ಮೂಡಿಗೆರೆ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಂಚೂಣಿಯಲ್ಲಿರುವ ದೇಶಗಳು ಸಹ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿವೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಪಟ್ಟಣದ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸೋಮವಾರ ಏರ್ಪಡಿಸಿದ್ದ ಶಕ್ತಿ ಯೋಜನೆ ಸಂಭ್ರಮಾಚರಣೆಯನ್ನು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ಯಾರಂಟಿ ಯೋಜನೆಯಿಂದ ಸರ್ಕಾರಕ್ಕೆ ಒಳ್ಳೆಯ ಹೆಸರು ಬರಬಾರದೆಂದು ವಿರೋಧ ಪಕ್ಷಗಳು ಸರ್ಕಾರದಲ್ಲಿ ಹಣವಿಲ್ಲ. ಬಸ್ಸಿಗೆ ಡೀಸೆಲ್ ಹಾಕಲು ಸಾಧ್ಯಗುತ್ತಿಲ್ಲವೆಂಬ ಟೀಕೆಗಳನ್ನು ಮಾಡುತ್ತಿದ್ದವು. ಆದರೆ ನಮ್ಮ ಗ್ಯಾರಂಟಿ ಯೋಜನೆ ಎರಡು ವರ್ಷ ಯಶಸ್ವಿಯಾಗಿ ಪೂರೈಸಿದ್ದು, ಇಂದಿಗೂ ಮುಂದುವರೆದಿದ್ದರಿಂದ ಟೀಕೆಗಳಿಗೆ ತಡೆ ಬಿದ್ದಂತಾಗಿದೆ. ಅಲ್ಲದೇ ಇದರ ನಡುವೆ ಅಭಿವೃದ್ಧಿ ಕಾರ್ಯ ಕೂಡ ಬರದಿಂದ ಸಾಗುತ್ತಿದ್ದು, ವಿರೋಧ ಪಕ್ಷಗಳ ಬಾಯಿ ಮುಚ್ಚಿಸಿದೆʼ ಎಂದು ಹೇಳಿದರು.
‘ಎಷ್ಟೋ ಮಹಿಳೆಯರು ಇತರೆ ಕೆಲಸ ಕಾರ್ಯಗಳಿಗೆ ತೆರಳಲು ತನ್ನ ಸಹೋದರ ಹಾಗೂ ಪೋಷಕರ ನೆರವು ಪಡೆದು ಬಸ್ಸಿನಲ್ಲಿ ಓಡಾಡುವ ಸ್ಥಿತಿ ಉಂಟಾಗಿತ್ತು. ಆದರೆ ಬಡ ಮಹಿಳೆಯರು ಸ್ವಾವಲಂಬಿಯಾಗಬೇಕೆಂಬ ದೃಷ್ಟಿಯಿಂದ ಸರ್ಕಾರ ದೊಡ್ಡ ಹೆಜ್ಜೆಯಿಟ್ಟು ಶಕ್ತಿ ಯೋಜನೆ ಪ್ರಾರಂಭಿಸಿತು. ಇದರಿಂದ ಕುಟುಂಬಕ್ಕೆ ಹಣ ಉಳಿತಾಯ ಜತೆಗೆ ಯಾರಿಗೂ ಹೊರೆಯಾಗದಂತೆ ಗ್ರಾಮಾಂತರ ಪ್ರದೇಶದಿಂದ ರಾಜ್ಯದ ಮೂಲೆ ಮೂಲೆಗೂ ಮಹಿಳೆಯರು ಸ್ವತಂತ್ರವಾಗಿ ತಿರುಗಾಡಲು ಸಾಧ್ಯವಾಗಿದೆ. ಅಲ್ಲದೇ ವಿದ್ಯಾರ್ಥಿಗಳಿಗೂ ಸಾಕಷ್ಟು ಅನುಕೂಲವಾಗಿದೆ. ಇದಕ್ಕೆ ಕಾಂಗ್ರೆಸ್ ಸರ್ಕಾರವನ್ನು ಮಹಿಳೆಯರು ಸದಾ ಸ್ಮರಿಸಬೇಕುʼ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮೊದಲು ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ತೆರಳಲು ಬಸ್‍ನಲ್ಲಿ ಕುಳಿತಿದ್ದ ಪ್ರಯಾಣಿಕರಿಗೆ ಶುಭ ಹಾರೈಸಿದರು. ಬಸ್ಸಿನಲ್ಲಿದ್ದ ಮಹಿಳೆಯರು ಶಕ್ತಿ ಯೋಜನೆಯ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸುವ ಜತೆಗೆ ಶಾಸಕರಿಗೆ ಸನ್ಮಾನಿಸಿದರು. ಬಳಿಕ ಬಸ್ಸಿನಲ್ಲಿಯೇ ಗ್ರಾಮೀಣ ಪ್ರದೇಶಕ್ಕೆ ಭೇಟಿ ನೀಡಲಾಯಿತು
ಈ ವೇಳೆ ಕಾಂಗ್ರೆಸ್ ಮುಖಂಡ ಎಂ.ಪಿ.ಕುಮಾರಸ್ವಾಮಿ, ಪ.ಪಂ.ಅಧ್ಯಕ್ಷ ಕೆ.ವೆಂಕಟೇಶ್, ಉಪಾಧ್ಯಕ್ಷ ರಮೇಶ್ ಹೊಸ್ಕೆರೆ, ಸದಸ್ಯ ಹಂಝಾ, ಗ್ರಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಎಸ್.ಜಯರಾಂ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಎಚ್.ಜಿ.ಸುರೇಂದ್ರ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.