ADVERTISEMENT

ದಂತ ವೈದ್ಯನಿಂದಲೇ ಪತ್ನಿಯ ಹತ್ಯೆ

ಗೃಹಿಣಿ ಕವಿತಾ ಬರ್ಬರ ಕೊಲೆ, ಡಾ.ರೇವಂತ್‌ ಆತ್ಮಹತ್ಯೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 13:26 IST
Last Updated 23 ಫೆಬ್ರುವರಿ 2020, 13:26 IST
ಡಾ.ರೇವಂತ್‌
ಡಾ.ರೇವಂತ್‌   

ಚಿಕ್ಕಮಗಳೂರು: ಜಿಲ್ಲೆಯ ಕಡೂರು ಪಟ್ಟಣದ ಲಕ್ಷ್ಮೀಶನಗರದಲ್ಲಿ ಇದೇ 17ರಂದು ಗೃಹಿಣಿ ಕವಿತಾ (31) ಬರ್ಬರ ಹತ್ಯೆ ಪತಿ ದಂತ ವೈದ್ಯ ರೇವಂತ್‌ನಿಂದಲೇ ನಡೆದಿದ್ದು, ಬಚಾವಾಗಲು ಸಾಧ್ಯವಾಗದೆ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತಿ ಅಕ್ರಮ ಸಂಬಂಧವೇ ಅವಘಡಗಳಿಗೆ ಕಾರಣ ಎನ್ನಲಾಗಿದೆ.

ಕವಿತಾಗೆ ಚುಚ್ಚುಮದ್ದು (ಅರಿವಳಿಕೆ, ವಿಷ...) ನೀಡಿ ಪ್ರಜ್ಞೆ ತಪ್ಪಿಸಿ ಕತ್ತು ಸೀಳಿ ಕೊಲೆ ಮಾಡಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿದೆ. ಕೊಠಡಿಯೊಳಕ್ಕೆ ಬಲವಂತವಾಗಿ ನುಗ್ಗಿರುವ, ಕೃತ್ಯದ ನಡೆದ ಕೋಣೆಯಲ್ಲಿ ಪ್ರತಿರೋಧದ ಕುರುಹುಗಳು ಕಂಡು ಬಂದಿಲ್ಲ. ಕೃತ್ಯ ಮರೆಮಾಚುವ ಉದ್ದೇಶದಿಂದ ಶಸ್ತ್ರಚಿಕಿತ್ಸೆಗೆ ಬಳಸುವ ಕೈಗವುಸು ಮತ್ತು ಮ್ಯಾಟ್‌ ಬಳಸಲಾಗಿದೆ.

ಸಿ.ಸಿ.ಟಿವಿ ಜಾಡು

ADVERTISEMENT

17ರಂದು ಸಂಜೆ 4.30ರ ಹೊತ್ತಿಗೆ ಸಾವು ಸಂಭವಿಸಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿದೆ. ಸಂಜೆ 4.30ರ ಹೊತ್ತಿಗೆ ಶಾಲೆಯಿಂದ ಬರುತ್ತಿದ್ದ ಪುತ್ರನನ್ನು ಎಂದಿನಂತೆ ತಾಯಿ ಇಳಿಸಿಕೊಳ್ಳಲು ಬಂದಿಲ್ಲದಿರುವುದು, ಮನೆಯಲ್ಲಿ ಪುತ್ರನಿಗೆ ಅಮ್ಮ ಕಾಣಿಸದಿರುವುದು, ಮತ್ತು ಡಾ.ರೇವಂತ್‌ ಆರು ತಿಂಗಳ ಕಂದಮ್ಮನನ್ನು ಕೋಣೆಯಲ್ಲೇ ಬಿಟ್ಟು ಶಾಲೆಯಿಂದ ಬಂದ ಪುತ್ರನನ್ನು ಕಾರಿನಲ್ಲಿ ಕರೆದೊಯ್ದಿರುವುದನ್ನು ಸಿ.ಸಿ.ಟಿವಿ ದೃಶ್ಯಾವಳಿ ಮತ್ತು ಸ್ಥಳೀಯರ ವಿಚಾರಣೆಯಿಂದ ಪೊಲೀಸರು ಪತ್ತೆ ಮಾಡಿದ್ದಾರೆ.

ರೇವಂತ್‌ ನಿವಾಸವು ಜನನಿಬಿಡ ಪ್ರದೇಶದಲ್ಲಿದೆ. ಕೃತ್ಯ ನಡೆದ ದಿನ ಮಧ್ಯಾಹ್ನ 3.30ರಿಂದ ಸಂಜೆ 6.30ರವರೆಗೆ ರೇವಂತ್‌ ಹೊರತಾಗಿ ಬೇರಾರೂ ಆ ಮನೆಗೆ ಬಂದು ಹೋಗಿರುವುದು ಕಂಡುಬಂದಿಲ್ಲ. ಮನೆಯ ಹಿಂಬದಿಯ ಬಾಗಿಲು ತೆಗೆಯಲು ಕೀಲಿ ಗೊಂಚಲಿನ ಪಟ್ಟಿಯಿಂದ ಸರಿಯಾದ ಕೀಲಿಯನ್ನೇ ಬಳಸಿರುವುದು ಪೊಲೀಸರಿಗೆ ತನಿಖೆಯಲ್ಲಿ ಗೊತ್ತಾಗಿದೆ.

