ಚಿಕ್ಕಮಗಳೂರು: ನಗರಕ್ಕೆ ದಿನದ 24 ಗಂಟೆಯೂ ನೀರು ಪೂರೈಸಲು ಯಗಚಿ ಜಲಾಶಯಕ್ಕೆ ಮತ್ತೊಂದು ಜಾಕ್‌ವೆಲ್ ಅಳವಡಿಸಲು ಮತ್ತು ರಾಮೇಶ್ವರ ಕೆರೆಯಿಂದ ನೀರು ತರಲು ಆಲೋಚನೆ ನಡೆಸಲಾಗಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ಹಿರೇಮಗಳೂರು ಕೆರೆಗೆ ಬಾಗಿನ ಸಮರ್ಪಿಸಿ ಮಾತನಾಡಿದ ಅವರು, ‘ನಗರದಲ್ಲಿ 40 ಸಾವಿರ ಜನಸಂಖ್ಯೆ ಇದ್ದಾಗ ಹಿರೇಮಗಳೂರು ಕೆರೆಯಿಂದ ನೀರು ಪೂರೈಸಲಾಗುತ್ತಿತ್ತು. ಪಂಪ್ ಅಳವಡಿಸದೆ ಗುರುತ್ವಾಕರ್ಷಣೆಯಿಂದ ನೀರು ನಗರಕ್ಕೆ ಹರಿದು ಬರುತ್ತಿದೆ’ ಎಂದರು.
‘2002ರಿಂದ ಬೇಲೂರಿನ ಯಗಚಿ ಜಲಾಶಯದಿಂದ ನೀರು ತರಲಾಗುತ್ತಿದೆ. ಈಗ ಇದಕ್ಕೇ ಅಮೃತ್ ಯೋಜನೆ ಜೋಡಿಸಲಾಗಿದೆ. ದಿನದ 24 ಗಂಟೆಯೂ ನೀರು ಪೂರೈಸಲು ಯೋಚಿಸಲಾಗಿದೆ. ಆದರೆ, ಜಲಾಶಯಕ್ಕೆ ಹೊಸದಾಗಿ ಜಾಕ್‌ವೆಲ್ ಅಳವಡಿಸುವ ಅಗತ್ಯವಿದ್ದು, ಈ ಕುರಿತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೂ ಮನವಿ ಮಾಡಲಾಗಿದೆ’ ಎಂದು ಹೇಳಿದರು.
‘ಹಿರೇಕೊಳಲೆ ಕೆರೆ ಭರ್ತಿಯಾದರೆ ಬಸವನಹಳ್ಳಿ ಕೆರೆ, ಕೋಟೆ ಕೆರೆ, ಹಿರೇಮಗಳೂರು ಕೆರೆ, ಕರ್ತೀಕೆರೆ ಮೂಲಕ ಯಗಚಿ ಜಲಾಶಯಕ್ಕೆ ನೀರು ತಲುಪುತ್ತಿತ್ತು. ಮಧ್ಯದಲ್ಲಿ ರಾಮೇಶ್ವರ ಕೆರೆ ನಿರ್ಮಿಸಲಾಗಿದೆ. ಈ ಕೆರೆಯ ಅಚ್ಚುಕಟ್ಟು ಪ್ರದೇಶ ಕಡಿಮೆಯಾಗುತ್ತಿದೆ. ಆದ್ದರಿಂದ ಈ ಕೆರೆಯ ನೀರನ್ನು ನಗರದ ಬಡಾವಣೆಗೆ ತರಲು ಅವಕಾಶ ಇದೆ. ಈ ಕುರಿತು ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಿದ್ದೇನೆ’ ಎಂದು ವಿವರಿಸಿದರು.
ಹಿರೇಕೊಳಲೆ ಕೆರೆ ಮತ್ತು ಯಗಚಿ ಜಲಾಶಯಗಳು ಇದೇ ಮೊದಲ ಬಾರಿಗೆ ಜೂನ್‌ನಲ್ಲಿ ಭರ್ತಿಯಾಗಿದೆ. ಇನ್ನೂ ಎರಡು ವರ್ಷ ಮಳೆ ಬಾರದಿದ್ದರೂ ನಗರಕ್ಕೆ ಕುಡಿಯುವ ನೀರಿನ ತೊಂದರೆ ಇರುವುದಿಲ್ಲ ಎಂದರು.
ಹಿರೇಕೊಳಲೆ ಕೆರೆ ಪ್ರವಾಸಿ ತಾಣವೂ ಆಗಿದ್ದು, ಆರ್ಚ್, ಚೈನ್‌ಲಿಂಕ್ ಬೇಲಿ, ಶೌಚಾಲಯಗಳನ್ನು ಅದಷ್ಟು ಬೇಗ ನಿರ್ಮಿಸಲಾಗುವುದು ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್, ಉಪಾಧಕ್ಷೆ ಅನು ಮಧುಕರ್, ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ತಹಶೀಲ್ದಾರ್ ರೇಷ್ಮಾಶೆಟ್ಟಿ, ಹಿರೇಕೊಳಲೆ ಗ್ರಾಮ ಪಂಚಾಯಿತಿ ಅಧಕ್ಷೆ ಕವಿತಾ, ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.