
ಪ್ರಜಾವಾಣಿ ವಾರ್ತೆ
ಚಿಕ್ಕಮಗಳೂರು: ‘ ಮೃತಪಟ್ಟ ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗೂ ಹಣ ಹೋಗಿದೆ. ಇದನ್ನು ಕೂಡಲೇ ಪರಿಶೀಲಿಸಿ ಅಧಿಕಾರಿಗಳು ಕ್ರಮ ವಹಿಸಬೇಕು. ಮೃತರ ಖಾತೆಗೆ ಗೃಹಲಕ್ಷ್ಮಿ ಹಣ ಹೋಗದಂತೆ ತಡೆಯಬೇಕು’ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಗುರುವಾರ ನಡೆದ ಪಂಚ ಗ್ಯಾರಂಟಿ ಯೋಜನೆಗಳ ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
‘ರಾಜ್ಯ ಸರ್ಕಾರದ ಪಂಚಗ್ಯಾರಂಟಿ ಯೋಜನೆಗಳು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಫಲಾನುಭವಿಗಳಿಗೆ ಮಧ್ಯವರ್ತಿಗಳು ಇಲ್ಲದೆ ನೇರವಾಗಿ ತಲುಪುವ ಕಾರ್ಯಕ್ರಮ ಇದಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆ ತಲುಪಬೇಕು ಎಂಬುವುದು ನಮ್ಮ ಆಶಯ. ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ಕೆಲವು ನ್ಯೂನತೆಗಳಿವೆ. ಅವುಗಳನ್ನು ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯ ಕೆಲ ಬಸ್ ಕಾರ್ಯಾಚರಣೆ ಸ್ಥಗಿತವಾಗಿತ್ತು. ಅವುಗಳ ಮರು ಸಂಚಾರ ಕಾರ್ಯ ಆರಂಭಿಸಲಾಗಿದೆ. ಜತೆಗೆ ಜಿಲ್ಲೆಗೆ ಹೊಸದಾಗಿ 15 ಬಸ್‌ಗಳು ಬಂದಿವೆ. ಸಿಬ್ಬಂದಿ ನೇಮಕ ಕೂಡ ಆಗಿದೆ. ಅನ್ನಭಾಗ್ಯ ಯೋಜನೆ ಅಡಿ ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿಗಳ ಎದುರು ಪಡಿತರ ವಿತರಿಸುವ ದಿನಾಂಕ, ತೂಕ, ದಾಸ್ತಾನು ಸೇರಿ ಎಲ್ಲಾ ಮಾಹಿತಿ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಸೂಚಿಸಿದರು.
ಗೃಹಜ್ಯೋತಿ ಜಿಲ್ಲೆಯಲ್ಲಿ ಉತ್ತಮವಾಗಿ ನಡೆಯುತ್ತಿದೆ. ಹೊಸ ಸಂಪರ್ಕಕಕ್ಕೆ ಗ್ರಾಹಕರು ಮನವಿ ಸಲ್ಲಿಸಿದ್ದಾರೆ. ಅದನ್ನು ಬಗೆಹರಿಸಲು ಅಧಿಕಾರಿಗಳ ಜತೆ ಚರ್ಚೆ ನಡೆಯುತ್ತಿದೆ ಎಂದರು.
ಯುವನಿಧಿ ಯೋಜನೆಯಡಿ ಉದ್ಯೋಗ ತರಬೇತಿ ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ ಎಂ.ಟೆಕ್ ಪದವೀಧರರು ಇರುವುದು ಸಂತಸದ ವಿಷಯ. ಈ ಯೋಜನೆ ಸಮರ್ಪಕವಾಗಿ ಜಾರಿಗೊಳಿಸಲು ಅಧಿಕಾರಿಗಳು ಗಮನ ಹರಿಸಬೇಕು ಎಂದು ಸೂಚಿಸಿದರು.
ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಮಲ್ಲೇಶಸ್ವಾಮಿ, ಸದಸ್ಯರಾದ ಹೇಮಾವತಿ, ಮಹೇಶ್, ಜಿಲ್ಲಾ ಸಮಿತಿ ಸದಸ್ಯ ಬಸವರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.