ADVERTISEMENT

ಹಂಗರವಳ್ಳಿ ಸರ್ಕಾರಿ ಶಾಲೆ ರಾಷ್ಟ್ರಮಟ್ಟಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 7:03 IST
Last Updated 10 ಜನವರಿ 2026, 7:03 IST
ಹಂಗರವಳ್ಳಿಯ ಸರ್ಕಾರಿ ಶಾಲೆಯ ಚಿತ್ರ
ಹಂಗರವಳ್ಳಿಯ ಸರ್ಕಾರಿ ಶಾಲೆಯ ಚಿತ್ರ   

ಚಿಕ್ಕಮಗಳೂರು: ತಾಲ್ಲೂಕಿನ ಹಂಗರವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯು ಯಶಸ್ವಿ ಮಾದರಿ ಶಾಲೆಗಳ ಉತ್ತಮ ಸಾಧನೆಗಾಗಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಷನ್ ಪ್ಲಾನಿಂಗ್ ಆ್ಯಂಡ್ ಅಡ್ಮಿನಿಸ್ಟ್ರೇಷನ್(ಎನ್‌ಐಇಪಿಎ) ನಡೆಸುವ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ‘ಯಶಸ್ವಿ ಶಾಲಾ ನಾಯಕತ್ವ ರಾಷ್ಟ್ರೀಯ ಸಮಾವೇಶ’ಕ್ಕೆ ಅತ್ಯುತ್ತಮ ಮಾದರಿ ಶಾಲೆಗಳ ಅಡಿಯಲ್ಲಿ ಈ ಶಾಲೆ ಆಯ್ಕೆಯಾಗಿದೆ. ಸಮಾವೇಶದಲ್ಲಿ ಶಾಲೆಯ ಯಶೋಗಾಥೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ.

ವಿಕಸಿತ ಭಾರತ-2047 ಸೃಜನಶೀಲ ಹಾದಿಗೆ ಪೂರಕವಾಗಿ ಎನ್‌ಐಇಪಿಎಯಿಂದ ಆಯೋಜನೆಗೊಳ್ಳುವ ‘ಯಶಸ್ವಿ ಶಾಲಾ ನಾಯಕತ್ವ’ ರಾಷ್ಟ್ರೀಯ ಸಮಾವೇಶಕ್ಕಾಗಿ ದೇಶದಾದ್ಯಂತ 200ಕ್ಕೂ ಹೆಚ್ಚು ಶಾಲೆಗಳು ನಾಮ ನಿರ್ದೇಶನಗೊಂಡಿದ್ದು, ಇದರಲ್ಲಿ 55 ಮಾದರಿ ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ರಾಜ್ಯದಿಂದ ಎರಡು ಶಾಲೆಗಳು, ಇದು ಹಾಗೂ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕಿನ ಹೂದಲಮನೆ ಸರ್ಕಾರಿ ಪ್ರೌಢಶಾಲೆ ಆಯ್ಕೆಗೊಂಡಿವೆ. ಆಯಾ ಶಾಲೆಯ ಮುಖ್ಯೋಪಾಧ್ಯಾಯರು ಈ ಸಮಾವೇಶದಲ್ಲಿ ಭಾಗವಹಿಸಿ ಶಾಲೆಯ ಯಶೋಗಾಥೆ ಕುರಿತು 15 ನಿಮಿಷ ಪ್ರಾತ್ಯಕ್ಷಿಕೆ ನೀಡಲಿದ್ದಾರೆ.

ADVERTISEMENT

75 ವರ್ಷಗಳ ಇತಿಹಾಸ ಇರುವ ಹಂಗರವಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ 1951ರಲ್ಲಿ ಕೂಲಿಮಠ ಹೆಸರಿನಲ್ಲಿ ಪ್ರಾರಂಭಗೊಂಡಿತ್ತು. ಕ್ರಮೇಣ ಖಾಸಗಿ ಶಾಲೆಗಳ ಹೆಚ್ಚಳದಿಂದ 2018ರ ವೇಳೆಗೆ ಮಕ್ಕಳ ಸಂಖ್ಯೆ 13ಕ್ಕೆ ಇಳಿಕೆಯಾಯಿತು.

