
ಕಡೂರು: ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 206ರ ಬೈಪಾಸ್ ಕಾಮಗಾರಿ ನಡೆಯುತ್ತಿದ್ದು ಇದರಿಂದಾಗಿ ಎರಡು ವರ್ಷಗಳಿಂದ ಹಲವು ಮನೆಯವರು ತೊಂದರೆ ಅನುಭವಿಸುತ್ತಿದ್ದಾರೆ.
ಹೆದ್ದಾರಿ ಕಾಮಗಾರಿ ಆರಂಭವಾದಾಗಿನಿಂದ ಪಟ್ಟಣದ ಹೊರವಲಯದ ವೆಂಕಟಲಕ್ಷ್ಮಮ್ಮ ನಗರ (ವಿ.ಎಲ್. ನಗರ) ಎರಡು ಹೋಳಾಗಿದೆ. ಗ್ರಾಮ ಮತ್ತು 25 ಮನೆಗಳ ನಡುವೆ ಹೆದ್ದಾರಿ ಹಾದು ಹೋಗಿದ್ದು, ಈ ಮನೆಗಳಿಗೆ ತೆರಳಲು ಜಾಗ ಇಲ್ಲದಂತಾಗಿದೆ.
ಸರ್ವಿಸ್ ರಸ್ತೆಗಿಂತ 10 ಅಡಿ ಕೆಳಗೆ ಈ ಮನೆಗಳಿದ್ದು, ಮನೆಗಳಿಗೆ ಹೋಗಲು ರಸ್ತೆ ಮಾಡಿಕೊಟ್ಟಿಲ್ಲ. ತಾತ್ಕಾಲಿಕವಾಗಿ ರಸ್ತೆ ಮಾಡಲು ಪ್ರಾಧಿಕಾರದವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ನಿವಾಸಿಗಳು.
ತಂಗಲಿ ಗ್ರಾಮ ಪಂಚಾಯಿತಿ ಹಲವಾರು ಬಾರಿ ಅಲೆದಾಡಿದ್ದೇವೆ, ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ವಿಸ್ ರಸ್ತೆಯ ಪಕ್ಕದಲ್ಲೇ ಇರುವ ರಾಜಕಾಲುವೆ ಗಿಡಗಂಟಿಗಳಿಂದ ತುಂಬಿದ್ದು, ಮಳೆಯಾದಾಗ ಕಾಲುವೆಯ ಮನೆಗಳಿಗೆ ನುಗ್ಗುತ್ತದೆ. ಮೂರು ಅಡಿ ಅಗಲದ ಸಿಮೆಂಟ್ ಕಟ್ಟೆಯ ಮೇಲೆ ನಡೆದುಕೊಂಡು ನಿವಾಸಿಗಳು ಮನೆಗಳಿಗೆ ತೆರಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರಿಸುತ್ತಾರೆ.
‘ಎರಡು ವರ್ಷಗಳಿಂದ ನಾವು ತೊಂದರೆ ಅನುಭವಿಸುತ್ತಿದ್ದೇವೆ. ತಾತ್ಕಾಲಿಕವಾಗಿ ರಸ್ತೆ ನಿರ್ಮಿಸಿಕೊಡಿ ಎಂದು ಗ್ರಾಮ ಪಂಚಾಯಿತಿಯವರನ್ನು ಕೇಳಿ ಕೇಳಿ ಸಾಕಾಗಿದೆ’ ಎಂದು ಇಲ್ಲಿನ ನಿವಾಸಿಗಳು ಅಳಲು ತೋಡಿಕೊಳ್ಳುತ್ತಾರೆ.
ಹೆದ್ದಾರಿ ಪ್ರಾಧಿಕಾರ, ಗ್ರಾಮ ಪಂಚಾಯಿತಿಯವರಿಗೆ ನಮ್ಮ ಗೋಳು ಕೇಳಿಸುತ್ತಿಲ್ಲ. ಹೀಗಾದರೆ ನಾವು ಬದುಕುವುದು ಹೇಗೆ?
ರಾಧಾ ಪ್ರಕಾಶ್, ವಿ.ಎಲ್.ನಗರ ನಿವಾಸಿ
ಹೆದ್ದಾರಿ ಪ್ರಾಧಿಕಾರದವರು ಕಾಮಗಾರಿ ಮುಗಿಸಿದ ನಂತರವೇ ಗ್ರಾ.ಪಂ.ನಿಂದ ರಸ್ತೆ ನಿರ್ಮಿಸಬಹುದು. ಈ ಕುರಿತು ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ. ತಾತ್ಕಾಲಿಕ ವ್ಯವಸ್ಥೆ ಮಾಡಲಾಗುವುದು.
ಸುನಿಲ್, ಪಿಡಿಒ, ತಂಗಲಿ ಗ್ರಾ.ಪಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.