ADVERTISEMENT

ಶೃಂಗೇರಿ: ಶಾರದಾಂಬೆಗೆ ಗರುಡ ವಾಹನ ಅಲಂಕಾರ

ತಿರುನಲ್ವೇಲಿಯ ಆಯಿಕುಡಿ ಕುಮಾರ್ ಮತ್ತು ವೃಂದದವರಿಂದ ನಾಮ ಸಂಕೀರ್ತನೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 3:06 IST
Last Updated 27 ಸೆಪ್ಟೆಂಬರ್ 2025, 3:06 IST
ಚಿನ್ನದ ರಥದಲ್ಲಿರುವ ಶಾರದಾಂಬೆಯ ಉತ್ಸವ ಮೂರ್ತಿಯ ಎದುರು ಮಠದ ಗುರುಗಳಾದ ವಿಧುಶೇಖರಭಾರತೀ ಸ್ವಾಮೀಜಿ ನೇತೃತ್ವದಲ್ಲಿ ದೇವಾಲಯದ ಒಳಪ್ರಾಂಗಣದಲ್ಲಿ ಮೂರು ಸುತ್ತು ರಥೋತ್ಸವ ನಡೆಯಿತು
ಚಿನ್ನದ ರಥದಲ್ಲಿರುವ ಶಾರದಾಂಬೆಯ ಉತ್ಸವ ಮೂರ್ತಿಯ ಎದುರು ಮಠದ ಗುರುಗಳಾದ ವಿಧುಶೇಖರಭಾರತೀ ಸ್ವಾಮೀಜಿ ನೇತೃತ್ವದಲ್ಲಿ ದೇವಾಲಯದ ಒಳಪ್ರಾಂಗಣದಲ್ಲಿ ಮೂರು ಸುತ್ತು ರಥೋತ್ಸವ ನಡೆಯಿತು   

ಶೃಂಗೇರಿ: ಶರನ್ನವರಾತ್ರಿಯ 5ನೇ ದಿನ (ಶುಕ್ರವಾರ) ಶಾರದಾ ಮಠದಲ್ಲಿ ಶಾರದಾಂಬೆಗೆ ಗರುಡವಾಹನ (ವೈಷ್ಣವೀ) ಅಲಂಕಾರ ಮಾಡಲಾಗಿತ್ತು.

ಶಾರದಾಂಬೆ ಕೈಯಲ್ಲಿ ಶಂಖ, ಚಕ್ರ, ಗದೆ ಮೊದಲಾದ ಆಯುಧವನ್ನು ಧರಿಸಿ, ಗರುಡವನ್ನುಆರೋಹಿಸಿ ವಿಷ್ಣುವಿನ ಶಕ್ತಿಯಾಗಿ ಭಕ್ತರನ್ನು ಅನುಗ್ರಹಿಸಿದ ರೀತಿ ಅಲಂಕಾರ ಮಾಡಲಾಗಿತ್ತು.

ಮಠದಲ್ಲಿ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣ ವೇದಗಳ ಪಾರಾಯಣ, ಮಾಧವೀಯ ಶಂಕರ ದಿಗ್ವಿಜಯ, ಪ್ರಸ್ಥಾನತ್ರಯ ಭಾಷ್ಯಪಾರಾಯಣ, ಮಹಾವಿದ್ಯೆ, ದುರ್ಗಾ ಸಪ್ತಶತಿ ಮುಂತಾದ ಪಾರಾಯಣಗಳು ಮತ್ತು ಸೂರ್ಯ ನಮಸ್ಕಾರ, ಭುವನೇಶ್ವರಿ ಜಪ, ದುರ್ಗಾ ಜಪ, ಕುಮಾರೀ ಹಾಗೂ ಸುವಾಸಿನೀ ಪೂಜೆಗಳು ನೆರವೇರಿದವು.

ADVERTISEMENT

ಶತಚಂಡೀಯಾಗದ ಪ್ರಯುಕ್ತ ಶಾಲಾ ಪ್ರವೇಶ ನಡೆಯಿತು. ಉಭಯ ಗುರುಗಳಾದ ಭಾರತೀತೀರ್ಥಸ್ವಾಮೀಜಿ ಮತ್ತು ವಿಧುಶೇಖರಭಾರತೀಸ್ವಾಮೀಜಿಶಾರದೆಗೆ ವಿಶೇಷ ಪೂಜೆ ಸಲ್ಲಿಸಿದರು.

