ADVERTISEMENT

ಕಳಸ: ಗಿರಿಜಾ ಕಲ್ಯಾಣದ ಸಡಗರ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 3:58 IST
Last Updated 27 ನವೆಂಬರ್ 2020, 3:58 IST
ಕಳಸದ ಕಳಸೇಶ್ವರ ದೇವಸ್ಥಾನದಲ್ಲಿ ಗುರುವಾರ ಬೆಳಗಿನ ಜಾವ ನಡೆದ ಗಿರಿಜಾಕಲ್ಯಾಣದ ನಂತರ ಈಶ್ವರ ಮತ್ತು ಗಿರಿಜೆಯ ವಿಗ್ರಹಗಳನ್ನು ಜೊತೆಯಲ್ಲಿ ಇರಿಸಿರುವುದು.
ಕಳಸದ ಕಳಸೇಶ್ವರ ದೇವಸ್ಥಾನದಲ್ಲಿ ಗುರುವಾರ ಬೆಳಗಿನ ಜಾವ ನಡೆದ ಗಿರಿಜಾಕಲ್ಯಾಣದ ನಂತರ ಈಶ್ವರ ಮತ್ತು ಗಿರಿಜೆಯ ವಿಗ್ರಹಗಳನ್ನು ಜೊತೆಯಲ್ಲಿ ಇರಿಸಿರುವುದು.   

ಕಳಸ: ಇಲ್ಲಿನ ಊರ ದೇವರಾದ ಕಳಸೇಶ್ವರ ಮತ್ತು ಗಿರಿಜೆಯ ವಿವಾಹ ಮಹೋತ್ಸವವಾದ ‘ಗಿರಿಜಾ ಕಲ್ಯಾಣ’ ಗುರುವಾರ ನಸುಕಿನ ಜಾವ ಸಡಗರದಿಂದ ನೆರವೇರಿತು.

ಭಾನುವಾರ ಗಣಪತಿ ಪೂಜೆ, ಅಂಕುರಾರ್ಪಣೆ ಮೂಲಕ ಆರಂಭ ಗೊಂಡಿದ್ದ ಮದುವೆಯ ವಿಧಿಗಳು ಕೌತುಕೋತ್ಸವ, ಧ್ವಜಾರೋಹಣ, ಹಸಿರುವಾಣಿ ಸಮರ್ಪಣೆಯಂತಹ ಸಾಂಪ್ರದಾಯಿಕ ಆಚರಣೆಗಳ ಮೂಲಕ ಕಳೆಗಟ್ಟಿತ್ತು. ಕಳಸೇಶ್ವರ ದೇವಸ್ಥಾನ ಮತ್ತು ಗಿರಿಜಾಂಬ ದೇವಸ್ಥಾನದ ಪರಿಸರದಲ್ಲಿ ಹಬ್ಬದ ಕಳೆ ಮೂಡಿತ್ತು.

ಶತವಾರ ರುದ್ರಾಭಿಷೇಕ, ರಂಗಪೂಜೆ, ಪುದುವಟ್ಟು ಸೇವೆ ವಿಧಿವತ್ತಾಗಿ ನಡೆದು ದೇವರ ಮದುವೆಗೆ ಕ್ಷಣಗಣನೆ ಆರಂಭವಾಗಿತ್ತು. ಬುಧವಾರ ಮಧ್ಯರಾತ್ರಿಯಿಂದ ಆರಂಭವಾದ ವಿವಾಹದ ವಿಧಿಗಳು ಗುರುವಾರ ನಸುಕಿನ ಜಾವದವರೆಗೂ ಮುಂದುವರಿದಿತ್ತು. ಕಳಸೇಶ್ವರ ಮತ್ತು ಗಿರಿಜೆಯ ವಿವಾಹ ಮಹೋತ್ಸವವನ್ನು ನೆರೆದಿದ್ದ ಭಕ್ತರು ಕಣ್ತುಂಬಿಕೊಂಡರು.

ADVERTISEMENT

ಗುರುವಾರ ಕಳಸೇಶ್ವರನ ಗರ್ಭಗುಡಿಯಲ್ಲಿ ಈಶ್ವರನ ಪಕ್ಕದಲ್ಲಿ ಗಿರಿಜೆಯನ್ನು ಇರಿಸಿ ಮಹಾಪೂಜೆ ನೆರವೇರಿಸಲಾಯಿತು. ಕೋವಿಡ್ –19 ಕಾರಣಕ್ಕೆ ಈ ಬಾರಿ ಮದುವೆಯ ಸಿಹಿ ಊಟ ಸವಿಯುವ ಭಾಗ್ಯದಿಂದ ಭಕ್ತರು ವಂಚಿತರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.