ADVERTISEMENT

‘ಗಾಂಧಿ ಆದರ್ಶವೇ ಸಮಾಜಕ್ಕೆ ಶ್ರೀರಕ್ಷೆ’

ಕರ್ಕೇಶ್ವರ: ಭಾರತ್ ಜೋಡೊ ಯಾತ್ರೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 4:41 IST
Last Updated 3 ಅಕ್ಟೋಬರ್ 2022, 4:41 IST
ನರಸಿಂಹರಾಜಪುರ ತಾಲ್ಲೂಕು ಕರ್ಕೇಶ್ವರ ಗ್ರಾಮದಲ್ಲಿ ಭಾನುವಾರ ಗಾಂಧಿ ಜಯಂತಿ, ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಭಾರತ್ ಜೋಡೊ ಯಾತ್ರೆಗೆ ಚಾಲನೆ ನೀಡಲಾಯಿತು. ಟಿ.ಡಿ.ರಾಜೇಗೌಡ, ಡಾ.ಅಂಶುಮಂತ್, ನವೀನ್ ಮಾವಿನಕಟ್ಟೆ, ನಟರಾಜ್, ಸುಧೀರ್ ಕುಮಾರ್ ಮೂರೊಳ್ಳಿ, ಇಫ್ತೀಕಾರ್ ಆದಿಲ್, ಮಹಮ್ಮದ್ ಹನೀಫ್, ರಾಜೇಶ್ ಇದ್ದರು.
ನರಸಿಂಹರಾಜಪುರ ತಾಲ್ಲೂಕು ಕರ್ಕೇಶ್ವರ ಗ್ರಾಮದಲ್ಲಿ ಭಾನುವಾರ ಗಾಂಧಿ ಜಯಂತಿ, ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಭಾರತ್ ಜೋಡೊ ಯಾತ್ರೆಗೆ ಚಾಲನೆ ನೀಡಲಾಯಿತು. ಟಿ.ಡಿ.ರಾಜೇಗೌಡ, ಡಾ.ಅಂಶುಮಂತ್, ನವೀನ್ ಮಾವಿನಕಟ್ಟೆ, ನಟರಾಜ್, ಸುಧೀರ್ ಕುಮಾರ್ ಮೂರೊಳ್ಳಿ, ಇಫ್ತೀಕಾರ್ ಆದಿಲ್, ಮಹಮ್ಮದ್ ಹನೀಫ್, ರಾಜೇಶ್ ಇದ್ದರು.   

ಮೇಲ್ಪಾಲ್ (ಎನ್.ಆರ್.ಪುರ): ಪ್ರಸ್ತುತ ದೇಶ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಜಾತಿ, ಮತ, ಧರ್ಮದ ಆಧಾರದ ಮೇಲೆ ಸಮಾಜವನ್ನು ವಿಭಜಿಸಲು ಹೊರಟಿದ್ದು, ಇದನ್ನು ತಡೆಗಟ್ಟಿ ಸರ್ವ ಧರ್ಮ ಸಮನ್ವತೆಯ ದೇಶ ಕಟ್ಟಲು ಭಾರತ್ ಜೋಡೊ ಯಾತ್ರೆಯನ್ನು ರಾಹುಲ್ ಗಾಂಧಿ ಆರಂಭಿಸಿದ್ದಾರೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ತಾಲ್ಲೂಕಿನ ಕರ್ಕೇಶ್ವರ ಗ್ರಾಮ ಪಂಚಾಯಿತಿಯ ಮೇಲ್ಪಾಲ್ ಗ್ರಾಮದಲ್ಲಿ ಭಾನುವಾರ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯಿಂದ ಆಯೋಜಿಸಿದ್ದ ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ಜಯಂತಿ ಹಾಗೂ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾರತ್ ಜೋಡೊ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ಹಳ್ಳಿಹಳ್ಳಿಯಲ್ಲೂ ಜನರ ಮನ ಪರಿವರ್ತನೆ ಮಾಡಬೇಕು ಎಂಬ ಉದ್ದೇಶದಿಂದ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರ ದವರೆಗೆ ಯಾತ್ರೆ ಆರಂಭಿಸಿದ್ದಾರೆ. ಅದೇ ರೀತಿ ಪ್ರತಿ ಹಳ್ಳಿ, ಹಳ್ಳಿಗಳಲ್ಲೂ ಜನರ ಮನ ಪರಿವರ್ತನೆ ಮಾಡಿ. ಭಾರತೀಯರ ಉಳಿವಿಗಾಗಿ ಬದುಕುವ ಸಂದೇಶ ನೀಡಬೇಕು ಎಂದರು.

