ADVERTISEMENT

ಗ್ಯಾರಂಟಿ ಯೋಜನೆಗಳು ರಾಜ್ಯದ ಆರ್ಥಿಕ ಶಕ್ತಿ: ಎಚ್.ಎಂ.ರೇವಣ್ಣ

ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 7:59 IST
Last Updated 24 ಫೆಬ್ರುವರಿ 2026, 7:59 IST
ಗ್ಯಾರಂಟಿ ಯೋಜನೆಗಳ ಕುರಿತ ಜಾಗೃತಿ ಮೂಡಿಸುವ ಮೆರವಣಿಗೆ ಚಿಕ್ಕಮಗಳೂರಿನಲ್ಲಿ ಸೋಮವಾರ ನಡೆಯಿತು
ಗ್ಯಾರಂಟಿ ಯೋಜನೆಗಳ ಕುರಿತ ಜಾಗೃತಿ ಮೂಡಿಸುವ ಮೆರವಣಿಗೆ ಚಿಕ್ಕಮಗಳೂರಿನಲ್ಲಿ ಸೋಮವಾರ ನಡೆಯಿತು   

ಚಿಕ್ಕಮಗಳೂರು: ‘ಪಂಚ ಗ್ಯಾರಂಟಿ ಯೋಜನೆಗಳು ಕೇವಲ ಭರವಸೆಗಳಾಗಿ ಉಳಿಯದೆ ನಾಡಿನ ಆರ್ಥಿಕತೆಯ ಗತಿಯನ್ನೇ ಬದಲಿಸಿವೆ. ಗ್ಯಾರಂಟಿ ಯೋಜನೆಗಳು ರಾಜ್ಯದ ಆರ್ಥಿಕ ಶಕ್ತಿ’ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ವತಿಯಿಂದ ಸೋಮವಾರ ಆಯೋಜಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಬಜೆಟ್ ಗಾತ್ರವನ್ನು ₹2.5 ಲಕ್ಷ ಕೋಟಿಯಿಂದ ₹4.09 ಲಕ್ಷ ಕೋಟಿಗೆ ಏರಿಸಿದೆ. ಆ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ವಿಶ್ವ ಸಂಸ್ಥೆಯ ಉನ್ನತ ಅಧಿಕಾರಿಗಳೇ ಕರ್ನಾಟಕಕ್ಕೆ ಭೇಟಿ ನೀಡಿ ಇಲ್ಲಿನ ಅಭಿವೃದ್ಧಿ ಮಾದರಿಯನ್ನು, ವಿಶೇಷವಾಗಿ ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಯ ವಿಷಯವನ್ನು ಮುಕ್ತವಾಗಿ ಶ್ಲಾಘಿಸಿದ್ದಾರೆ ಎಂದು ಅವರು ತಿಳಿಸಿದರು.

ADVERTISEMENT

ಶಕ್ತಿ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆಗಳ ಮೂಲಕ ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗುತ್ತಿದ್ದಾರೆ. ಉಚಿತ ಬಸ್ ಪ್ರಯಾಣವು ಅವರ ಕೆಲಸದ ಅವಕಾಶಗಳನ್ನು ಹೆಚ್ಚಿಸಿದೆ ಎಂಬುದು ಹೆಮ್ಮೆಯ ವಿಷಯ ಎಂದು ಅವರು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ 1,46,056 ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ 1,664 ಮರಣ ಹೊಂದಿರುವವರ ಖಾತೆಗಳಿಗೆ ಗೃಹಲಕ್ಷ್ಮಿ ಹಣ ಜಮೆಯಾಗಿದ್ದು, ಅವುಗಳನ್ನು ವಾಪಸ್ ಪಡೆಯಲು ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.

‘ಅಭಿವೃದ್ಧಿಯ ಚಾಲಕ ಶಕ್ತಿಯಾಗಿ ಗ್ಯಾರಂಟಿಗಳು’ ಕುರಿತು ಉಪನ್ಯಾಸ ನೀಡಿದ ಜಾಗೃತ ಕರ್ನಾಟಕ ಸಂಚಾಲಕ ಎಚ್.ವಿ.ವಾಸು, ‘ರಾಜ್ಯ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಈ ಯೋಜನೆಗಳಿಗಾಗಿ ಒಟ್ಟು ₹1.16 ಲಕ್ಷ  ಕೋಟಿ ವ್ಯಯಿಸಿದೆ. ಈ ಬೃಹತ್ ಮೊತ್ತವನ್ನು ನೇರವಾಗಿ ಮಹಿಳೆಯರು ಮತ್ತು ಯುವಜನರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವ ಮೂಲಕ ಜನಸಾಮಾನ್ಯರ ಆರ್ಥಿಕ ಸ್ಥಿತಿ ಬಲಪಡಿಸಲಾಗಿದೆ’ ಎಂದರು.