ಸಂಜೆ ನಡೆದ ಬೀದಿ ಉತ್ಸವದಲ್ಲಿ ಧರೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಕ್ತರು, ಶ್ರೀರಾಮ ಸೇವಾ ಸಮಿತಿ ಹೊಳೆಕೊಪ್ಪ, ಶ್ರೀವೆಂಕಟೇಶ್ವರ ಯಕ್ಷಗಾನ ಕಲಾಸಂಘ ಹೊನ್ನವಳ್ಳಿ, ಶ್ರೀಮಲ್ಲಿಕಾರ್ಜುನ ಸೇವಾ ಸಮಿತಿ ಹಗಡೂರು, ಶ್ರೀಬ್ರಹ್ಮಲಿಂಗೇಶ್ವರ ಸೇವಾ ಸಮಿತಿ ಹೊಂಬಾಗಿ, ಶ್ರೀಮಲ್ಲಿಕಾರ್ಜುನ ಸೇವಾ ಸಮಿತಿ ಮೇಲುಕೊಪ್ಪ ಹಾಗೂ ವಿವಿಧ ದೇವಸ್ಥನ ಸೇವಾ ಸಮಿತಿಗಳು, ಶ್ರೀರಾಮ ಸ್ವಸಹಾಯ ಸಂಘ ಹೊಳೆಕೊಪ್ಪ, ತಾಲ್ಲೂಕು ಮರಾಠಿ ಸೇವಾ ಸಂಘ ಶೃಂಗೇರಿ, ಕೆಸರುಕುಡಿಗೆ ಮತ್ತು ಹಂಚರಿಕೆ ಜಾನಪದ ತಂಡಗಳು, ಶ್ರೀರಾಮ ಯುವ ರೈತ ಸಂಘ ಹೊಳೆಕೊಪ್ಪ ಮತ್ತು ಮಿತ್ರ ಯುವಕ ಸಂಘ ಮೇಲುಕೊಪ್ಪ, ಗೆಳೆಯ ಯುವಕ ಸಂಘ ಕಿಕ್ರೆಹೊಂಡ- ಮಾಕರ್ಸು, ಸರ್ಕಾರಿ ಪ್ರೌಢಶಾಲೆ ಹಿರಿಯ ವಿದ್ಯಾರ್ಥಿ ಸಂಘ ಹೊಳೆಕೊಪ್ಪ, ವರಸಿದ್ಧಿ ವಿನಾಯಕ ಮತ್ತು ಬ್ರಹ್ಮಲಿಂಗೇಶ್ವರ ಸೇವಾ ಸಮಿತಿ, ನಲ್ಲೂರು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲಾ ಕಾಲೇಜುಗಳು ಮತ್ತು ಸಂಘ ಸಂಸ್ಥೆಗಳು, ಗ್ರಾಮಸ್ಥರು ಭಾಗವಹಿಸಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ತಿರುನಲ್ವೇಲಿಯ ಆಯಿಕುಡಿ ಕುಮಾರ್ ಮತ್ತು ವೃಂದದವರಿಂದ ನಾಮ ಸಂಕೀರ್ತನೆ ನಡೆಯಿತು.

ದರ್ಬಾರು: ಶಾರದಾ ಮಠದ ಸಂಪ್ರದಾಯಕ್ಕೆ ಅನುಸಾರವಾಗಿ ಕಿರಿಯ ಗುರುಗಳಾದ ವಿಧುಶೇಖರಭಾರತೀ ಸ್ವಾಮೀಜಿ ಕಿರೀಟ, ಆಭರಣಗಳನ್ನು ಧರಿಸಿ ಚಂದ್ರಮೌಳೇಶ್ವರ ಪ್ರಾಂಗಣದಿಂದ ಶಾರದಾಮ್ಮನವರ ದೇವಾಲಯದ ಉತ್ಸವದಲ್ಲಿ ಭಾಗವಹಿಸಿದ ಬಳಿಕ, ವ್ಯಾಖ್ಯಾನ ಸಿಂಹಾಸನದಲ್ಲಿರುವ ಶಾರದಾಂಬೆಯ ಉತ್ಸವ ಮೂರ್ತಿಯನ್ನು ಬಂಗಾರದ ರಥದಲ್ಲಿ ಇಡಲಾಯಿತು.

ವೇದ, ವಾದ್ಯ ಪೋಷಗಳೊಂದಿಗೆ, ಛತ್ರಚಾಮರಗಳೊಂದಿಗೆ ದೇವಾಲಯದ ಒಳ ಪ್ರಾಂಗಳದಲ್ಲಿ ಮೂರು ಸುತ್ತು ರಥೋತ್ಸವ ನಡೆಯಿತು. ಬಳಿಕ ಗುರುಗಳು ಶಾರದೆಗೆ ಅಭಿಮುಖವಾಗಿ ಇರಿಸಿದ ಸಿಂಹಾಸನದಲ್ಲಿ ಆಸೀನರಾದರು. ನಾಲ್ಕು ವೇದಗಳ ಪಾರಾಯಣ, ಪಂಚಾಂಗ ಶ್ರವಣ, ಸಂಗೀತ ಸೇವೆ ನೆರವೇರಿತು. ಪ್ರಸಾದ ವಿನಿಯೋಗದ ಬಳಿಕ ಉತ್ತರನೀರಾಜನದೊಂದಿಗೆ ದರ್ಬಾರು ಮುಕ್ತಾಯಗೊಂಡಿತು.

ಗರುಡವಾಹನ (ವೈಷ್ಣವೀ) ಅಲಂಕಾರದಲ್ಲಿ ಕಂಗೊಳಿಸಿದ ಶೃಂಗೇರಿ ಶಾರದೆ‌
ಶೃಂಗೇರಿ ಶಾರದಾ ಪೀಠದಲ್ಲಿ ಶರನ್ನವರಾತ್ರಿಯ ಪ್ರಯುಕ್ತ ಮಠದ ಗುರುಗಳಾದ ವಿಧುಶೇಖರಭಾರತೀ ಸ್ವಾಮೀಜಿಯವರು ತುಂಗಾನದಿಗೆ ಪೂಜೆ ಸಲ್ಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.