ಈ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು ಶಾಲೆ ಉಳಿಸಲು ಪಣತೊಟ್ಟು, ‘ಶ್ರೀ ಉದ್ದಂಡೇಶ್ವರ ಶಿಕ್ಷಣ ಸೇವಾ ಟ್ರಸ್ಟ್’ ಸ್ಥಾಪಿಸಿ ಸರ್ಕಾರಿ ಶಾಲೆಯಲ್ಲಿಯೇ ಸರ್ಕಾರದ ಅನುಮತಿಯೊಂದಿಗೆ ಎಲ್.ಕೆ.ಜಿ, ಯು.ಕೆ.ಜಿ ಆರಂಭಿಸಿ ಕ್ರಮೇಣ ದ್ವಿಭಾಷಾ ಮಾಧ್ಯಮದಲ್ಲಿ ಬೋಧನೆ ಆರಂಭಿಸಿದರು. ಸಂದರ್ಶನದ ಮೂಲಕ ಖಾಸಗಿ ಶಿಕ್ಷಕರನ್ನು ಈ ಶಾಲೆಗೆ ನೇಮಿಸಿ ಟ್ರಸ್ಟ್ ಮೂಲಕ ವೇತನ ನೀಡಲಾಯಿತು. ವಿದ್ಯಾರ್ಥಿಗಳ ಪ್ರಯಾಣಕ್ಕಾಗಿ ದಾನಿಗಳ ನೆರವಿನಿಂದ 2 ಬಸ್ ವ್ಯವಸ್ಥೆ ಕಲ್ಪಿಸಲಾಯಿತು. ಸರ್ಕಾರ ನೀಡುವ ಸಮವಸ್ತ್ರದ ಜೊತೆಗೆ ಹೆಚ್ಚುವರಿಯಾಗಿ ಸಮವಸ್ತ್ರ, ಶೂ, ಸಾಕ್ಸ್ ಹಾಗೂ ನೋಟ್‌ಬುಕ್ ಮತ್ತು ಲೇಖನ ಸಾಮಗ್ರಿಗಳನ್ನು ಟ್ರಸ್ಟ್ ಮೂಲಕ ನೀಡಲಾಗುತ್ತಿದೆ. ಅಳಿವಿನಂಚಿನಲ್ಲಿದ್ದ ಶಾಲೆ ಕ್ರಮೇಣ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಈಗ 265 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ವಿವಿಧ ಇಲಾಖೆಗಳಿಂದ ₹5 ಕೋಟಿ ನೆರವು ಪಡೆದು 3 ಅಂತಸ್ತಿನ ಕಟ್ಟಡ ನಿರ್ಮಿಸುತ್ತಿದ್ದಾರೆ. ವಿಶಾಲವಾದ ಬೋಧನಾ ಕೊಠಡಿಗಳು, ಸುಸಜ್ಜಿತ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, 500 ಆಸನವುಳ್ಳ ಸಭಾಂಗಣ, ಶೌಚಾಲಯ, ಶಿಕ್ಷಕರಿಗೆ ಪ್ರತ್ಯೇಕ ಕೊಠಡಿ ನಿರ್ಮಿಸಲಾಗಿದೆ. 60 ಸಿ.ಸಿ ಟಿವಿ ಕ್ಯಾಮೆರಾಗಳನ್ನು ದಾನಿಗಳೊಬ್ಬರು ಅಳವಡಿಸಿಕೊಟ್ಟಿದ್ದಾರೆ.

ಪ್ರಸ್ತುತ ಸರ್ಕಾರಿ, ಅತಿಥಿ ಹಾಗೂ ಹೊರ ಸಂಪನ್ಮೂಲದ ಮೂಲಕ 13 ಶಿಕ್ಷಕರಿದ್ದಾರೆ. ಮುಚ್ಚುವ ಹಂತದಲ್ಲಿದ್ದ ಶಾಲೆ ಈಗ ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಾಗಿದೆ ಎಂದು ಟ್ರಸ್ಟ್‌ ಅಧ್ಯಕ್ಷ ಪ್ರದೀಶ್ ಎಚ್.ಜೆ. ಸಂತಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.