ADVERTISEMENT

ಶೃಂಗೇರಿ: ಮರಳು, ಮಣ್ಣು ದಂಧೆ ಅವ್ಯಾಹತ

ಕಣ್ಮುಚ್ಚಿ ಕುಳಿತ ಆಡಳಿತ: ಸ್ಥಳೀಯರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 7:08 IST
Last Updated 29 ಜನವರಿ 2026, 7:08 IST
ಶೃಂಗೇರಿಯಲ್ಲಿ ಖಾಸಗಿ ಬಡಾವಣೆಗಳಿಗೆ ಮಣ್ಣು ಸುರಿಯುತ್ತಿರುವುದು
ಶೃಂಗೇರಿಯಲ್ಲಿ ಖಾಸಗಿ ಬಡಾವಣೆಗಳಿಗೆ ಮಣ್ಣು ಸುರಿಯುತ್ತಿರುವುದು   

ಶೃಂಗೇರಿ: ತಾಲ್ಲೂಕಿನಲ್ಲಿ ಅಕ್ರಮ ಮಣ್ಣು ಮತ್ತು ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಒಂದೆಡೆ ನದಿಯ ಒಡಲು ಬಗೆಯುತ್ತಿದ್ದರೆ, ಮತ್ತೊಂದೆಡೆ ನದಿಗೆ ಹೊಂದಿಕೊಂಡಿರುವ ಗದ್ದೆಗಳಿಗೆ ಮಣ್ಣು ಸುರಿದು ಲೇಔಟ್‌ಗಳನ್ನು ನಿರ್ಮಿಸಲಾಗುತ್ತಿದೆ.

ಈ ಹಿಂದೆ ತುಂಗಾ ನದಿಯಲ್ಲಿ 5 ಕಡೆ ಮರಳು ನಿಕ್ಷೇಪಗಳನ್ನು ಗುರುತಿಸಲಾಗಿತ್ತು. 2017ರಲ್ಲಿ ಜಿ. ಸತ್ಯವತಿ ಅವರು ಜಿಲ್ಲಾಧಿಕಾರಿಯಾಗಿದ್ದಾಗ ಟೆಂಡರ್ ಕರೆದು ಮಣ್ಣು ಮತ್ತು ಮರಳು ಸಾಗಣೆಗೆ ಪರವಾನಿಗೆ ನೀಡಲಾಗುತ್ತಿತ್ತು. ಆದರೆ, ಈ ವ್ಯವಸ್ಥೆ ಈಗ ಇಲ್ಲವಾಗಿದೆ. ಇದರಿಂದಾಗಿ ಮರಳು ಸಾಗಣೆ ಅಕ್ರಮ ವ್ಯವಹಾರವಾಗಿ ಮಾಫಿಯಾ ರೂಪ ಪಡೆದಿದೆ ಎನ್ನುತ್ತಾರೆ ಸ್ಥಳೀಯರು.

ನದಿಯಿಂದ ಮರಳು ಬಗೆಯುತ್ತಿದ್ದರೆ, ನದಿಯ ಪಕ್ಕದ ಗದ್ದೆಗಳಿಗೆ ಮಣ್ಣು ತುಂಬಿ ಲೇಔಟ್ ನಿರ್ಮಿಸುವ ಕಾರ್ಯವೂ ಎಗ್ಗಿಲ್ಲದೆ ಸಾಗಿದೆ. ಪ್ರತಿದಿನ ನೂರಾರು ಲಾರಿಗಳು ಓಡಾಡುತ್ತಿದ್ದು, ಇವುಗಳಲ್ಲಿ ಮರಳು ಮತ್ತು ಮಣ್ಣು ಸಾಗಿಸುವ ಲಾರಿಗಳೇ ಹೆಚ್ಚು. ಇದರಿಂದ ರಸ್ತೆಗಳು ಕೂಡ ಹಾಳಾಗುವ ಆತಂಕ ಜನರಲ್ಲಿದೆ.

ADVERTISEMENT

ಕಂದಾಯ ಇಲಾಖೆಯಾಗಲಿ, ಪೊಲೀಸ್ ಇಲಾಖೆಯಾಗಲಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯಾಗಲಿ, ಲೋಕೋಪಯೋಗಿ ಇಲಾಖೆ ಸೇರಿ ಯಾವ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲೂ ಆಕ್ರೋಶ ವ್ಯಕ್ತವಾಗುತ್ತಿದೆ.

ಶೃಂಗೇರಿ ಪ್ರವಾಸಿ ಸ್ಥಳವಾಗಿದ್ದು, ಪಟ್ಟಣ ಮತ್ತು ಸುತ್ತಮುತ್ತಲ ಜಾಗಕ್ಕೆ ದಿನದಿಂದ ದಿನಕ್ಕೆ ಬೆಲೆ ಹೆಚ್ಚಾಗುತ್ತಿದೆ. ಕೃಷಿ ಭೂಮಿ ಖರೀದಿಸಿ ಲೇಔಟ್ ನಿರ್ಮಿಸುವುದು ಹೆಚ್ಚಾಗಿದೆ. ಕೆಲವೆಡೆ ತುಂಗಾ ನದಿಯ ದಂಡೆಯಲ್ಲಿನ ಖಾಸಗಿ ಗದ್ದೆಗಳಿಗೆ ಮಣ್ಣು ತುಂಬಿಸಿ ಸಮ ಮಾಡಲಾಗುತ್ತಿದೆ.

