ADVERTISEMENT

ಮಾನವ– ಪ್ರಾಣಿ ಸಂಘರ್ಷ ತಡೆಗೆ ಕ್ರಮ: ಮುಖ್ಯಮಂತ್ರಿ ಸೂಚನೆ: ಶಾಸಕ ಟಿ.ಡಿ.ರಾಜೇಗೌಡ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 5:20 IST
Last Updated 16 ನವೆಂಬರ್ 2025, 5:20 IST
ಟಿ.ಡಿ.ರಾಜೇಗೌಡ
ಟಿ.ಡಿ.ರಾಜೇಗೌಡ   

ನರಸಿಂಹರಾಜಪುರ: ಕಾಡಂಚಿನ ಪ್ರದೇಶಗಳಲ್ಲಿ ಮಾನವ– ಪ್ರಾಣಿ ಸಂಘರ್ಷ ತಡೆಗಟ್ಟಲು ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ ಸಮ್ಮುಖದಲ್ಲಿ ಗುರುವಾರ ನಡೆದ ಅರಣ್ಯಾಧಿಕಾರಿ, ಹಣಕಾಸು ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಸೂಚನೆ ನೀಡಿದ್ದಾರೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಈ ಬಗ್ಗೆ ‘ಪ್ರಜಾವಾಣಿ:ಯೊಂದಿಗೆ ಮಾತನಾಡಿದ ಅವರು, ‘ಮಾನವ–ಪ್ರಾಣಿ ಸಂಘರ್ಷ ತಡೆಯಬೇಕು. ರೈತರು ಬೆಳೆದ ಬೆಳೆ ಕಾಡು ಪ್ರಾಣಿಗಳಿಂದ ನಾಶವಾಗದಂತೆ ಕ್ರಮ ಕೈಗೊಳ್ಳಬೇಕು. ಕಾಡು ಪ್ರಾಣಿಗಳ ದಾಳಿಯಿಂದ ರೈತರಿಗೆ ಗಾಯಗಳಾದರೆ ಅಥವಾ ಜೀವಹಾನಿಯಾದರೆ ಪರಿಹಾರ ಕೊಡುವುದಕ್ಕಿಂತ ದಾಳಿ ನಡೆಯದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ. ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ಸೋಲಾರ್ ಟೆಂಟಕಲ್ ಬೇಲಿನಿರ್ಮಾಣ ಮಾಡಬೇಕು. ಆನೆ ಕಾರ್ಯಪಡೆಯ (ಎಲಿಫೆಂಟ್ ಟಾಕ್ಸ್ ಫೋರ್ಸ್) ಘಟಕಗಳನ್ನು ಹೆಚ್ಚು ಸ್ಥಾಪಿಸಬೇಕು ಎಂದು ಸೂಚಿಸಿದ್ದಾರೆ’ ಎಂದರು.

‘ಸೋಲಾರ್ ಟೆಂಟಕಲ್ ಬೇಲಿ ಹಾಗೂ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಬೇಕಾಗಿರುವ ₹300 ರಿಂದ ₹500 ಕೋಟಿ ಅನುದಾನವನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಹಣಕಾಸು ಅಧಿಕಾರಿಗಳಿಗೆ ಸೂಚಿಸಿದ್ದಾರೆ. 15 ಮಂದಿ ಅರಿವಳಿಕೆ ತಜ್ಞರನ್ನು ನೇಮಿಸುವಂತೆಯೂ ಸೂಚಿಸಿದ್ದಾರೆ. ಕುದುರೆಮುಖ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿರುವವರಿಗೆ ಹೆಚ್ಚುವರಿ ಪರಿಹಾರದ ಹಣವನ್ನು ಬಿಡುಗಡೆ ಮಾಡಲು ಕ್ರಮಕೈಗೊಳ್ಳುವಂತೆ, ಈ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳು ರೈತರ ಜಮೀನಿಗೆ ಬರದಂತೆ ಶಾಶ್ವತ ಪರಿಹಾರವಾಗಿ 50 ಕಿ.ಮೀ ರೈಲ್ವೆ ಬ್ಯಾರಿಕೇಡನ್ನು ಹಂತ ಹಂತವಾಗಿ ನಿರ್ಮಿಸಲು ಕ್ರಮಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ’ ಎಂದರು.

ADVERTISEMENT

‘ಕಾಡಂಚಿನ ಗ್ರಾಮಗಳಲ್ಲಿ ಉಪಟಳ ನೀಡುವ ಕಾಡಾನೆಗಳು, ಹುಲಿ, ಕಾಡುಕೋಣಗಳನ್ನು ಸೆರೆ ಹಿಡಿದು ಸ್ಥಳಾಂತರಿಸಬೇಕು. ಅರಣ್ಯ ಮತ್ತು ರೈತರ ಜಮೀನಿನ ಗಡಿಭಾಗಗಳಲ್ಲಿ ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಕ್ರಮ, ನಿವೃತ್ತ ಯೋಧರನ್ನು ಆದ್ಯತೆ ಮೇಲೆ ಕೆಲಸಕ್ಕೆ ನೇಮಿಸಿಕೊಳ್ಳುವಂತೆ ಸೂಚಿಸಿದ್ದಾರೆ’ ಎಂದರು.

ಸಭೆಯಲ್ಲಿ ಶಾಸಕರಾದ ಟಿ.ಡಿ.ರಾಜೇಗೌಡ, ನರೇಂದ್ರಸ್ವಾಮಿ, ಅರಣ್ಯ ಹಾಗೂ ಹಣಕಾಸು ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು ಎಂದು ಅವರು ತಿಳಿಸಿದರು.