ADVERTISEMENT

ಚಿಕ್ಕಮಗಳೂರು: ಹೆದ್ದಾರಿ ಬದಿ ಅಡ್ಡಾದಿಡ್ಡಿ ಗುಡ್ಡ ಅಗೆತ

ಮೂಡಿಗೆರೆ–ಕೊಟ್ಟಿಗೆಹಾರ ನಡುವಿನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಮಣ್ಣು ದಂಧೆ

ವಿಜಯಕುಮಾರ್ ಎಸ್.ಕೆ.
Published 30 ಜನವರಿ 2026, 8:16 IST
Last Updated 30 ಜನವರಿ 2026, 8:16 IST
ಮೂಡಿಗೆರೆ–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂಡಿಗೆರೆ ತಾಲ್ಲೂಕಿನ ಸಬ್ಲಿ ಬಳಿ ಗುಡ್ಡ ಕೊರೆದು ಮಣ್ಣು ತೆಗೆದಿರುವುದು
ಮೂಡಿಗೆರೆ–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂಡಿಗೆರೆ ತಾಲ್ಲೂಕಿನ ಸಬ್ಲಿ ಬಳಿ ಗುಡ್ಡ ಕೊರೆದು ಮಣ್ಣು ತೆಗೆದಿರುವುದು   

ಚಿಕ್ಕಮಗಳೂರು: ಮಳೆಗಾಲದಲ್ಲಿ ಭೂಕುಸಿತದ ಆತಂಕ ಎದುರಿಸುವ ಮಲೆನಾಡಿನಲ್ಲಿ ಬೇಸಿಗೆಯಲ್ಲಿ ಗುಡ್ಡಗಳನ್ನೇ ಅಗೆದು ಮಣ್ಣು ಸಾಗಿಸುವ ದಂಧೆ ನಿರಂತರವಾಗಿ ನಡೆಯುತ್ತಿದೆ. ಮೂಡಿಗೆರೆ–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅಡ್ಡಾದಿಡ್ಡಿಯಾಗಿ ಗುಡ್ಡ ಕೊರೆದು ಮಣ್ಣು ತೆಗೆಯಲಾಗಿದ್ದು, ವಾಹನ ಸವಾರರಲ್ಲಿ ಭೀತಿ ಹುಟ್ಟಿಸಿದೆ.

ಪರಿಸರ ಸೂಕ್ಷ್ಮ ಪ್ರದೇಶ ಹಾಗೂ ಚಾರ್ಮಾಡಿ ಘಾಟಿ ಆರಂಭದ ಸ್ಥಳದ ಕೂಗಳತೆ ದೂರದಲ್ಲಿ ರಸ್ತೆ ಬದಿಯಲ್ಲೇ ಗುಡ್ಡಗಳನ್ನು ಬಗೆದು ಮಣ್ಣು ಮಾರಾಟ ಮಾಡುವ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಮೂಡಿಗೆರೆಯಿಂದ ಕೊಟ್ಟಿಗೆಹಾರ ತನಕ ರಾಷ್ಟ್ರೀಯ ಹೆದ್ದಾರಿಯಲ್ಲಿ(ವಿಲ್ಲಪುರಂ–ಮಂಗಳೂರು–73) ಸಾಗಿದರೆ ಒಂದೆಡೆ ರಸ್ತೆ ಬದಿಯ ಗುಡ್ಡಗಳೇ ಮಾಯವಾಗುತ್ತಿದ್ದರೆ, ಮತ್ತೊಂದೆಡೆ ಅದೇ ರಸ್ತೆ ಬದಿಯ ಗದ್ದೆಗಳಿಗೆ ಮಣ್ಣು ತುಂಬಿಸಲಾಗುತ್ತಿದೆ. ಗುಡ್ಡ ಮತ್ತು ಗದ್ದೆಯ ಸ್ವರೂಪ ಎರಡೂ ಬದಲಾಗುತ್ತಿವೆ.

2019ರಲ್ಲಿ ಮೂಡಿಗೆರೆ ತಾಲ್ಲೂಕಿನಲ್ಲಿ ಭಾರಿ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿತ್ತು. ಪ್ರತಿವರ್ಷ ಅಲ್ಲಲ್ಲಿ ಸಣ್ಣಪುಟ್ಟ ಭೂಕುಸಿತ ಉಂಟಾಗುತ್ತಲೇ ಇವೆ. ಭೂಕುಸಿತದ ಆತಂಕದಲ್ಲೇ ಮಲೆನಾಡಿನ ಜನ ಮಳೆಗಾಲ ಕಳೆಯುತ್ತಾರೆ.

