ADVERTISEMENT

ಗಣಪತಿ ವಿಸರ್ಜನೆ: ಅದ್ಧೂರಿ ಮೆರವಣಿಗೆ

ದಾರಿಯುದ್ದಕ್ಕೂ ಹಣ್ಣ– ಕಾಯಿ ಒಡೆದು ಪೂಜೆ ಸಲ್ಲಿಸಿದ ನಾಗರಿಕರು: ಅನ್ನ ಸಂತರ್ಪಣೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 4:16 IST
Last Updated 18 ಸೆಪ್ಟೆಂಬರ್ 2025, 4:16 IST
ಚಿಕ್ಕಮಗಳೂರಿನಲ್ಲಿ ಗಣೇಶೋತ್ಸವ ಬುಧವಾರ ಸಂಭ್ರಮದಿಂದ ನಡೆಯಿತು
ಚಿಕ್ಕಮಗಳೂರಿನಲ್ಲಿ ಗಣೇಶೋತ್ಸವ ಬುಧವಾರ ಸಂಭ್ರಮದಿಂದ ನಡೆಯಿತು   

ಚಿಕ್ಕಮಗಳೂರು: ಗಣಪತಿ ಸೇವಾ ಸಮಿತಿ ವತಿಯಿಂದ ನಗರದ ಬೋಳರಾಮೇಶ್ವರ ದೇವಾಲಯದ ಆವರಣದಲ್ಲಿ 21 ದಿನ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯನ್ನು ಬುಧವಾರ ಅದ್ಧೂರಿ ಮೆರವಣಿಗೆ ಮೂಲಕ ವಿಸರ್ಜನೆ ಮಾಡಲಾಯಿತು.

ಮಂಟಪದಲ್ಲಿ ಬಣ್ಣ–ಬಣ್ಣದ ಹೂವು, ಹಾರಗಳಿಂದ ಅಲಂಕಾರಗೊಂಡಿದ್ದ ವಿನಾಯಕ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಮಳೆಯ ಸಿಂಚನದ ನಡುವೆ ಅಲಂಕೃತ ಸಾರೋಟಿನಲ್ಲಿ ಕೂರಿಸಲಾಯಿತು.

ನಗರದ ಪ್ರಮುಖ ರಸ್ತೆಗಳಾದ ಹೊಸಮನೆ ಬಡಾವಣೆ ಮೂಲಕ ಕೋಟೆ, ಆಜಾದ್ ಪಾರ್ಕ್, ಎಂ.ಜಿ. ರಸ್ತೆ, ಹನುಮಂತಪ್ಪ ವೃತ್ತ, ರತ್ನಗಿರಿ ರಸ್ತೆ, ಬಸವನಹಳ್ಳಿ, ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.

ADVERTISEMENT

ಜಾನಪದ ಕಲಾ ತಂಡಗಳು, ಹಳ್ಳಿವಾದ್ಯ, ಡಿ.ಜೆ ಸಂಗೀತದೊಂದಿಗೆ ಮೆರವಣಿಗೆ ಆರಂಭವಾಯಿತು. ಗಣಪತಿ ಮೆರವಣಿಗೆ ಬರುವ ಮಾರ್ಗದಲ್ಲಿ ಅಲ್ಲಲ್ಲಿ ಅಲಂಕೃತ ಮಂಟಪ, ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿತ್ತು. ಕನ್ನಿಕಾಪರಮೇಶ್ವರಿ ದೇವಾಲಯದ ಆವರಣದಲ್ಲಿ ಸುಂದರ ಮಂಟಪ ನಿರ್ಮಿಸಿ ಮೆರವಣಿಗೆಯನ್ನು ಸ್ವಾಗತಿಸಲಾಯಿತು. ಭಕ್ತರಿಗೆ ಬೆಳಿಗ್ಗೆಯಿಂದಲೇ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ನೆಹರು ರಸ್ತೆಯನ್ನು ಸಂಪೂರ್ಣ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಅಲ್ಲಿಯೂ ಭಕ್ತರಿಗೆ  ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಆಜಾದ್ ಪಾರ್ಕ್ ಸಮೀಪ ಬೀದಿಬದಿ ವ್ಯಾಪಾರಿಗಳು ಅಲಂಕೃತ ಕಮಾನು, ಶಾಮಿಯಾನ ಹಾಕಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಿದರು.

