
ಕಡೂರು: ‘ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುವ ಹಗರಣ ತಪ್ಪಿಸಲು, ಪಡಿತರ ಸಾಗಿಸುವ ಲಾರಿಗಳಿಗೆ ಜಿಪಿಎಸ್ ಅಳವಡಿಸಬೇಕು’ ಎಂದು ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಕೆ.ಕೃಷ್ಣಪ್ಪ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಕಡೂರು ತಾಲ್ಲೂಕು ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಪದಾಧಿಕಾರಿಗಳ ಗೌರವ ಸ್ವೀಕರಿಸಿ ಅವರುಮಾತನಾಡಿದರು.
ಅಕ್ಕಿ ಹಗರಣ ಕುರಿತು ಸರ್ಕಾರ ಸೂಕ್ತ ತನಿಖೆ ಮಾಡಿಸಲಿ, ನ್ಯಾಯಬೆಲೆ ಅಂಗಡಿಗಳಲ್ಲಿ ದಾಸ್ತಾನು ಲೋಪವಿರುವ ಕಡೆಗಳಲ್ಲಿ ಪತ್ತೆ ಹಚ್ಚಿ ಕ್ರಮ ವಹಿಸಲಿ. ನ್ಯಾಯಬೆಲೆ ಅಂಗಡಿಗಳಿಗೆ ಪ್ರತಿ ತಿಂಗಳೂ ಕಮಿಷನ್ ಹಣ ಪಾವತಿ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ವಹಿಸಬೇಕು. ಇದರ ಸಲುವಾಗಿ ಮುಖ್ಯಮಂತ್ರಿ ಹಾಗೂ ಆಹಾರ ಸಚಿವರನ್ನು ಭೇಟಿ ಮಾಡಲಾಗಿದೆ. ಕೇಂದ್ರ ಸರ್ಕಾರದ ಎನ್‌ಎಫ್‌ಎಸ್‌ಎ ಕಮಿಷನ್ ಸಹ ಬಂದಿರುವುದಿಲ್ಲ, ಇದಕ್ಕಾಗಿ ಅಧಿಕಾರಿಗಳಲ್ಲಿ ಮನವಿ ಮಾಡಲಾಗಿದೆ. ಪ್ರತಿ ತಿಂಗಳ ಐದರ ಒಳಗೆ ಬಿಲ್‌ಗಳು ಆಯಾ ಜಿಲ್ಲಾಧಿಕಾರಿ ಕಚೇರಿಗೆ ಬರಬೇಕಿದೆ, ತಹಶೀಲ್ದಾರ್ ಕಚೇರಿಯಿಂದ ಬಿಲ್‌ಗಳನ್ನು ಸರಿಯಾದ ಸಮಯಕ್ಕೆ ಕಳುಹಿಸಬೇಕು ಎಂದರು.
ಹಲವಾರು ವರ್ಷಗಳಿಂದ ಸಮರ್ಪಕವಾದ ತೂಕದಲ್ಲಿ ನ್ಯಾಯಬೆಲೆ ಅಂಗಡಿಗಳಿಗೆ ಗೋದಾಮುಗಳ ಮೂಲಕ ಅಕ್ಕಿ ವಿತರಿಸುತ್ತಿಲ್ಲ, ಕೊರತೆಯಾದರೆ ಹೊಣೆ ಯಾರು? ಸಮರ್ಪಕವಾದ ರೀತಿಯಲ್ಲಿ ತೂಕ ಕೊಡಿಸಲು ಆಹಾರ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕಿದೆ. ಅಕ್ರಮಗಳಿಗೆ ಕಡಿವಾಣ ಹಾಕಲು ನ್ಯಾಯಬೆಲೆ ಅಂಗಡಿಗಳಿಗೆ ಸಿಸಿ ಟಿ.ವಿ ಕ್ಯಾಮೆರಾ ಹಾಗೂ ಅಕ್ಕಿ ತುಂಬಿದ ಲಾರಿಗಳಿಗೆ ಜಿಪಿಎಸ್ ಅಳವಡಿಸಿದಾಗ ಮಾತ್ರ ದುರ್ಬಳಕೆ ಕಡಿಮೆಯಾಗಲಿದೆ ಎಂದು ನುಡಿದರು.
