ಕಡೂರು: ಸ್ಥಳೀಯವಾಗಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳಿಗೆ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರನ್ನು ಕಡ್ಡಾಯವಾಗಿ ಆಹ್ವಾನಿಸಬೇಕು ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಆಸಂದಿ ಟಿ.ಕಲ್ಲೇಶ್ ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಆಹಾರ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೆಸ್ಕಾಂ, ಕೆಎಸ್ಆರ್‌ಟಿಸಿ ವತಿಯಿಂದ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮಗಳಿಗೆ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರನ್ನು ಆಹ್ವಾನಿಸುವಂತೆ ಅನೇಕ ಬಾರಿ ಸೂಚನೆ ನೀಡಲಾಗಿದೆ. ಆದರೂ ಪಾಲನೆ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸದಸ್ಯ ಸಪ್ತಕೋಟಿ ಧನಂಜಯ್ ಮಾತನಾಡಿ, ಸರ್ಕಾರ ಉಚಿತ ಕರೆಂಟ್ ಎಂದು ಹೇಳುತ್ತದೆ. ಆದರೆ ಮೆಸ್ಕಾಂನವರು ಪದೇ ಪದೇ ವಿದ್ಯುತ್ ಕಡಿತ ಮಾಡುತ್ತಾರೆ. ಇದೇನಾ ನೀವು ಉಚಿತ ಕರಂಟ್ ಕೊಡುವ ರೀತಿ ಎಂದು ಜನ ಅಪಹಾಸ್ಯ ಮಾಡುತ್ತಿದ್ದಾರೆ. ಇದರಿಂದ ಮುಜುಗರವಾಗುತ್ತಿದೆ. ಈ ಸಮಸ್ಯೆಗೆ ಮೆಸ್ಕಾ ಪರಿಹಾರ ಸೂಚಿಸಬೇಕು. ಸರ್ಕಾರದ ನಿರ್ದೇಶನದಂತೆ ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುವ ಕಾರ್ಯವನ್ನು ಆಹಾರ ಇಲಾಖೆ ಕೈಗೊಂಡಿದೆ. ನಿಯಮಾನುಸಾರ ಕಾರ್ಡ್ ರದ್ದು ಪಡಿಸಲು ಯಾರ ತಕರಾರೂ ಇಲ್ಲ. ಆದರೆ ದಂಡ ವಿಧಿಸುವುದಕ್ಕೆ ಜನರ ವಿರೋಧವಿದೆ. ಆದ್ದರಿಂದ ನ್ಯಾಯಬೆಲೆ ಅಂಗಡಿಗಳ ಮುಂದೆ ಜನರಾಗಿಯೇ ಪಡಿತರ ಚೀಟಿ ಹಿಂದಿರುಗಿಸುವಂತೆ ಮಾಹಿತಿ ಫಲಕವನ್ನು ಅಳವಡಿಸಬೇಕು ಎಂದು ಸಲಹೆ ನೀಡಿದರು.
ಮತ್ತೊಬ್ಬ ಸದಸ್ಯ ಸಿಂಗಟಗೆರೆ ಮಧು ಮಾತನಾಡಿ, ಕೆಲ ನ್ಯಾಯಬೆಲೆ ಅಂಗಡಿಗಳಲ್ಲಿ ರಸಗೊಬ್ಬರದ ಜತೆ ಅಕ್ಕಿಯನ್ನೂ ಶೇಖರಿಸಿ ಇಡಲಾಗುತ್ತಿದೆ. ಇದರಿಂದ ಅಕ್ಕಿ ಕಲುಷಿತವಾಗುತ್ತಿದೆ. ರಸಗೊಬ್ಬರ ಮತ್ತು ಅಕ್ಕಿಯನ್ನು ಪ್ರತ್ಯೇಕವಾಗಿ ಶೇಖರಿಸಡುವಂತೆ ನ್ಯಾಯಬೆಲೆ ಅಂಗಡಿಯವರಿಗೆ ಸೂಚಿಸಬೇಕು ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಾರ್ಯದರ್ಶಿ ದೇವರಾಜ್, ಸದಸ್ಯರಾದ ಪುಷ್ಪಾ ರಮೇಶ್, ಗಿರೀಶ್ ನಾಯ್ಕ, ಮಚ್ಚೇರಿ ಚನ್ನಪ್ಪ, ಸೋಮೇಶ್, ತೌಸಿಫ್, ಶೋಭಾ, ಸುಜಾತಾ, ಮೂರ್ತಿ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಟಿ.ಕಲ್ಲೇಶ್ ಸಭೆಯಲ್ಲಿ ಮಾತನಾಡಿ, ಮೆಸ್ಕಾಂ ಲೈನ್ ಮ್ಯಾನ್‌ಗಳು ಕೆಲವರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎನ್ನುವ ದೂರುಗಳಿದ್ದು ಅಂತಹವರನ್ನು ಬದಲಿಸಲು ಮೆಸ್ಕಾಂ ಅಧಿಕಾರಿಗಳು ಕ್ರಮ ವಹಿಸಬೇಕು.