ಹೀಗೆ ದಾರಿಯುದ್ದಕ್ಕೂ ಗಣಪತಿಯನ್ನು ಸ್ವಾಗತಿಸಲಾಯಿತು. ದಾರಿಯುದ್ದಕ್ಕೂ ಹಣ್ಣ– ಕಾಯಿ ಒಡೆದು ಪೂಜೆ ಸಲ್ಲಿಸಿದ ನಾಗರಿಕರು ಭಕ್ತಿ ಸಮರ್ಪಿಸಿದರು. ಬೆಳ್ತಂಗಡಿ ಗೊಂಬೆಗಳು, ಕೀಲುಕುದುರೆ, ಕರಡಿಮಜಲು, ಹಳ್ಳಿವಾದ್ಯ, ಮಹಿಳಾ ವೀರಗಾಸೆ ಸೇರಿ ಹಲವು ಜಾನಪದ ಕಲಾತಂಡಗಳು ಜನಮನ ಸೆಳೆದವು.

ಮೆರವಣಿಗೆಯುದ್ದಕ್ಕೂ ಘೋಷಣೆ ಕೂಗಿ ಯುವಕರು, ಯುವತಿಯರು ಡಿ.ಜೆ ಹಾಡಿಗೆ ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು. ವಾದ್ಯ ಮೇಳ ಹಾಗೂ ಕಲಾತಂಡಗಳು ಮೆರವಣಿಗೆಗೆ ಆಕರ್ಷಕ ರಂಗು ತುಂಬಿದವು.

ಗಣೇಶ ಮೆರವಣಿಗೆ ಹೊರಡಿಸುವ ಮುನ್ನ ಶಾಸಕ ಎಚ್.ಡಿ.ತಮ್ಮಯ್ಯ ಪೂಜೆ ಸಲ್ಲಿಸಿದರು. ‘89 ವರ್ಷಗಳಿಂದ ನಗರದಲ್ಲಿ ವಿಶೇಷವಾಗಿ ಗಣಪತಿ ಮೂರ್ತಿಯನ್ನು ಅಜಾದ್ ಪಾರ್ಕ್ ಮೈದಾನದಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. 21 ದಿನ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಗಣೇಶೋತ್ಸವ ಆಚರಣೆ ಮಾಡಲಾಗಿದೆ’ ಎಂದು ಹೇಳಿದರು.

ಅಂತಿಮವಾಗಿ ಬೇಲೂರು ರಸ್ತೆ ಮೂಲಕ ಸಾಗಿ ಕೋಟೆ ಕೆರೆಯ ಕಲ್ಯಾಣಿಯಲ್ಲಿ ವಿಸರ್ಜನೆ ಮಾಡಲಾಯಿತು. ಮೆರವಣಿಗೆ ಅಂಗವಾಗಿ ನಗರದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಬಿಗಿ ಬಂದೋಬಸ್ತ್ ಮೂಲಕ ರಕ್ಷಣೆ ಒದಗಿಸಿದ್ದರು.

ಅಜಾದ್ ಪಾರ್ಕ್ ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಸಿ.ಎಸ್.ಕುಬೇರ, ಪ್ರಧಾನ ಕಾರ್ಯದರ್ಶಿ ಸಿ.ಆರ್ ಕೇಶವಮೂರ್ತಿ, ಖಜಾಂಚಿ ಎಚ್.ಕೆ. ಮಂಜುನಾಥ್, ಈಶ್ವರಪ್ಪ ಕೋಟೆ, ವಿರೂಪಾಕ್ಷಪ್ಪ, ದಿವಾಕರ್, ವರಸಿದ್ಧಿ ವೇಣುಗೋಪಾಲ್, ಎಲ್.ವಿ. ಕೃಷ್ಣಮೂರ್ತಿ, ಎಂ.ಎಸ್.ಉಮೇಶಕುಮಾರ್, ಎಚ್.ವೈ.ಮೋಹನಕುಮಾರ್, ಸಿ.ಇ.ಚೇತನ್ ಏಕಾಂತರಾಮ್, ಶ್ರೀನಿವಾಸ್ ಭಾಗವಹಿಸಿದ್ದರು.

ಗಣೇಶ ಮೆರವಣಿಗೆ ಎಂ.ಜಿ.ರಸ್ತೆಗೆ ಬಂದಾಗ ಡಿ.ಜೆ ಸದ್ದಿಗೆ ಭಕ್ತರು ಕುಣಿದು ಸಂಭ್ರಮಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.