ADVERTISEMENT

ಭಾರತೀಯ ಭೂಸರ್ವೇಕ್ಷಣಾ ಸಂಸ್ಥೆಯ(ಜಿಎಸ್‌ಐ) ತಂಡ ಕೂಡ ಕಳೆದ ವರ್ಷ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಭೂಕುಸಿತದ ಸಂಭವನೀಯ ಪ್ರದೇಶಗಳ ರಾಷ್ಟ್ರೀಯ ದಾಖಲೀಕರಣ (ಎನ್‌ಎಲ್‌ಎಸ್‌ಎಂ) ಪ್ರಕಾರ ಜಿಲ್ಲೆಯಲ್ಲಿ ಶೇ 4.60ರಷ್ಟು ಪ್ರದೇಶವು ಹೆಚ್ಚು ಅಪಾಯದ ಸ್ಥಳಗಳು, ಶೇ 20.92ರಷ್ಟು ಮಧ್ಯಮ ಅಪಾಯದ ಸ್ಥಳಗಳು ಮತ್ತು ಶೇ 74.47ರಷ್ಟು ಪ್ರದೇಶವು ಕಡಿಮೆ ಸಾಧ್ಯತೆಗಳಿರುವ ಪ್ರದೇಶ ಎಂದು ಗುರುತಿಸಿದೆ. ಅಡ್ಡಾದಿಡ್ಡಿಯಾಗಿ ಗುಡ್ಡಗಳನ್ನು ಅಗೆದರೆ ಮಳೆಗಾಲದಲ್ಲಿ ಭೂಕುಸಿತ ಉಂಟಾಗಲಿದೆ ಎಂದೂ ವರದಿ ಸಲ್ಲಿಸಿತ್ತು.

ಅಂತಹ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಈಗ ಗುಡ್ಡ ಅಗೆಯುವ ಕೆಲಸ ನಿರಾತಂಕವಾಗಿ ನಡೆಯುತ್ತಿದೆ. ಸಬ್ಲಿ ಎಂಬ ಗ್ರಾಮದ ಬಳಿ ಇಡೀ ಗುಡ್ಡವೇ ಮಾಯವಾಗಿರುವುದು ಗೋಚರಿಸುತ್ತದೆ. ಈ ಗುಡ್ಡದ ಮೇಲೆ ಸಬ್ಲಿಯಮ್ಮ ದೇಗುಲವಿದೆ. 400ಕ್ಕೂ ಹೆಚ್ಚು ಕುಟುಂಬ ವಾಸಿಸುವ ಸಬ್ಲಿ ಊರಿಗೆ ಸಾಗುವ ರಸ್ತೆಯೂ ಗುಡ್ಡದ ಮೇಲೆಯೇ ಇದೆ. ಕೆಳಭಾಗದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಣ್ಣು ಬಗೆಯಲಾಗಿದ್ದು, ಮಳೆಗಾಲದಲ್ಲಿ ಮೇಲಿನ ರಸ್ತೆ ಮತ್ತು ದೇಗುಲ ಎರಡೂ ಕುಸಿಯುವ ಆತಂಕ ಸ್ಥಳೀಯರಲ್ಲಿದೆ.

ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು, ಅರಣ್ಯ ಇಲಾಖೆಯಾಗಲಿ, ಕಂದಾಯ ಇಲಾಖೆಯಾಗಲಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯಾಗಲಿ, ಪೊಲೀಸ್ ಅಧಿಕಾರಿಗಳಾಗಲಿ ಗುಡ್ಡ ಅಗೆಯುವ ಕಾರ್ಯವನ್ನು ತಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