ದುಷ್ಕರ್ಮಿಗಳು ಪತ್ನಿ ಕೊಲೆ ಮಾಡಿ, 115 ಗ್ರಾಂ ಚಿನ್ನಾಭರಣ, 2.5 ಕೆ.ಜಿ ಬೆಳ್ಳಿ ಸಾಮಾನು (ಒಟ್ಟು ₹ 4.5 ಲಕ್ಷ ಮೌಲ್ಯ) ದೋಚಿದ್ದಾರೆ ಎಂದು ಡಾ.ರೇವಂತ್‌ ದೂರು ದಾಖಲಿಸಿದ್ದ.

ತನಿಖೆ ದಿಕ್ಕು ತಪ್ಪಿಸಲು ಮನೆಯಲ್ಲಿ ಕಳವಾಗಿದೆ ಎಂದು ರೇವಂತ್‌ ನಾಟಕ ಮಾಡಿರುವುದಾಗಿ ಗೊತ್ತಾಗಿತ್ತು. ಪ್ರಕರಣದ ತನಿಖೆ ಚುರುಕುಗೊಳಿಸಿದ್ದ ಪೊಲೀಸರು ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದ್ದರು. ಇನ್ನು ರೇವಂತ್‌ ವಿಚಾರಣೆಗೆ ಸಿದ್ಧತೆ ಮಾಡಿಕೊಂಡಿದ್ದರು. ರೈಲಿಗೆ ಸಿಲುಕಿ ಇದೇ 22ರಂದು ರೇವಂತ್‌ ಮೃತಪಟ್ಟಿದ್ದ.

ಮಹಿಳೆಯೊಂದಿಗೆ ಅಕ್ರಮ ಸಂಬಂಧ

ರೇವಂತ್‌ಗೆ ಮತ್ತೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇತ್ತು ಎಂಬದು ಪೊಲೀಸರು ಕಲೆ ಹಾಕಿರುವ ಪುರಾವೆಯಲ್ಲಿ ಗೊತ್ತಾಗಿದೆ.

ಮೊಬೈಲ್‌ ಫೋನ್‌ ಪರಿಶೀಲಿಸಿದಾಗ ಸಾಕ್ಷ್ಯ ಲಭಿಸಿದೆ. ಅಕ್ರಮ ಸಂಬಂಧ ವಿಷಯದಲ್ಲಿ ಪತಿ–ಪತ್ನಿ ನಡುವೆ ವಿರಸ ಉಂಟಾಗಿತ್ತು. ಎರಡ್ಮೂರು ತಿಂಗಳ ಹಿಂದೆ ಜಗಳ ಆಗಿತ್ತು. ಆ ಸಂದರ್ಭದಲ್ಲಿ ಕವಿತಾ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಸಾಕ್ಷಿದಾರರರು ಹೇಳಿದ್ದಾರೆ.

ಅಕ್ರಮ ಸಂಬಂಧಕ್ಕೆ ಪತ್ನಿ ಅಡ್ಡಿ ಪಡಿಸುತ್ತಾರೆಂಬ ಉದ್ದೇಶದಿಂದ ಸಂಚು ಹೂಡಿ ಆತನೇ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ದಂತ ವೈದ್ಯನೊಂದಿಗೆ ಸ್ನೇಹ, ಸಲುಗೆಯಿದ್ದ ಮಹಿಳೆ ಆತ್ಮಹತ್ಯೆ

ಡಾ.ರೇವಂತ್‌ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಬೆಂಗಳೂರಿನ ರಾಜರಾಜೇಶ್ವರಿ ನಗರದ ಹರ್ಷಿತಾ (32) ಎಂಬವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೇವಂತ್‌ ಮತ್ತು ಹರ್ಷಿತಾಗೂ ಪರಿಚಯ ಇತ್ತು ಎನ್ನಲಾಗಿದೆ.

ಹರ್ಷಿತಾ ಅವರು ಸುಮಾರು ಏಳು ವರ್ಷಗಳ ಹಿಂದೆ ಸಂಬಂಧಿಕರೊಬ್ಬರೊಂದಿಗೆ ರೇವಂತ್‌ ಮನೆಯಲ್ಲಿ ಬಾಡಿಗೆಗೆ ಇದ್ದರು. ಆ ಸಂದರ್ಭದಲ್ಲಿ ಇಬ್ಬರ ನಡುವೆ ಸ್ನೇಹ , ಸಲಗೆ ಬೆಳೆದಿತ್ತು.

ರೇವಂತ್‌ಗೆ ಕವಿತಾ ಅವರೊಂದಿಗೆ ಮತ್ತು ಹರ್ಷಿತಾಗೆ ಬೆಂಗಳೂರಿನ ಬಿಎಂಟಿಸಿ ನೌಕರರೊಬ್ಬರೊಂದಿಗೆ ಮದುವೆಯಾಗಿತ್ತು. ಮದುವೆಯ ನಂತರವೂ ರೇವಂತ್‌ ಮತ್ತು ಹರ್ಷಿತಾ ಅವರ ಸ್ನೇಹ, ಸಲುಗೆ ಮುಂದುವರಿದಿತ್ತು. ಫೋನ್‌ನಲ್ಲಿ ಹರುಟುತ್ತಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.