ಈ ಗ್ಯಾರಂಟಿಗಳು ಜಾರಿಯಾಗುವುದಿಲ್ಲ ಅಥವಾ ಚುನಾವಣೆಯ ನಂತರ ನಿಂತು ಹೋಗುತ್ತವೆ ಎಂಬ ವದಂತಿ ಹಬ್ಬಿಸಲಾಗಿತ್ತು. ಆದರೆ ಅದು ಸುಳ್ಳಾಗಿವೆ ಮತ್ತು ಮುಂಬರುವ ಬಜೆಟ್‌ನಲ್ಲಿಯೂ ಇವು ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಿದರು.

ಈ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂಬ ಟೀಕೆಗಳಿದ್ದವು. ಜನರ ಕೈಗೆ ಹಣ ಮತ್ತು ಉಚಿತ ಸೌಲಭ್ಯ ತಲುಪುವುದರಿಂದ ಅವರ ಬದುಕು ಹಸನಾಗುತ್ತಿದೆ. ವಿಶೇಷವಾಗಿ ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆಗಳು ಮಹಿಳೆಯರ ಸಬಲೀಕರಣಕ್ಕೆ ಪೂರಕವಾಗಿದ್ದು, ಫಲಾನುಭವಿಗಳು ಈ ಯೋಜನೆಗಳ ಮಹತ್ವದ ಬಗ್ಗೆ ಸಮಾಜದಲ್ಲಿ ಹೆಮ್ಮೆಯಿಂದ ಮಾತನಾಡಬೇಕು ಎಂದು ಕರೆ ನೀಡಿದರು.

ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಶಾಸಕ ಜಿ.ಎಚ್.ಶ್ರೀನಿವಾಸ್, ಶಾಸಕಿ ನಯನಾ ಮೋಟಮ್ಮ ಮಾತನಾಡಿದರು. ಸಮಾವೇಶಕ್ಕೆ ಮುನ್ನ ನಗರದ ಆಜಾದ್‌ ಪಾರ್ಕ್ ವೃತ್ತದಿಂದ ಕುವೆಂಪು ಕಲಾಮಂದಿರದ ತನಕ ಮೆರವಣಿಗೆ ನಡೆಯಿತು.

ಕಾರ್ಯಕ್ರಮದಲ್ಲಿ ರಾಜ್ಯ ಪರಿಸರ ಮೌಲ್ಯ ಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್, ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್, ಭದ್ರಾ ಕಾಡಾ ಅಧ್ಯಕ್ಷ ಕೆ.ಪಿ.ಅಂಶುಮಂತ್, ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಉಪಸ್ಥಿತರಿದ್ದರು.

ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಜನ

ಯಜಮಾನಿಯರ ಖಾತೆಗೆ ₹1319 ಕೋಟಿ 

‘ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿವೆ. ಗೃಹಲಕ್ಷ್ಮಿ ಯೋಜನೆಯು ಜಿಲ್ಲೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದು ಈವರೆಗೆ ಒಟ್ಟು ₹1319 ಕೋಟಿಯನ್ನು ಮಹಿಳಾ ಯಜಮಾನಿಯರ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ’ ಎಂದು ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ‘ಜಿಲ್ಲೆಯ ಸುಮಾರು 3 ಲಕ್ಷ ಮನೆಗಳ ಪೈಕಿ 262428 ಮಹಿಳಾ ಯಜಮಾನಿಯರು ಪ್ರತಿ ತಿಂಗಳು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಪ್ರತಿ ತಿಂಗಳು ಸರಾಸರಿ ₹52.45 ಕೋಟಿಯನ್ನು ಜಿಲ್ಲೆಯ ಮಹಿಳೆಯರ ಕೈ ಸೇರುತ್ತಿವೆ. ತಾಂತ್ರಿಕ ಕಾರಣಗಳಿಂದ ಹಣ ಸಂದಾಯವಾಗದ ಪ್ರಕರಣಗಳನ್ನು ಪರಿಹರಿಸಲು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ನೆರವಾಗುತ್ತಿದ್ದಾರೆ’ ಎಂದರು. ‘ಶಕ್ತಿ’ ಯೋಜನೆಯಡಿ ಜಿಲ್ಲೆಯ ಆರು ಡಿಪೊಗಳ ಮೂಲಕ ಈವರೆಗೆ ಮಹಿಳೆಯರು ಒಟ್ಟು 5 ಕೋಟಿ 95 ಲಕ್ಷ ಬಾರಿ ಉಚಿತವಾಗಿ ಪ್ರಯಾಣಿಸಿದ್ದಾರೆ. ಈ ಯೋಜನೆಯ ಯಶಸ್ವಿ ನಿರ್ವಹಣೆಗಾಗಿ ಸರ್ಕಾರವು ಕೆಎಸ್‌ಆರ್‌ಟಿಸಿಗೆ ₹231 ಕೋಟಿ ಅನುದಾನ ನೀಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ₹11 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.