‘ಮೂಡಿಗೆರೆಯಿಂದ ಕೊಟ್ಟಿಗೆಹಾರ ಕಡೆಗೆ ಸಾಗುವ ಹೆದ್ದಾರಿ ಬದಿಯಲ್ಲಿ ವಾಣಿಜ್ಯ ಚಟುವಟಿಕೆ ಹೆಚ್ಚಾಗುತ್ತಿದೆ. ರಸ್ತೆಯಿಂದ ನಾಲ್ಕೈದು ಅಡಿ ತಗ್ಗಿನಲ್ಲಿ ಗದ್ದೆಗಳಿವೆ. ಅವುಗಳನ್ನು ಎತ್ತರ ಮಾಡಲು ಗುಡ್ಡಗಳಿಂದ ಮಣ್ಣು ತರಲಾಗುತ್ತಿದೆ. ಗುಡ್ಡ ಅಗೆಯುವುದಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮಲೆನಾಡು ಉಳಿಯುವುದಿಲ್ಲ’ ಎಂದು ಅವರು ವಿವರಿಸುತ್ತಾರೆ.

ರಾತ್ರೋರಾತ್ರಿ ಮಣ್ಣು ಸಾಗಣೆ

ಮಣ್ಣು ಸಾಗಿಸುವ ಕಾರ್ಯ ದಂಧೆಯ ಸ್ವರೂಪ ಪಡೆದಿದೆ. ಒಂದು ಟಿಪ್ಪರ್‌ ಮಣ್ಣಿಗೆ ₹2 ಸಾವಿರ ದರ ನಿಗದಿ ಮಾಡಿಕೊಂಡು ಮಣ್ಣು ಅಗತ್ಯ ಇರುವ ಖಾಸಗಿ ಜಮೀನುಗಳಿಗೆ ಸುರಿಯಲಾಗುತ್ತಿದೆ. ‘ಮಣ್ಣು ಎಲ್ಲಿಂದ ತರುತ್ತಾರೆ ಎಂಬುದು ಗೊತ್ತಿಲ್ಲ. ಆದರೆ ಒಂದು ಲಾರಿ ಲೋಡ್ ಮಣ್ಣಿಗೆ ₹2 ಸಾವಿರ ಕೊಡುತ್ತಿದ್ದೇವೆ’ ಎಂದು ಮಣ್ಣು ಸುರಿಸುತ್ತಿರುವ ವ್ಯಕ್ತಿಗಳು ಹೇಳುತ್ತಾರೆ. ರಾತ್ರಿ ವೇಳೆ ಜೆಸಿಬಿ ತಂದು ಗುಡ್ಡ ಅಗೆದು ಟಿಪ್ಪರ್‌ಗಳಿಗೆ ಮಣ್ಣು ತುಂಬಿಸುವ ಕೆಲಸ ನಡೆಯುತ್ತಿದೆ. ಬೆಳಗಾಗುವಷ್ಟರಲ್ಲಿ ಗುಡ್ಡವೇ ಮಾಯವಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

- ಮತ್ತೊಂದು ಶಿರೂರು ಆಗುವ ಭಯ

ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ಸಂಭವಿಸಿದ ಭೂಕುಸಿತ ಘಟನೆ ಇನ್ನೂ ಹಸಿಯಾಗಿರುವಾಗ ಮೂಡಿಗೆರೆ–ಮಂಗಳೂರು ರಸ್ತೆಯಲ್ಲೂ ಇದೇ ರೀತಿ ಕುಸಿತ ಉಂಟಾಗುವ ಆತಂಕ ಎದುರಾಗಿದೆ ಎನ್ನುತ್ತಾರೆ ಸ್ಥಳೀಯರು. ‘ಶಿರೂರಿನಲ್ಲೂ ಅವೈಜ್ಞಾನಿಕವಾಗಿ ಗುಡ್ಡ ಬೆಗೆದು ರಸ್ತೆ ನಿರ್ಮಿಸಿದ್ದರಿಂದ ಭೂಕುಸಿತ ಉಂಟಾಗಿತ್ತು. ಇಲ್ಲಿ ಮಣ್ಣು ಸಾಗಿಸುವ ದಂಧೆಕೋರರಿಗೆ ಪರಿಸರ ಮತ್ತು ಸಾರ್ವಜನಿಕ ಹಿತಾಸಕ್ತಿ ಬಗ್ಗೆ ಗಮನ ಇಲ್ಲ. ಅಧಿಕಾರಿಗಳೂ ನಿರ್ಲಕ್ಷ್ಯ ಮಾಡಿದರೆ ಮಳೆಗಾಲದಲ್ಲಿ ಅಪಾಯ ಖಚಿತ’ ಎಂದು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.