ಚಿಕ್ಕಮಗಳೂರು: ನಗರದ ಗೃಹ ಮಂಡಳಿ (ಹೌಸಿಂಗ್ ಬೋರ್ಡ್) ಬಡಾವಣೆ, ಸುತ್ತಲಿನ ಪ್ರದೇಶಗಳ ಉದ್ಯಾನಗಳು ದುಸ್ಥಿತಿಯಲ್ಲಿವೆ. ಒಳ ಚರಂಡಿ, ‘ಅಮೃತ್’ ಯೋಜನೆ ಪೈಪ್ ಅಳವಡಿಸಲು ರಸ್ತೆ ಅಗೆದಿರುವ ಕಡೆಗಳಲ್ಲಿ ಗುಂಡಿಗಳಾಗಿವೆ.
ನ್ಯಾಯಾಧೀಶರ ವಸತಿ ಸಮುಚ್ಛಯ ಭಾಗದ ಸಂಪರ್ಕ ಹಾದಿ ಅಧ್ವಾನ ಸ್ಥಿತಿಯಲ್ಲಿದೆ. ಮಳೆಯಾದಾಗ ದಾರಿ ಕೆಸರುಮಯವಾಗುತ್ತದೆ. ಓಡಾಟ ಪಡಿಪಾಟಲಾಗಿದೆ.
ಇದೇ ಹಾದಿ ಬದಿ ಒಂದು ಉದ್ಯಾನ ಇದೆ. ಉದ್ಯಾನದಲ್ಲಿ ಪಾರ್ಥೆನಿಯಂ, ಕಳೆ ಗಿಡಗಳು ಬೆಳದಿವೆ. ಕೆಲವರು ಉದ್ಯಾನಗಳಿಗೆ ಹಸುಗಳನ್ನು ಮೇಯಲು ಬಿಡುವ ಪರಿಪಾಟ ರೂಢಿಸಿಕೊಂಡಿದ್ದಾರೆ.
ಈ ಒಂದನೇ ವಾರ್ಡ್ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಉದ್ಯಾನಗಳು ಇವೆ. ಬಹುತೇಕ ಎಲ್ಲವೂ ನಿರ್ವಹಣೆ ಇಲ್ಲದೆ ಕಸದ ಕೊಂಪೆಗಳಾಗಿವೆ. ಕೆಲವು ಪಾರ್ಕ್‌ಗಳಿಗೆ ಬೇಲಿಯೂ ಇಲ್ಲ. ನಿವಾಸಿಗಳು ತ್ಯಾಜ್ಯವನ್ನು ತಂದು ಉದ್ಯಾನಗಳಿಗೆ ಸುರಿಯುತ್ತಾರೆ.
ಪ್ರತಿ ಗಲ್ಲಿ, ರಸ್ತೆ ಅಗೆದು ಒಳಚರಂಡಿ, ಅಮೃತ್ ಯೋಜನೆಯಡಿ ಪೈಪ್ ಅಳವಡಿಸಲಾಗಿದೆ. ಆದರೆ, ಅಗೆದ ಭಾಗಗಳನ್ನು ಸರಿಯಾಗಿ ಮುಚ್ಚಿಲ್ಲ. ಅಗೆದ ಭಾಗಗಳಲ್ಲಿ ತಗ್ಗಾಗಿದೆ.
ನಮ್ಮ ಬಡಾವಣೆಯಲ್ಲಿ ಎರಡು ದಿನಕ್ಕೊಮ್ಮೆ ನೀರು ಬಿಡುತ್ತಾರೆ. ಅದು ಜೋರಾಗಿ ಬರಲ್ಲ. ಕೆಲವೊಮ್ಮೆ ಪೈಪ್ ಒಡೆದು ಸಮಸ್ಯೆಯಾದರೆ ವಾರಗಟ್ಟಲೆ ನೀರು ಬಿಡಲ್ಲ ಎಂದು ಗೃಹ ಮಂಡಳಿ ಬಡಾವಣೆ ಜನರು ಹೇಳುತ್ತಾರೆ.
ಬಡಾವಣೆಗಳಲ್ಲಿ ಕೆಲ ಗಲ್ಲಿಗಳ ಚರಂಡಿಗಳಲ್ಲಿ ತ್ಯಾಜ್ಯ, ಕಸ ತುಂಬಿಕೊಂಡಿದೆ. ರಸ್ತೆ ಬದಿಗಳಲ್ಲಿ ಪಾರ್ಥೆನಿಯಂ ಗಿಡಗಳು, ಹುಲ್ಲು ಬೆಳೆದಿದೆ. ನಿವೇಶನಗಳಲ್ಲಿ ಮುಳ್ಳಿನ ಗಿಡಗಳು, ಪೊದೆಗಳು ಆಳುದ್ದಕ್ಕೆ ಬೆಳೆದಿವೆ.
‘ಉದ್ಯಾನ ಅಭಿವೃದ್ಧಿಗೆ ಮುಂದಿನ ವರ್ಷ ಕ್ರಮ’
‘ಒಂದನೇ ವಾರ್ಡ್ ದೊಡ್ಡ ವಾರ್ಡ್. ಎಐಟಿ ವೃತ್ತದಿಂದ ತಾಜ್ ಹೋಟೆಲ್‌ವರೆಗೆ ವ್ಯಾಪ್ತಿ ಇದೆ. ಹೆದ್ದಾರಿ (ಎನ್.ಎಚ್–173) ಕಾಮಗಾರಿ, ಪೈಪ್ ಅಳವಡಿಕೆ ಮೊದಲಾದ ಕಾಮಗಾರಿಗಳಿಂದಾಗಿ ಕೆಲ ಸಮಸ್ಯೆಗಳು ಆಗಿವೆ. ಕಾಮಗಾರಿಗಳು ಮುಗಿದರೆ ಸಮಸ್ಯೆಗಳು ಪರಿಹಾರವಾಗುತ್ತವೆ’ ಎಂದು ವಾರ್ಡ್ ಸದಸ್ಯೆ ಕವಿತಾಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ರಸ್ತೆ, ಚರಂಡಿ, ಸ್ವಚ್ಛತೆ ಕಾಮಗಾರಿಗೆ ಒತ್ತು ನೀಡಿದ್ದೇವೆ. ಕಾಮಗಾರಿಗೆ ರಸ್ತೆ ಅಗೆದು ಮುಚ್ಚಿರುವ ಕಡೆಗಳಲ್ಲಿ ಡಾಂಬರು ಹಾಕಿಸಲು ಕ್ರಮ ವಹಿಸಲಾಗುವುದು. ಇನ್ನು ಉದ್ಯಾನ ಅಭಿವೃದ್ಧಿಗೆ ಮುಂದಿನ ವರ್ಷ ಕ್ರಮ ವಹಿಸಲಾಗುವುದು’ ಎಂದರು.
‘ನಗರಸಭೆ ಅನುದಾನದಲ್ಲಿ ಈ ಸಿಂಹಪಾಲು ಅನುದಾನ ವಾರ್ಡ್‌ಗೆ ಸಿಕ್ಕಿದೆ. ಅದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಹಂತ ಹಂತವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಅಭಿವೃದ್ಧಿ ಮಾಡುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.