ಪ್ರಾತಿನಿಧಿಕ ಚಿತ್ರ
ಚಿಕ್ಕಮಗಳೂರು: ಪತಿಯನ್ನು ಹತ್ಯೆಗೈದ ಆರೋಪದಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರನಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಕಠಿಣ ಜೀವಾವಧಿ ಶಿಕ್ಷೆ ಹಾಗೂ ₹ 60 ಸಾವಿರ ದಂಡ ವಿಧಿಸಿದೆ.
ಸಖರಾಯಪಟ್ಟಣ ಸಮೀಪದ ದೊಡ್ಡಿಹಟ್ಟಿಯಲ್ಲಿ ಹುಲಿಕೆರೆ ನಿವಾಸಿ ಪ್ರದೀಪ ಮತ್ತು ಅವರ ಪತ್ನಿ ರಾಗಿಣಿ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಶ್ರೀನಿವಾಸ ಎಂಬಾತನೊಂದಿಗೆ ಪ್ರದೀಪ ಗಾರೆ ಕೆಲಸ ಮಾಡಿಕೊಂಡಿದ್ದರು. ರಾಗಿಣಿ ಮತ್ತು ಶ್ರೀನಿವಾಸ ನಡುವೆ ಸಂಬಂಧ ಬೆಳೆದಿತ್ತು ಎನ್ನಲಾಗಿದೆ.
ಈ ವಿಷಯ ಪ್ರದೀಪ ಅವರಿಗೆ ಗೊತ್ತಾದ ಬಳಿಕ ಜಗಳವಾಗಿದ್ದು, 2020ರ ನ.20ರಂದು ರಾಗಿಣಿ ಹಾಗೂ ಶ್ರೀನಿವಾಸ ಸೇರಿ ಪ್ರದೀಪ ಅವರ ಕುತ್ತಿಗೆಗೆ ದುಪಟ್ಟದಿಂದ ಬಿಗಿದು ಕೊಲೆ ಮಾಡಿದ್ದಾರೆ. ಸಹಜ ಸಾವು ಎಂದು ಬಿಂಬಿಸಲು ಶವವನ್ನು ಮಂಚದ ಮೇಲೆ ಮಲಗಿಸಿದ್ದರು. ಹತ್ಯೆಗೆ ಬಳಸಿದ್ದ ಬಟ್ಟೆಗಳನ್ನು ಚೆಟ್ಟಿಪಾಳ್ಯ ಗೇಟ್‌ನ ಕೂಡುಹಳ್ಳಿ ಸೇತುವೆ ಕೆಳೆಗೆ ಎಸೆದಿದ್ದರು ಎಂದು ಕಡೂರು ವೃತ್ತದ ಇನ್‌ಸ್ಪೆಕ್ಟರ್ ಡಿ.ಎಸ್.ಮಂಜುನಾಥ್ ನ್ಯಾಯಾಲಯಕ್ಕೆ ದೋಷಾರೋಪ ಸಲ್ಲಿಸಿದ್ದರು. ವಿಚಾರಣೆ ವೇಳೆ ಎಎಸ್‌ಐ ದೇವೇಂದ್ರಕುಮಾರ್ ನ್ಯಾಯಾಲಯಕ್ಕೆ ಸಾಕ್ಷ್ಯಗಳನ್ನು ಹಾಜರುಪಡಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶೆ ಬಿ.ಸಿ.ಭಾನುಮತಿ ಅವರು, ಇಬ್ಬರು ಆರೋಪಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದ್ದಾರೆ. ದಂಡ ಪಾವತಿಸದಿದ್ದರೆ ಹೆಚ್ಚುವರಿ 6 ತಿಂಗಳು ಶಿಕ್ಷೆ ಅನುಭವಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ಎಚ್.ಎಸ್.ಲೋಹಿತಾಶ್ವಾಚಾರ್ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.