ADVERTISEMENT

ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ಮಹಾತ್ಮ ಗಾಂಧಿಯವರ ಆದರ್ಶವೇ ನೆಮ್ಮದಿಯ ಸಮಾಜಕ್ಕೆ ಶ್ರೀರಕ್ಷೆಯಾಗಿದೆ. ಸಮಾಜದ ಸಾಮರಸ್ಯ ಕದಡುವ ಕೆಲಸ ಮಾಡುತ್ತಿರುವ ಬಿಜೆಪಿ ವಿರುದ್ಧ ಎಲ್ಲರೂ ಧ್ವನಿ ಎತ್ತಬೇಕು ಎಂದರು.

ಕೊಪ್ಪ ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಸುಧೀರ್ ಕುಮಾರ್ ಮೂರೊಳ್ಳಿ ಮಾತನಾಡಿ, ಮಹಾತ್ಮ ಗಾಂಧಿಯನ್ನು ಕೊಂದ ಗೋಡ್ಸೆಯನ್ನು ವೈಭವೀಕರಿಸುವ, ಜಾತಿ ಧರ್ಮ, ಆಹಾರ ಪದ್ಧತಿ ಆಧಾರದಲ್ಲಿ ಸಮಾಜ ಒಡೆಯುವ, ಜಾತಿ, ಧರ್ಮದ ಮಧ್ಯೆ ದ್ವೇಷ ಹುಟ್ಟುಹಾಕುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ದೂರಿದರು.

ಅಧ್ಯಕ್ಷತೆಯನ್ನು ಕರ್ಕೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ವಹಿಸಿದ್ದರು. ಕೆಪಿಸಿಸಿ ಸದಸ್ಯ ಇಫ್ತಿಕಾರ್ ಆದಿಲ್, ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಗೇರುಬೈಲು ನಟರಾಜ್, ಕಾಂಗ್ರೆಸ್ ಹೋಬಳಿ ಘಟಕದ ಅಧ್ಯಕ್ಷ ಮಹಮ್ಮದ್ ಹನೀಫ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಾರದಾ, ಸದಸ್ಯರಾದ ಯಶೋದಾ ಮಹೇಶ್, ಆಶಾ ಲತಾ, ಪಿಎಸಿಎಸ್ ಸದಸ್ಯ ಪ್ರಕಾಶ್, ಕಾರ್ತಿಕ್ ಸಂಜಯ್ ಇದ್ದರು.

ಕೆಪಿಸಿಸಿ ಸದಸ್ಯರಾಗಿ ಆಯ್ಕೆಯಾದ ಇಫ್ತಿಕಾರ್ ಆದಿಲ್, ಮಾಧ್ಯಮ ವಿಭಾಗದ ವಕ್ತಾರರಾಗಿ ಆಯ್ಕೆಯಾದ ಸುಧೀರ್ ಕುಮಾರ್ ಮುರೂಳ್ಳಿ ಅವರನ್ನು ಸನ್ಮಾನಿಸಲಾಯಿತು.

‘52 ಗ್ರಾಮ ಪಂಚಾಯಿತಿಯಲ್ಲೂ ಯಾತ್ರೆ’

ಶೃಂಗೇರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾತ್ರೆಯನ್ನು ಕರ್ಕೇಶ್ವರ ಗ್ರಾಮದಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಲಾಗಿದೆ. ಜಿಲ್ಲೆಯಲ್ಲಿ ಅ.2ರಿಂದ ಮಾರ್ಚ್ ವರೆಗೆ 150 ದಿನಗಳ ಯಾತ್ರೆ ನಡೆಸಲಾಗುತ್ತದೆ. ಕ್ಷೇತ್ರದ 49 ಪಂಚಾಯಿತಿ ಹಾಗೂ 3 ಪಟ್ಟಣ ಪಂಚಾಯಿತಿಯಲ್ಲೂ ಕಾರ್ಯಕ್ರಮ ಆಯೋಜಿಸಿ ಪ್ರತಿ ಮನೆ ಮನೆಗೆ ಕರಪತ್ರ ತಲುಪಿಸಲಾಗುತ್ತದೆ ಎಂದು ರಾಜೀವ್ ಗಾಂಧಿ ಪಂಚಾಯತ್ ಸಂಘಟನೆಯ ಜಿಲ್ಲಾ ಸಂಚಾಲಕ ನವೀನ್ ಮಾವಿನಕಟ್ಟೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.