ADVERTISEMENT

ಅಕ್ರಮ ದತ್ತು: 3 ಮಕ್ಕಳ ರಕ್ಷಣೆ

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಜಿ.ಸುಬ್ರಹ್ಮಣ್ಯ

​ಪ್ರಜಾವಾಣಿ ವಾರ್ತೆ
Published 22 ಮೇ 2021, 4:20 IST
Last Updated 22 ಮೇ 2021, 4:20 IST

ಚಿಕ್ಕಮಗಳೂರು: ಅಕ್ರಮವಾಗಿ ದತ್ತು ಪಡೆದಿದ್ದ ಮೂವರು ಮಕ್ಕಳನ್ನು ರಕ್ಷಿಸಿ ದತ್ತು ಕೇಂದ್ರಗಳಲ್ಲಿ ಇರಿಸಲಾಗಿದೆ. ಜಿಲ್ಲೆಯಲ್ಲಿ ಎರಡು ಮತ್ತು ಉಡುಪಿ ಜಿಲ್ಲೆಯಲ್ಲಿ ಒಂದು ಮಗುವನ್ನು ರಕ್ಷಿಸಲಾಗಿದೆ.

ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾ.22ರಂದು ಬಂದಿದ್ದ ಪತ್ರವೊಂದನ್ನು ಆಧರಿಸಿ ಪ್ರಾಥಮಿಕ ಪರಿಶೀಲನೆ ನಡೆಸಿದಾಗ, ಕೊಪ್ಪದ ಇಂದಿರಾನಗರದ ವನಜಾ, ಭಂಡಿಗಡಿಯ ಕೆ.ಎಂ.ಜಾಹಿರಾ ಮತ್ತು ಉಡುಪಿ ಜಿಲ್ಲೆಯ ಹಂಗಾರಕಟ್ಟೆಯ ಶಾಹಿಸ್ತಾ ಅವರು ಮಕ್ಕಳನ್ನು ಅಕ್ರಮವಾಗಿ ದತ್ತು ಪಡೆದಿರುವುದು ಪತ್ತೆಯಾಗಿದೆ.

‘ಎರಡು ಹೆಣ್ಣು ಮತ್ತು ಒಂದು ಗಂಡು ಮಗುವನ್ನು ರಕ್ಷಿಸಲಾಗಿದೆ. ಉಡುಪಿ ಜಿಲ್ಲೆಯ ಹಂಗಾರಕಟ್ಟೆಯಲ್ಲಿದ್ದ ಮಗುವನ್ನು ಅಲ್ಲಿನ ರಕ್ಷಣಾ ಘಟಕದವರು ರಕ್ಷಿಸಿ, ದತ್ತು ಕೇಂದ್ರದಲ್ಲಿ ಇರಿಸಿದ್ದಾರೆ. ಕೊಪ್ಪ ಮತ್ತು ಉಡುಪಿ ಜಿಲ್ಲೆಯ ಸಂಬಂಧಪಟ್ಟ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಕೊಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞ ಡಾ.ಜಿ.ಎಸ್‌.ಬಾಲಕೃಷ್ಣ ಅವಧಿಯಲ್ಲಿ ಅವ್ಯಾಹತವಾಗಿ ಮಕ್ಕಳ ಮಾರಾಟ ನಡೆದಿದೆ. 2020ರ ಮೇ 9 (ಜಾಹಿರಾ), ಜೂನ್‌ 5(ಶಾಹಿಸ್ತಾ) ಮತ್ತು ಸೆ. 8 ರಂದು(ವನಜಾ) ಹೆರಿಗೆಯಾದಂತೆ ಸುಳ್ಳು ದಾಖಲೆ ಸೃಷ್ಟಿಸಿ, ಜನನ ಪತ್ರ ಪಡೆಯಲಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಬಂದಿದ್ದ ಪತ್ರದಲ್ಲಿ ಕೋರಲಾಗಿತ್ತು.

ಕೊಪ್ಪ ಠಾಣೆಯಲ್ಲಿ ವನಜಾ, ಕೀನ್ಯಾ ನಾಯಕ್‌, ಕೆ.ಎಂ.ಜಾಹಿರಾ, ಶಕುಲ್‌ ಅಹಮದ್‌, ಯೋಗೇಶ್‌, ಕವಿತಾ ಮತ್ತು ಇತರ ಇಬ್ಬರು ಸಹಿತ ಎಂಟು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.