3308 ಮಂದಿ ಅನರ್ಹರಿಗೆ ನೋಟಿಸ್
ಆರ್ಥಿಕವಾಗಿ ಸಬಲರಾಗಿರುವ ಅನೇಕರು ಬಿಪಿಎಲ್ ಪಡಿತರ ಚೀಟಿ ಹೊಂದಿದ್ದಾರೆ. ಅಂತಹ 3308 ಜನರನ್ನು ಗುರುತಿಸಿ ನೋಟಿಸ್ ನೀಡಲಾಗಿದೆ. ಅವರಾಗಿಯೇ ಬಂದು ಬಿಪಿಎಲ್ ಕಾರ್ಡ್ ಹಿಂದಿರುಗಿಸಬೇಕು. ಇಲ್ಲವಾದಲ್ಲಿ ಇಲಾಖೆ ವತಿಯಿಂದ ಕಾರ್ಡ್‌ಗಳನ್ನು ರದ್ದುಪಡಿಸುವುದರ ಜತೆಗೆ ದಂಡ ವಿಧಿಸಲು ಅವಕಾಶವಿದೆ. ಕಳೆದ ವರ್ಷ ಅನರ್ಹ ಪಡಿತರದಾರರಿಂದ ಸುಮಾರು ₹ 25 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದು ಆಹಾರ ನಿರೀಕ್ಷಕ ಎಚ್.ಶ್ರೀನಿವಾಸ ಮಾಹಿತಿ ನೀಡಿದರು.
‘ಗ್ಯಾರಂಟಿ ಯೋಜನೆಗೆ ₹550 ಕೋಟಿ ವೆಚ್ಚ’
ಗ್ಯಾರಂಟಿ ಯೋಜನೆ ಜಾರಿಯಾದ ದಿನದಿಂದ ಇಲ್ಲಿಯವರೆಗೆ ಗೃಹಲಕ್ಷ್ಮಿ ಯೋಜನೆಯಲ್ಲಿ ₹ 284.65 ಕೋಟಿ ಹಣ ಫಲಾನುಭವಿಗಳಿಗೆ ಮಂಜೂರಾಗಿದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಆಸಂದಿ ಟಿ.ಕಲ್ಲೇಶ್ ಹೇಳಿದರು. ಗೃಹಜ್ಯೋತಿ ಯೋಜನೆಯಡಿ ಬೀರೂರು ಕಡೂರು ವಲಯಗಳಿಂದ ₹ 54 ಕೋಟಿ ವಿದ್ಯುತ್ ಬಿಲ್ ಭರಿಸಲಾಗಿದೆ. ಶಕ್ತಿ ಯೋಜನೆಯಡಿ ₹ 62.17 ಕೋಟಿ ಹಣವನ್ನು ಸಾರಿಗೆ ನಿಗಮಕ್ಕೆ ಸಂದಾಯ ಮಾಡಲಾಗಿದೆ. ಯುವ ನಿಧಿ ಯೋಜನೆಯಡಿ ₹ 2.28 ಕೋಟಿಯಷ್ಟು ಫಲಾನುಭವಿ ಯುವಕ ಯುವತಿಯರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಒಟ್ಟಾರೆ ಅನ್ನಭಾಗ್ಯ ಯೋಜನೆಯೂ ಸೇರಿ ತಾಲ್ಲೂಕಿನಲ್ಲಿ ಗ್ಯಾರಂಟಿ ಯೋಜನೆಗೆ ₹550 ಕೋಟಿ ವೆಚ್ಚ ಮಾಡಲಾಗಿದ್ದು ತಾಲ್ಲೂಕು ಯೋಜನೆಗಳ ಅನುಷ್ಠಾನದಲ್ಲಿ ದಾಖಲೆ ನಿರ್ಮಿಸಿದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.