ADVERTISEMENT

ಬಿಲ್ಲವರ ಅಭಿವೃದ್ಧಿಗೆ ನಿಗಮ ಸ್ಥಾಪಿಸಿ: ಸತ್ಯಜಿತ್ ಸುರತ್ಕಲ್ ಒತ್ತಾಯ

ನಾರಾಯಣ ಗುರುಗಳ ಸಂದೇಶ ರಥಯಾತ್ರೆಯ ಸಮಾರೋಪ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 5:14 IST
Last Updated 13 ಸೆಪ್ಟೆಂಬರ್ 2022, 5:14 IST
ಬಾಳೆಹೊನ್ನೂರಿನ ನಾರಾಯಣಗುರು ಸಮುದಾಯ ಭವನದಲ್ಲಿ ಸೋಮವಾರ ನಾರಾಯಣಗುರುಗಳ 168ನೇ ಜಯಂತಿ ಅಂಗವಾಗಿ ನಾರಾಯಣಗುರುಗಳ ಸಂದೇಶ ರಥಯಾತ್ರೆಯ ಸಮಾರೋಪ ಸಮಾರಂಭವನ್ನು ಸಂಘಟನೆಯ ಗೌರವ ಕಾರ್ಯದರ್ಶಿ ಪಿ.ಆರ್.ಸದಾಶಿವ ಉದ್ಘಾಟಿಸಿದರು. ಸತ್ಯಜಿತ್ ಸುರತ್ಕಲ್, ಎಚ್.ಎಂ.ಸತೀಶ್ ಇದ್ದರು.
ಬಾಳೆಹೊನ್ನೂರಿನ ನಾರಾಯಣಗುರು ಸಮುದಾಯ ಭವನದಲ್ಲಿ ಸೋಮವಾರ ನಾರಾಯಣಗುರುಗಳ 168ನೇ ಜಯಂತಿ ಅಂಗವಾಗಿ ನಾರಾಯಣಗುರುಗಳ ಸಂದೇಶ ರಥಯಾತ್ರೆಯ ಸಮಾರೋಪ ಸಮಾರಂಭವನ್ನು ಸಂಘಟನೆಯ ಗೌರವ ಕಾರ್ಯದರ್ಶಿ ಪಿ.ಆರ್.ಸದಾಶಿವ ಉದ್ಘಾಟಿಸಿದರು. ಸತ್ಯಜಿತ್ ಸುರತ್ಕಲ್, ಎಚ್.ಎಂ.ಸತೀಶ್ ಇದ್ದರು.   

ಬಾಳೆಹೊನ್ನೂರು: ರಾಜ್ಯದ ಎಲ್ಲ ಪ್ರಭಾವಿ ಪಂಗಡಗಳಿಗೆ ನಿಗಮ, ಮಂಡಳಿಗಳಿವೆ. ಆದರೆ, ಬಹುಸಂಖ್ಯೆಯಲ್ಲಿರುವ ಬಿಲ್ಲವ ಸಮುದಾಯಕ್ಕೆ ಅದು ಮರೀಚಿಕೆಯಾಗಿ ಉಳಿದಿದೆ. ಸರ್ಕಾರ ತಕ್ಷಣ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ನಾರಾಯಣಗುರು ವಿಚಾರ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಒತ್ತಾಯಿಸಿದರು.

ಕಡ್ಲೆಮಕ್ಕಿಯ ನಾರಾಯಣಗುರು ಸಮುದಾಯಭವನದಲ್ಲಿ ಜಿಲ್ಲಾ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘಗಳ ಒಕ್ಕೂಟ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜಯಂತಿ ಅಂಗವಾಗಿ ನಾರಾಯಣ ಗುರುಗಳ ಸಂದೇಶ ರಥಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದದರು.

ನಾರಾಯಣ ಗುರುಗಳ ಹೆಸರಿನಲ್ಲಿ ವಸತಿ ಶಾಲೆಗಳನ್ನು ಸರ್ಕಾರ ಆರಂಭಿ ಸಿದೆ. ಅಲ್ಲಿ ಸಮುದಾಯಕ್ಕೆ ಪ್ರಥಮ ಆದ್ಯತೆ ನೀಡಬೇಕು. ನವೋದಯ ವಿದ್ಯಾಲಯ ಮಾದರಿಯಲ್ಲಿ ಅದನ್ನು ನಡೆಸಬೇಕು ಎಂದು ಆಗ್ರಹಿಸಿದರು.

ADVERTISEMENT

ಹಿಂದುಳಿದವರಿಗೆ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ನ್ಯಾಯ ಸಿಗದಿದ್ದರೆ ಹಿಂದೂ ಸಮಾಜಕ್ಕೆ ಉಳಿಗಾಲವಿಲ್ಲ. ಹಿಂದುತ್ವದ ಉಳಿವು ಅಗತ್ಯವಿದೆ. ಆ ನಿಟ್ಟಿನಲ್ಲಿ ಯುವಕರು ಉನ್ನತ ಶಿಕ್ಷಣದ ಕಡೆ ಮುಖ ಮಾಡಬೇಕು ಎಂದರು.

ಜಿಲ್ಲಾ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘಗಳ ಅಧ್ಯಕ್ಷ ಎಚ್.ಎಂ.ಸತೀಶ್ ಮಾತನಾಡಿ, ಸಮುದಾಯದ ಯುವಕರು ಆಡಳಿತದ ಚುಕ್ಕಾಣಿ ಹಿಡಿಯಬೇಕು. ಸಮಾನತೆಯ ಹೋರಾಟ ಸಂಘಟನೆಗಳಿಂದ ಮಾತ್ರ ಸಾಧ್ಯ ಎಂದರು.

ಹೇರೂರಿನ ರತ್ನಾಕರ್ ಪೂಜಾರಿ ಅವರಿಗೆ ₹ 15 ಸಾವಿರ ವೈದ್ಯಕೀಯ ನೆರವು ನೀಡಲಾಯಿತು. ಸಂಘಟನೆ ಗೌರವಾಧ್ಯಕ್ಷ ಪಿ.ಆರ್.ಸದಾಶಿವ ಮಾತನಾಡಿದರು. ರಥಯಾತ್ರೆ ಮಾರ್ಕಂಡೇಶ್ವರ ದೇವಸ್ಥಾನದಿಂದ ಬಸ್ ನಿಲ್ದಾಣದ ಮೂಲಕ ಜೇಸಿ ವೃತ್ತ ತಲುಪಿ ಅಲ್ಲಿಂದ ಕಡ್ಲೆಮಕ್ಕಿಯ ನಾರಾಯಣ ಗುರು ಸಮುದಾಯಭವನ ತಲುಪಿತು. ನೂರಾರು ವಾಹನಗಳು, ಮಹಿಳೆಯರು ಭಾಗವಹಿಸಿದ್ದರು.

ಬಾಳೆಹೊನ್ನೂರು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ.ಜೆ.ಮೋಹನ್, ಮುದರ ಪೂಜಾರಿ, ಸತೀಶ್ ಅರಳಿಕೊಪ್ಪ, ವೆನಿಲ್ಲಾ ಭಾಸ್ಕರ್, ಕೆ.ಎಸ್.ಗಣೇಶ್, ಎನ್.ಎ.ಸಂಜೀವ, ವಾಸು ಪೂಜಾರಿ, ಶೇಷಗಿರಿ, ಎಂ.ಶ್ರೀನಿವಾಸ್ ಮಾಯ್ಯಪ್ಪನ್, ಕೆ.ಪ್ರಸಾದ್, ಪ್ರಶಾಂತ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.