ADVERTISEMENT

ಅಜ್ಜಂಪುರ | ಸೋರುತ್ತಿದೆ ‘ಸೊಕ್ಕೆ’ ಸರ್ಕಾರಿ ಶಾಲೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 7:57 IST
Last Updated 15 ಜುಲೈ 2025, 7:57 IST

ಅಜ್ಜಂಪುರ ತಾಲೂಕಿನ ಸೊಕ್ಕೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಅಜ್ಜಂಪುರ ತಾಲೂಕಿನ ಸೊಕ್ಕೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಅಜ್ಜಂಪುರ: ಶತಮಾನೋತ್ಸವದ ಹೊಸ್ತಿಲಿನಲ್ಲಿ ಇರುವ ತಾಲ್ಲೂಕಿನ ಸೊಕ್ಕೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈಗ ಹಲವು ಕೊರತೆಗಳ ನಡುವೆ ನರಳುತ್ತಿದೆ. ಸೋರುವ ಮೇಲ್ಚಾವಣಿ, ಶಿಥಿಲಾವಸ್ಥೆಗೆ ತಲುಪಿರುವ ಗೋಡೆಗಳು, ಕಿತ್ತು ಬಂದಿರುವ ನೆಲಹಾಸಿನ ನಡುವೆ ವಿದ್ಯಾರ್ಥಿಗಳು ಪಾಠ ಕಲಿಯುತ್ತಿದ್ದಾರೆ.

ADVERTISEMENT

ಸ್ವಾತಂತ್ರ್ಯ ಪೂರ್ವದಿಂದ ಇರುವ ಈ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ತನ್ನದೇ ಇತಿಹಾಸವಿದೆ. ಅದರ ಜತೆಗೆ ಗುಣಮಟ್ಟದ ಶಿಕ್ಷಣದಿಂದಾಗಿ ಇಂದಿಗೂ ವಿದ್ಯಾರ್ಥಿಗಳ ಸಂಖ್ಯೆಯನ್ನು ಕಡಿಮೆ ಮಾಡಿಕೊಂಡಿಲ್ಲ. ಇಂಗ್ಲಿಷ್‌ ಮಾಧ್ಯಮ ಹಾಗೂ ಗುಣಮಟ್ಟದ ಶಿಕ್ಷಣದಿಂದ ಖಾಸಗಿ ಶಾಲೆಗೂ ಪೈಪೋಟಿ ನೀಡುತ್ತಿದೆ. ಎಲ್‌ಕೆಜಿ ಮತ್ತು ಯುಕೆಜಿ 62, 1ರಿಂದ 7ನೇ ತರಗತಿವರೆಗಿನ 280 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಸೋರುವ ಚಾವಣಿ ಕೆಳಗೆ ವಿದ್ಯಾರ್ಥಿಗಳು ಪಾಠ ಕೇಳುವ ದುಸ್ಥಿತಿ ನಿರ್ಮಾಣಗೊಂಡಿದೆ.

ಶಾಲೆಯ ಮೂರು ಕೊಠಡಿ ಚಾವಣಿಯ ಮರಗಳು ಹುಳು ತಿಂದಿವೆ. ಆಗಲೊ– ಈಗಲೋ ಬೀಳುವ ಸ್ಥಿತಿಯಲ್ಲಿವೆ. ಬಾಗಿಲುಗಳು ಮುರಿದಿದ್ದು, ಕಿಟಕಿ ಮುಚ್ಚುವ ಸ್ಥಿತಿಯಲ್ಲಿ ಇಲ್ಲ. ಚಾವಣಿ ಹಾಳಾಗಿರುವುದರಿಂದ ಮಳೆಯಲ್ಲಿ ಗೋಡೆಗಳ ಮೇಲೆಯೇ ನೀರು ಸೋರಿ ಹರಿಯುತ್ತಿದೆ. ಇದರಿಂದಾಗಿ ಗೋಡೆ ಗಳೂ ಶಿಥಿಲಗೊಂಡಿದ್ದು, ವಿದ್ಯಾರ್ಥಿಗಳು ಭಯದಲ್ಲಿ ಕೊಠಡಿಯೊಳಗೆ ಕುಳಿತುಕೊಳ್ಳಬೇಕಾಗಿದೆ.