ಪಡಿತರ ಅಂಗಡಿಯವರು ಪಡಿತರದಾರರ ಕುಟುಂಬದ ಸದಸ್ಯರ ಮಾಹಿತಿ ಸಂಗ್ರಹಿಸಲು ನಡೆಸಿದ ಇ-ಕೆವೈಸಿ ಹಣವು ವರ್ಷಗಳೇ ಉರುಳಿದರೂ ಈವರೆಗೂ ಬಿಡುಗಡೆಯಾಗಿಲ್ಲ. ರಾಜ್ಯದಲ್ಲಿ ಈಗಾಗಲೇ ಸುಮಾರು 3-4 ಲಕ್ಷ ಬಿಪಿಎಲ್ ಪಡಿತರ ಕಾರ್ಡುಗಳು ರದ್ದಾಗಿವೆ. ಎಷ್ಟೋ ಅರ್ಹರು ಈಗಲೂ ಬಿಪಿಎಲ್ ಪಟ್ಟಿಯಿಂದ ಹೊರಗೆ ಇದ್ದು, ನಿಜವಾದ ಬಡವರಿಗೆ ಬಿಪಿಎಲ್ ಕಾರ್ಡ್ ದೊರಕಬೇಕಿದೆ. ಶ್ರೀಮಂತರ ಕಾರ್ಡ್‌ಗಳನ್ನು ರದ್ದು ಮಾಡಿ ಯಾರ ಅಭ್ಯಂತರವೂ ಇಲ್ಲ. ಈಗಾಗಲೇ ರದ್ದಾಗಿರುವ ಪಡಿತರ ಕಾರ್ಡ್‌ಗಳನ್ನು ಅರ್ಹರನ್ನು ಗುರುತಿಸಿ ನೀಡಲು ಮುಂದಾಗಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸಮೀಪಿಸುತ್ತಿದ್ದು, ಕೊಡುವ ಅಕ್ಕಿಯನ್ನು ಕಡಿಮೆ ಮಾಡಬೇಡಿ. ಪ್ರಿಂಟರ್‌ಗಳನ್ನು ಅಳವಡಿಸಲು ನ್ಯಾಯಬೆಲೆ ಅಂಗಡಿಗಳಿಗೆ ಅಧಿಕಾರಿಗಳು ಒತ್ತಾಯಿಸಬಾರದು ಎಂದರು.
ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಿದರೆ, ನ್ಯಾಯಬೆಲೆ ಅಂಗಡಿಗಳವರ ಸಹಕಾರ ಸರ್ಕಾರಕ್ಕೆ ನಿರಂತರವಾಗಿ ಇರಲಿದೆ. ಇದೇ ತಿಂಗಳ ಕೊನೆಯ ವಾರದಲ್ಲಿ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಸಂಘದ ಕ್ಯಾಲೆಂಡರ್ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಆಹಾರ ಸಚಿವ ಪ್ರಹ್ಲಾದ ಜೋಷಿ ಭಾಗವಹಿಸಲಿದ್ದಾರೆ. ರಾಜ್ಯದ ಎಲ್ಲಾ ಕಡೆಗಳಿಂದ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಬಂದು, ಕಾರ್ಯಕ್ರಮ ಯಶಸ್ವಿ ಗೊಳಿಸಿಕೊಡುವಂತೆ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನ್ಯಾಯ ಬೆಲೆ ಅಂಗಡಿಗಳ ಮಾಲೀಕರ ಸಂಘದ ಕಡೂರು ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎನ್. ಸದಾಶಿವಪ್ಪ, ಗೌರವಾಧ್ಯಕ್ಷ ಆನಂದಪ್ಪ, ಪದಾಧಿಕಾರಿಗಳಾದ ಬಸವರಾಜಪ್ಪ, ಎಂ.ಶಿವಕುಮಾರ್, ಗಂಗಾಧರಪ್ಪ, ಎಚ್.ಎಂ. ಬಸವರಾಜಪ್ಪ, ಆರ್.ಆರ್. ಆನಂದಪ್ಪ, ದಕ್ಷಿಣಮೂರ್ತಿ, ರಾಜ್ಯ ಕಾರ್ಯದರ್ಶಿ ಚನ್ನಕೇಶವೇಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.