ಮಳೆ ಹೆಚ್ಚಾದಾಗ ಪ್ರವಾಹ ಈ ಗದ್ದೆಗಳನ್ನೂ ಆವರಿಸಿ ಹರಿದು ಹೋಗುತ್ತದೆ. ಮಣ್ಣು ತುಂಬಿಸುತ್ತಿರುವುದರಿಂದ ಭಾರಿ ಮಳೆಯ ಸಂದರ್ಭದಲ್ಲಿ ನದಿಯ ದಿಕ್ಕು ಬದಲಾಗಿ ಊರಿಗೆ ನೀರು ನುಗ್ಗುವ ಸಾಧ್ಯತೆ ಇದೆ ಎಂಬುದು ನಿವಾಸಿಗಳ ಆತಂಕ.

ಸರ್ಕಾರದ ಬೊಕ್ಕಸಕ್ಕೆ ನಷ್ಟ: ಒಂದು ಪ್ರದೇಶದಿಂದ ಮಣ್ಣು ತೆಗೆಯುವಾಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪರವಾನಗಿ ಪಡೆದುಕೊಳ್ಳಬೇಕು. ಸರ್ಕಾರಕ್ಕೆ ರಾಯಧನ ‍ಪಡೆದು ಜಿಪಿಎಸ್ ಅಳವಡಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಾಗಿಸಬೇಕು ಎಂಬ ಷರತ್ತು ವಿಧಿಸಬೇಕು. ಆದರೆ, ಈ ಯಾವುದೇ ಕಾನೂನು ಪಾಲನೆಯಾಗದೆ ಸರ್ಕಾರದ ಬೊಕ್ಕಸಕ್ಕೂ ನಷ್ಟವಾಗುತ್ತಿದೆ. ಅಕ್ರಮವಾಗಿ ಮರಳು ಮತ್ತು ಮಣ್ಣು ಸಾಗಣೆಗೆ ಕಡಿವಾಣ ಹಾಕಬೇಕು. ರಸ್ತೆ ಮತ್ತು ನದಿಯ ಒಡಲನ್ನು ರಕ್ಷಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

ತನಿಖಾ ತಂಡ ರಚನೆಗೆ ಒತ್ತಾಯ

ಮಣ್ಣು ಮತ್ತು ಮರಳು ಸಾಗಣೆ ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲೆಡೆ ದಂಧೆಯಾಗಿ ನಡೆಯುತ್ತಿದೆ. ಇದರಿಂದ ಪರಿಸರಕ್ಕೆ ನೇರವಾಗಿ ಹಾನಿಯಾಗುತ್ತಿದೆ ಎಂದು ಬಿಜೆಪಿ ಮುಖಂಡ ಡಿ.ಎನ್. ಜೀವರಾಜ್ ಆರೋಪಿಸಿದರು. ‘ಈ ಅವ್ಯವಹಾರದಲ್ಲಿ ಜನಪ್ರತಿನಿಧಿಗಳು ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ನೇರವಾಗಿ ಭಾಗಿಯಾಗಿದ್ದಾರೆ. ಪ್ರಕರಣ ದಾಖಲು ಮಾಡಬೇಕಾದವರೇ ದಂಧೆಯಲ್ಲಿ ನೇರವಾಗಿ ಇಳಿದಿದ್ದಾರೆ. ಉನ್ನತ ಮಟ್ಟದ ತನಿಖೆಗೆ ರಾಜ್ಯ ಸರ್ಕಾರ ತನಿಖಾ ತಂಡ ರಚನೆ ಮಾಡಬೇಕು. ಆಗ ಎಲ್ಲರೂ ಸಿಕ್ಕಿ ಬೀಳುತ್ತಾರೆ’ ಎಂದು ಹೇಳಿದರು.

ರೈತರಿಗೆ ತೊಂದರೆ; ದಂಧೆಕೋರರಿಗೆ ಸಹಕಾರ

ಸಣ್ಣ ರೈತರು ಕೃಷಿಗಾಗಿ ಮಣ್ಣು ತೆಗೆದು ಅಡಿಕೆ ಕಾಳುಮೆಣಸು ಕಾಫಿ ಬೆಳೆಗೆ ಹಾಕಿದರೆ ಪೊಲೀಸ್ ಮತ್ತು ಕಂದಾಯ ಅಧಿಕಾರಿಗಳು ತೊಂದರೆ ನೀಡಿ ಪ್ರಕರಣ ದಾಖಲಿಸುತ್ತಾರೆ ಎಂದು ಚಿಕ್ಕಮಗಳೂರು ಉಪವಿಭಾಗ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ಸಮಿತಿ ಸದಸ್ಯ ಕೆ.ಎಂ. ರಾಮಣ್ಣ ಹೇಳಿದರು. ದಂಧೆಕೋರರು ರಾಜಾರೋಷವಾಗಿ ಹಗಲಿನಲ್ಲಿ ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಪರೋಕ್ಷವಾಗಿ ಸಹಕಾರ ನೀಡುತ್ತಿದ್ದಾರೆ ಎಂದು ದೂರಿದರು.

ಮಣ್ಣು ಮತ್ತು ಮರಳು ಸಾಗಣೆಯ ಚಿತ್ರ ಮತ್ತು ವಿಡಿಯೊ ಸಿಕ್ಕಿದೆ. ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು
–ಎನ್.ಎಂ. ನಾಗರಾಜ್ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.