ನೆಲಹಾಸು ಕೂಡ ಅಲ್ಲಲ್ಲಿ ಕಿತ್ತು ಬಂದಿದ್ದು, ಸರಿಪಡಿಸುವ ಕೆಲಸ ಆಗಿಲ್ಲ. ಗ್ರಾಮೀಣ ಪ್ರದೇಶದ ಮಕ್ಕಳು ಸರ್ಕಾರಿ ಶಾಲೆಯನ್ನೇ ಆಶ್ರಯಿಸಿದ್ದಾರೆ. ಸರ್ಕಾರಿ ಶಾಲೆಗೆ ಕನಿಷ್ಠ ಮೂಲ ಸೌಕರ್ಯ ಒದಗಿಸದಿದ್ದರೆ ಹೇಗೆ ಎಂಬುದು ಪೋಷಕರ ಪ್ರಶ್ನೆ.

‘ಗುಣಮಟ್ಟದ ಶಿಕ್ಷಣ ದೊರಕುತ್ತಿದೆ ಎಂಬ ಕಾರಣಕ್ಕೆ ಮಕ್ಕಳನ್ನು ಕಳುಹಿಸುತ್ತಿದ್ದೇವೆ. ಸೋರುವ ಮೇಲ್ಚಾವಣಿ, ಕಿತ್ತು ಬಂದಿರುವ ನೆಲಹಾಸು ಸರಿಪಡಿಸುವ ಕೆಲಸವನ್ನಾದರೂ ಸರ್ಕಾರ ಮಾಡಬೇಕು’ ಎಂಬುದು ಅವರ ಒತ್ತಾಯ.

ಸುತ್ತಲಿನ ಹತ್ತಾರು ಗ್ರಾಮಗಳ ವಿದ್ಯಾರ್ಥಿಗಳನ್ನು ಸೆಳೆಯುತ್ತಿರುವ ಶಾಲೆಯಲ್ಲಿ, ಆರು ಶಿಕ್ಷಕರು, ಮೂವರು ಅತಿಥಿ ಶಿಕ್ಷಕರು, ಎಸ್‌ಡಿಎಂಸಿಯಿಂದ ನೇಮಕಗೊಂಡಿರುವ ಇಬ್ಬರು ಶಿಕ್ಷಕರಿದ್ದಾರೆ. ಆದರೂ ಮುಖ್ಯಶಿಕ್ಷಕ ಸೇರಿ, ಐದು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇದು ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಕೂಡಲೇ ಈ ಬಗ್ಗೆ ಇಲಾಖೆ ಗಮನ ಹರಿಸಬೇಕು ಎಂದು ಪೋಷಕ ವೀರಭದ್ರಪ್ಪ ಒತ್ತಾಯಿಸಿದರು.

ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುತ್ತಿರುವ ಶಾಲೆಗಳ ನಡುವೆ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ಕಲಿಯುತ್ತಿರುವ ಶಾಲೆಗೆ ಕಾಯಕಲ್ಪ ನೀಡಬೇಕು. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕ ವಾತಾವರಣ ಕಲ್ಪಿಸಬೇಕು ಎಂಬುದು ಪೋಷಕರ ಆಗ್ರಹ.

ಕೊಠಡಿ, ಶಿಕ್ಷಕರ ಕೊರತೆ

ನರ್ಸರಿ ಮತ್ತು ಶಾಲೆ ಸೇರಿ 342 ಮಕ್ಕಳು ಈ ಶಾಲೆಗೆ ಪ್ರವೇಶ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಕೊಠಡಿ ವ್ಯವಸ್ಥೆ ಇಲ್ಲವಾಗಿದೆ.

ಇರುವ ಕೊಠಡಿಗಳು ಹಾಳಾಗಿ ಶಿಥಿಲಾವಸ್ಥೆ ತಲುಪಿರುವುದು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಅಲ್ಲದೇ ಅಗತ್ಯ ಪ್ರಮಾಣದ ಶೌಚಾಲಯ ಕೂಡ ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಇನ್ನೂ ನೀರಿನ ಸಮಸ್ಯೆಯನ್ನೂ ಈ ಶಾಲೆ ಎದುರಿಸುತ್ತಿದೆ.

‘ಕೊಳವೆ ಬಾವಿ ಕೊರೆಸಿ ನೀರಿನ ಸಮಸ್ಯೆ ಸರಿಪಡಿಸಬೇಕು. ಶಿಕ್ಷಣ ಇಲಾಖೆ ಗಮನಹರಿಸಿ ಶಾಲೆಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು’ ಎಂದು ಎಸ್‌ಡಿಎಂಸಿ ಅಧ್ಯಕ್ಷ ರಾಜಪ್ಪ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.