ಚಿಕ್ಕಮಗಳೂರು: ಗ್ರಾಮ ಪಂಚಾಯಿತಿಗಳನ್ನು ಡಿಜಿಟಲ್ ಯುಗಕ್ಕೆ ತಕ್ಕಂತೆ ಸಬಲಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಬಿಎಸ್‌ಎನ್‌ಎಲ್ ಮೂಲಕ ಗ್ರಾಮ ಸಮೃದ್ಧ ಯೋಜನೆ ಅಡಿಯಲ್ಲಿ ಅತಿ ವೇಗದ ಇಂಟರ್‌ನೆಟ್ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಿದೆ. ರಾಜ್ಯದಲ್ಲಿ 205 ಗ್ರಾಮ ಪಂಚಾಯಿತಿಗಳು ಆಯ್ಕೆಯಾಗಿದ್ದು, ಈ ಪಟ್ಟಿಯಲ್ಲಿ ಚಿಕ್ಕಮಗಳೂರಿನ 8 ಗ್ರಾಮ ಪಂಚಾಯಿತಿಗಳು ಸ್ಥಾನ ಪಡೆದಿವೆ.
ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಗ್ರಾಮೀಣ ಜನರಿಗೆ ಎಲ್ಲಾ ಸೌಕರ್ಯಗಳನ್ನು ದೊರಕಿಸಲು ಸರ್ಕಾರಗಳು ಪ್ರಯತ್ನಿಸುತ್ತಿವೆ. ಯಾವುದೇ ಸವಲತ್ತು ಪಡೆಯಬೇಕಿದ್ದರೂ ಸೇವಾ ಸಿಂಧು ಪೋರ್ಟಲ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಇಂಟರ್‌ನೆಟ್ ಕಡಿತ, ಸರ್ವರ್ ಡೌನ್ ಸಮಸ್ಯೆಗಳ ಗ್ರಾಮೀಣ ಜನರನ್ನು ಸದಾ ಕಾಡುತ್ತಿವೆ. ಇದನ್ನು ತಪ್ಪಿಸಲು ತಪ್ಪಿಸಲು ಕೇಂದ್ರ ಸರ್ಕಾರ ಗ್ರಾಮ ಸಮೃದ್ಧ ಯೋಜನೆ ರೂಪಿಸಿದೆ.
ರಾಜ್ಯದಲ್ಲಿ 6,251 ಗ್ರಾಮ ಪಂಚಾಯಿತಿಗಳಿದ್ದು, ಈ ಪೈಕಿ 205 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ತಾಲ್ಲೂಕಿಗೆ ಒಂದರಂತೆ ಎಂಟು ಗ್ರಾಮ ಪಂಚಾಯಿತಿಗಳನ್ನು ಈ ಯೋಜನೆಯಡಿ ಅಯ್ಕೆ ಮಾಡಲಾಗಿದೆ. ಆಯ್ಕೆಯಾದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಕಚೇರಿ, ನ್ಯಾಯಬೆಲೆ ಅಂಗಡಿ, ಆಸ್ಪತ್ರೆ, ಶಾಲೆ, ಅಂಗನವಾಡಿಗಳಿಗೆ ವೇಗದ ಮತ್ತು ನಿರಂತರ ಇಂಟರ್‌ನೆಟ್ ಸೌಕರ್ಯ ದೊರಕಲಿದೆ.
ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಮತ್ತು ಶೇ 98ರಷ್ಟು ಇಂಟರ್‌ನೆಟ್ ಬಳಕೆ ಮಾಡುತ್ತಿರುವ ಗ್ರಾಮ ಪಂಚಾಯಿತಿಗಳನ್ನು ಗುರುತಿಸಿ, ಆಯ್ಕೆ ಮಾಡಲಾಗಿದೆ. ಪ್ರಾಯೋಗಿಕವಾಗಿ ಕೆಲವೇ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಲಾಗಿದ್ದು, ಈ ಯೋಜನೆ ಯಶಸ್ವಿಯಾದರೆ ದೇಶದ ಎಲ್ಲಾ ಪಂಚಾಯಿತಿಗಳಿಗೂ ವಿಸ್ತರಣೆ ಮಾಡಲು ಬಿಎಸ್‌ಎನ್‌ಎಲ್ ಚಿಂತನೆ ನಡೆಸಿದೆ ಎಂದು ಬಿಎಸ್‌ಎನ್‌ಎಲ್ ಅಧಿಕಾರಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿಗಳು ಮಾತ್ರವಲ್ಲದೇ ಕುರಿ ಸಾಕಾಣಿಕೆ, ಹಂದಿ ಸಾಕಾಣಿಕೆ, ಮೀನು ಸಾಕಾಣಿಕೆ ಮಾಡುವ ನೋಂದಾಯಿತ ಸಹಕಾರ ಸಂಘಗಳು, ಬೇಡಿಕೆ ಆಧರಿಸಿ ಶೇ 5ರಷ್ಟು ಮನೆಗಳಿಗೂ ಹೈಸ್ಪೀಡ್ ಇಂಟರ್‌ನೆಟ್ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಈ ಯೋಜನೆ ಅನುಷ್ಠಾನಗೊಂಡರೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಇಂಟರ್‌ನೆಟ್ ಸಂಪರ್ಕ ಸಮೃದ್ಧವಾಗಲಿದೆ. ಗ್ರಾಮೀಣ ಜನರಿಗೆ ಸೇವೆ ವೇಗವಾಗಿ ದೊರಕಲಿವೆಮಹದೇವ್ ಬಿಎಸ್‌ಎನ್‌ಎಲ್ ಉಪಪ್ರಧಾನ ವ್ಯವಸ್ಥಾಪಕ ಮಹಾದೇವ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.