ ಅನುಮತಿ ನೀಡಿದ ನಂತರ ಮೆರವಣಿಗೆಯನ್ನು ಮುಂದಕ್ಕೆ ಕರೆದೊಯ್ಯಲಾಯಿತು. ಪಟ್ಟಣದಾದ್ಯಂತ ಭಕ್ತರು ಗಣಪತಿಯನ್ನು ಸ್ವಾಗತಿಸಿ ಹಣ್ಣು, ಕಾಯಿ ಸಮರ್ಪಿಸಿ ಭಕ್ತಿಯಿಂದ ಬೀಳ್ಕೊಟ್ಟರು. ಶುಕ್ರವಾರ ಮಧ್ಯಾಹ್ನದ ವೇಳೆಗೆ ಬೀರೂರು ಸಮೀಪದ ಬಾಕಿನಕೆರೆಯಲ್ಲಿ ಗಣಪತಿ ಮೂರ್ತಿಯ ವಿಸರ್ಜನೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.